ದಾವಣಗೆರೆ: ಕಾಂಗ್ರೆಸ್‌ಗೆ ಯುವ ಕಾರ್ಯಕರ್ತರೇ ದೊಡ್ಡ ಶಕ್ತಿಯಾಗಿದ್ದಾರೆ. ಪಕ್ಷದ ಅಭಿವೃದ್ಧಿಯಲ್ಲಿ ಯುವ ಕಾರ್ಯಕರ್ತರ ಕೊಡುಗೆ ಅಪಾರ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ತಿಳಿಸಿದರು.
ಶುಕ್ರವಾರ ತಡರಾತ್ರಿ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಡ್ಮಿನ್ ಮಹಬೂಬ್ ಬಾಷಾರವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ವಿಷಯ ಬಂದಾಗ ಯುವಕರ ಕೊಡುಗೆ ಅತ್ಯಮೂಲ್ಯ ವಾದದ್ದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸೃಷ್ಟಿಸಿರುವ ಅರಾಜಕತೆ ವಿರುದ್ಧ ಹೋರಾಡಲು ಯುವ ಕಾರ್ಯಕರ್ತರು ಇನ್ನೂ ಹೆಚ್ಚು ಉತ್ಸುಕರಾಗಿ ಭ್ರಷ್ಟ ಹಾಗೂ ಜನವಿರೋಧಿ ಸರ್ಕಾರ ಕಿತ್ತೂಗೆಯುವವರೆಗೂ ವಿರಮಿಸದೆ ಕಾರ್ಯ ಪ್ರವೃತ್ತರಾಗಬೇಕಾಗಿದೆ ಎಂದರು.
ರಾಜ್ಯ ಕಂಡ ಅತೀ ಭ್ರಷ್ಟ ಹಾಗೂ ಕೋಮುದ್ವೇಷ ಸಾಧಿಸುವ ಸರ್ಕಾರ ಯಾವುದಾದರೂ ಇದ್ದರೆ ಅದು ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವಾಗಿದೆ. ಸರ್ಕಾರಕ್ಕೆ ಜನ ಹಿತಕ್ಕಿಂತ ತನ್ನ ಪಕ್ಷದ ಸಿದ್ಧಾಂತ ಹಾಗೂ ಭ್ರಷ್ಟರನ್ನು ರಕ್ಷಿಸುವ ಹೊಣೆಗಾರಿಕೆಯೇ ಮುಖ್ಯವಾಗಿದೆ. ಆದ್ದರಿಂದ ರಾಜ್ಯದಲ್ಲಿ ಇಷ್ಟೆಲ್ಲಾ ಅನಾಹುತಗಳಾಗುತ್ತಿದ್ದರೂ ಸಹ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳು ಅಸಹಾಯಕರಂತೆ ವರ್ತಿಸುತ್ತಿದ್ದಾರೆ ಎಂದು ಹರಿಹಾಯ್ದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖೀಲ್ ಕೊಂಡಜ್ಜಿ ಮಾತನಾಡಿ, ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬರುವುದು ನಿಶ್ಚಯ. ಯುವ ಕಾಂಗ್ರೆಸ್ ಕಾರ್ಯಕರ್ತರು ಹಗಲಿರುಳೆನ್ನದೆ ಇನ್ನಷ್ಟು ಶ್ರಮವಹಿಸಬೇಕಾಗಿದೆ ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಮಾತನಾಡಿ, ರಾಜ್ಯ ಹಾಗೂ ಜಿಲ್ಲೆಯ ನಾಯಕರ ಕೈ ಬಲಪಡಿಸಲು ಶ್ರಮವಹಿಸಲು ಯುವ ಕಾಂಗ್ರೆಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಮಿರ್ನಲ್ ಹೆಬ್ಟಾಳ್ಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಚೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಾಗರ್, ರಂಜಿತ್, ನವೀನ್ ನಲವಾಡಿ, ಅವಿನಾಶ್, ವಿನಯ್ ಜೋಗಪ್ಪನವರ್, ರಿಹಾನ್, ಮೊಹಮ್ಮದ್ ಜಿಕ್ರಿಯಾ, ಲಿಯಾಖತ್ ಅಲಿ, ಸುರೇಶ್ ಜಾಧವ್, ಹರೀಶ್, ಫಜ್ಲೂರ್ ರಹಮಾನ್, ಸೈಯದ್ ತಾಜ್ ಇತರರು ಇದ್ದರು.