Advertisement
ಸುಳ್ಯ: ಮನೆ ಕಟ್ಟಿ ಕೊಟ್ಟಾಯಿತು; ನಮ್ಮ ಕೆಲಸ ಮುಗಿಯಿತು ಅನ್ನುವ ಮಂದಿ ಈ ಕಥೆ ಓದಲೆಬೇಕು. ಹದಿನೈದು ವರ್ಷಗಳ ಹಿಂದೆ ಬಡ ಕುಟುಂಬಕ್ಕೆ ಕಟ್ಟಿಕೊಟ್ಟಿದ್ದ ಮನೆ ಛಾವಣಿ ಕುಸಿಯುತ್ತಿದೆ ಎಂಬ ಸುದ್ದಿ ಸಿಕ್ಕಿದ ಕೂಡಲೇ ಧಾವಿಸಿದ ಯುವಕ ಮಂಡಲದ ಸದಸ್ಯರು, ಅದನ್ನು ದುರಸ್ತಿಪಡಿಸಿ ಕುಟುಂಬಕ್ಕೆ ನೆರವಾದ ಅಪರೂಪದ ಸುದ್ದಿಯಿದು. ಬೆಳ್ಳಾರೆ ಗ್ರಾಮದ ನೆಟ್ಟಾರು ಇಂದಿರಾನಗರದ ಪಾರ್ವತಿ ಕುಟುಂಬ ಕನಿಷ್ಟ ಮೂಲ ಸೌಕರ್ಯವಿಲ್ಲದೇ ಬಳಲುತ್ತಿತ್ತು. ಆಗ ನೆರವಿಗೆ ಮುಂದಾದದ್ದು ತಾಲೂಕಿನ ನೆಟ್ಟಾರು ಅಕ್ಷಯ ಯುವಕ ಮಂಡಲದ ಸದಸ್ಯರು. ಅನಾರೋಗ್ಯದಿಂದ ಬಳಲುತ್ತಿರುವ ತಾಯಿ, ಇಬ್ಬರು ಹೆಣ್ಣು ಮಕ್ಕಳಿರುವ ಈ ಕುಟುಂಬದ ಮನೆ ಛಾವಣಿ ಇನ್ನೇನೂ ಕುಸಿಯುವ ಹಂತಕ್ಕೆ ತಲುಪಿತ್ತು. ಇದನ್ನು ತಿಳಿದ ಹದಿನೈದು ವರ್ಷದ ಹಿಂದೆ ಮನೆ ಕಟ್ಟಿಕೊಟ್ಟಿದ್ದ ಯುವಕ ಮಂಡಲ ಮತ್ತೆ ನೆರವಿಗೆ ಧಾವಿಸಿ ದುರಸ್ತಿ ಮಾಡಲಾಯಿತು ಎಂದು ಹೇಳುತ್ತಾರೆ ಯುವಕ ಮಂಡಲದ ಸದಸ್ಯರಾದ ಭಾಸ್ಕರ, ಅಶೋಕ್ ಹಾಗೂ ಸ್ಥಳೀಯರಾದ ರಾಮಚಂದ್ರ.
ದಿ.ವೀರಪ್ಪ ಗೌಡ ಮತ್ತು ಪಾರ್ವತಿ ಕುಟುಂಬಕ್ಕೆ 2001ರಲ್ಲಿ ನೆಟ್ಟಾರು ಅಕ್ಷಯ ಯುವಕ ಮಂಡಲದ ಅಂದಿನ ಅಧ್ಯಕ್ಷರಾಗಿದ್ದ ದಿ.ಉಮೇಶ್ ಗೌಡ ಪರನೀರು ಮುಂದಾಳತ್ವದಲ್ಲಿ ಸುಮಾರು 60 ಸಾವಿರ ರೂ. ವೆಚ್ಚದಲ್ಲಿ ಎರಡು ಕೊಠಡಿಯ ಮನೆ ನಿರ್ಮಿಸಿಕೊಡಲಾಗಿತ್ತು. ಕೆಲ ತಿಂಗಳ ಹಿಂದೆ ಮನೆ ಛಾವಣಿ ಕುಸಿದು, ಮಳೆ ನೀರು ಸೋರುತ್ತಿದ್ದುದು ಗಮನಕ್ಕೆ ಬಂದಿತು. ಇದನ್ನು ಅರಿತ ಯುವಕ ಮಂಡಲ, ಎರಡು ದಿನದ ಹಿಂದೆ ತನ್ನ 30 ಸದಸ್ಯರು ಮತ್ತಿತರರ ನೆರವಿನಿಂದ ದುರಸ್ತಿ ಪಡಿಸಿಕೊಟ್ಟಿದೆ. ಸ್ಥಳೀಯರಾದ ರಾಮಕೃಷ್ಣ ಭಟ್ ಕುತ್ಯಾಡಿ, ಧ್ರುವ ಕುಮಾರ್ ಭಟ್ ಮೊಗಪ್ಪೆ, ಜನಾರ್ದನ ನೆಟ್ಟಾರು ಅವರು ಸಾಮಗ್ರಿ ನೀಡಿದ್ದಾರೆ ಎಂದು ಸ್ಮರಿಸಿಕೊಳ್ಳುತ್ತಾರೆ ಯುವಕ ಮಂಡಲದ ಪದಾಧಿಕಾರಿಗಳು.
