ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ಪಡೆ ಚಲಿಸುವ ಮಾರ್ಗದಿಂದ ಸುಮಾರು 300 ಮೀಟರ್ ದೂರದಲ್ಲಿ ಮೇಖ್ರಿ ಸರ್ಕಲ್ ಬಳಿ ಚೊಂಬು ತೋರಿಸಿ ಪ್ರತಿಭಟನೆ ನಡೆಸಲು ಯತ್ನಿಸಿದ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಸೇರಿದಂತೆ ಇಬ್ಬರನ್ನು ಶನಿವಾರ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.
ಅರಮನೆ ಮೈದಾನದಲ್ಲಿ ಪ್ರಧಾನಿ ಮೋದಿ ಅವರು ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲು ನಗರಕ್ಕೆ ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ರಾಜ್ಯ ಪೊಲೀಸರಿಂದ ಭದ್ರತಾ ಉಲ್ಲಂಘನೆಯಾಗಿದೆ ಎಂದು ಆಕ್ರೋಶ ಹೊರ ಹಾಕಿದೆ. ಪೊಲೀಸರು ಯಾವುದೇ ರೀತಿಯ ಭದ್ರತಾ ಉಲ್ಲಂಘನೆಯಾಗಿಲ್ಲ ಎಂದು ಹೇಳಿದ್ದಾರೆ.
ಸಭೆಯ ನಂತರ ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ತೆರಳಬೇಕಿದ್ದ ಮಾರ್ಗದ ಸಮೀಪವಿರುವ ಸಬ್ ರೋಡ್ ನಲ್ಲಿ ಖಾಲಿ ‘ಚೊಂಬು’ ಹಿಡಿದು ಮೊಹಮ್ಮದ್ ಹ್ಯಾರಿಸ್ ನಲಪಾಡ್ ಪ್ರತಿಭಟನೆ ನಡೆಸಲು ಯತ್ನಿಸಿ ಘೋಷಣೆಗಳನ್ನು ಕೂಗಿದರು.
“ಇಬ್ಬರನ್ನು ಕಸ್ಟಡಿಗೆ ತೆಗೆದುಕೊಂಡಿದ್ದು, ಪ್ರಧಾನಿ ಬೆಂಗಾವಲು ಪಡೆ ಸಮೀಪಿಸುವುದಕ್ಕೆ ಮುಂಚಿತವಾಗಿ ಪ್ರತಿಭಟನೆ ನಡೆಸಲು ಪ್ರಯತ್ನಿಸಿದರು. ನಾವು ತತ್ ಕ್ಷಣ ಅವರನ್ನು ತಡೆದಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಂಗ್ರೆಸ್ ‘ಚೊಂಬು’ ಅಭಿಯಾನವನ್ನು ನಡೆಸುತ್ತಿದ್ದು, ಕರ್ನಾಟಕಕ್ಕೆ ಮೋದಿ ಸರಕಾರದ ಕೊಡುಗೆ ‘ಚೊಂಬು’ ಎಂದು ಕಾಂಗ್ರೆಸ್ ವ್ಯಂಗ್ಯ ಲೇಪಿತ ಜಾಹೀರಾತುಗಳನ್ನು ಪತ್ರಿಕೆಗಳಲ್ಲಿ ಪ್ರಚಾರ ನಡೆಸಿತ್ತು. ‘ಚೊಂಬು’ ಅರ್ಥ ಗ್ರಾಮ್ಯ ಭಾಷೆಯಲ್ಲಿ ವಂಚನೆ ಮತ್ತು ಶೂನ್ಯತೆಯನ್ನು ಸಂಕೇತಿಸುತ್ತದೆ.