ಹಕ್ಕು ಪತ್ರ ಇಲ್ಲ..!
ಒಂದು ವರ್ಷದ ಹಿಂದೆ ಮನೆ ಯಜಮಾನ ವೀರಪ್ಪ ಗೌಡ ಅವರು ಮೃತಪಟ್ಟಿದ್ದಾರೆ. ಅನಂತರ ಪಾರ್ವತಿ ಕುಟುಂಬಕ್ಕೆ ಹೆಣ್ಣು ಮಕ್ಕಳು ಬೀಡಿ ಕಟ್ಟಿ ಬರುವ ಆದಾಯವೇ ಜೀವನ ನಿರ್ವಹಣೆಗೆ ದಾರಿ. ಅಚ್ಚರಿ ಸಂಗತಿ ಅಂದರೆ ಏಳೆಂಟು ಸೆಂಟ್ಸ್ ಜಾಗ ಇರುವ ಈ ಕುಟುಂಬಕ್ಕೆ ಹಕ್ಕು ಪತ್ರ ಸಿಕ್ಕಿಲ್ಲ. 94 ಸಿಯಲ್ಲಿ ಅರ್ಜಿ ಸಲ್ಲಿಸಿದ್ದರೂ, ಗೋಮಾಳ ಎಂಬ ಕಾರಣ ನೀಡಿ ಅರ್ಜಿ ತಿರಸ್ಕರಿಸಲಾಗುತ್ತಿದೆ ಎನ್ನಲಾಗಿದೆ. ಐವತ್ತು ವರ್ಷದ ಪಾರ್ವತಿ ಅವರಿಗೆ ಆರೋಗ್ಯ ಕೈ ಕೊಟ್ಟಿದೆ. ಇಬ್ಬರು ಹೆಣ್ಣು ಮಕ್ಕಳ ದುಡಿಮೆಯಿಂದ ಜೀವನ ಸಾಗಿಸಬೇಕಾದ ಸ್ಥಿತಿ ಇದೆ.
Related Articles
ತೀರಾ ಬಡತನದ ಕುಟುಂಬವದು. ಮನೆ ಯಜಮಾನ ವರ್ಷದ ಹಿಂದೆ ತೀರಿಕೊಂಡಿದ್ದಾರೆ. ಹದಿನೈದು ವರ್ಷಗಳ ಹಿಂದೆ ನಮ್ಮ ಸಂಘವೇ ಕಟ್ಟಿದ ಮನೆ ಛಾವಣಿ ಕುಸಿದ ವಿಷಯ ತಿಳಿದು ಸ್ಪಂದಿಸಿದ್ದೇವೆ. ಇನ್ನೂ ಹೆಚ್ಚಿನ ಸಹಕಾರ ನೀಡಲು ಯೋಚಿಸಿದ್ದೇವೆ.
– ಪ್ರವೀಣ್ ಚಾವಡಿಬಾಗಿಲು, ಅಧ್ಯಕ್ಷ ಅಕ್ಷಯ ಯುವಕ ಮಂಡಲ
Advertisement
ಉಪಕಾರ ಮರೆಯುವುದಿಲ್ಲಹದಿನೈದು ವರ್ಷದ ಹಿಂದೆ ಮನೆ ಕಟ್ಟಿಕೊಟ್ಟ ಸಂಘ, ಈಗ ಮನೆ ಛಾವಣಿ ಕುಸಿದಾಗ ನೆರವಿಗೆ ಬಂದಿದೆ. ಇವರ ಉಪಕಾರ ಎಂದಿಗೂ ಮರೆಯಲ್ಲ. ನಾವು ಅಕ್ಷಯ ಯುವಕ ಮಂಡಲಕ್ಕೆ ಆಭಾರಿಯಾಗಿದ್ದೇವೆ.
– ಪಾರ್ವತಿ, ಮನೆಯ ಯಜಮಾನಿ – ಕಿರಣ್ ಪ್ರಸಾದ್ ಕುಂಡಡ್ಕ