Advertisement
ಮದುವೆಯಾದ ಕೂಡಲೇ ಹೆಣ್ಣುಮಕ್ಕಳು ತಮ್ಮ ಹೆಸರಿನ ಉತ್ತರಾರ್ಧವಾಗಿ ಗಂಡನ ಹೆಸರನ್ನು ಅಭಿಮಾನದಿಂದ ಬಳಸಿಕೊಳ್ಳುತ್ತಾರೆ. ಇದನ್ನು ಬಹಳ ಸಹಜ ಎಂಬಂತೆ ಸ್ವೀಕರಿಸುತ್ತೇವೆ. ಬದುಕಿಡೀ ಸ್ತ್ರೀವಾದ, ಸಮಾಜವಾದ ಎಂದೆಲ್ಲ ಮಾತನಾಡುವ ತರುಣಿಯರು ಕೂಡ ಮದುವೆಯಾದ ಮರುದಿನವೇ ತಮ್ಮ ಹೆಸರಿನ ಬಳಿಕ ಗಂಡನ ಹೆಸರನ್ನು ಹೆಮ್ಮೆಯಿಂದ ಜೋಡಿಸಿಬಿಡುತ್ತಾರೆ. ಮದುವೆಯಾದ ಬಳಿಕ ಗಂಡ ಮತ್ತು ಹೆಂಡತಿ ಸಾಮರಸ್ಯದಿಂದ ಇರಬೇಕಾದದ್ದು ಅಗತ್ಯವೇ. ಹಾಗಾಗಿ, ತಾವಿಬ್ಬರೂ ಒಂದಾಗಿದ್ದೇವೆ ಎಂಬ ಸೂಚನಾರ್ಥವಾಗಿ ಗಂಡನ ಹೆಸರನ್ನು ಜೊತೆಗೆ ಇರಿಸಿಕೊಳ್ಳುವುದು ವಾಡಿಕೆ. ಕೆಲವೊಮ್ಮೆ ಗಂಡಂದಿರೇ ತಮ್ಮ ಹೆಂಡತಿಯರು ಅವರ ಹೆಸರಿನ ಜೊತೆಗೆ ತಮ್ಮ ಹೆಸರನ್ನು ಹೊಂದಿಸಬೇಕೆಂಬ ಒತ್ತಾಸೆಯನ್ನು ಹೊಂದಿರುತ್ತಾರೆ. ಅಂಥ ಸಂದರ್ಭದಲ್ಲಿ ಅನಿವಾರ್ಯವಾಗಿ ವಿವಾಹಿತ ಹೆಣ್ಣು “ಹೊಸಹೆಸರಿನ’ ಸಂಪ್ರದಾಯಕ್ಕೆ ಶರಣಾಗಬೇಕಾಗುತ್ತದೆ. ಕೆಲವು ಸಭೆಗಳಲ್ಲಿ ಮಹಿಳೆಯರ ಹೆಸರನ್ನು ಅವರ ಗಂಡನ ಹೆಸರಿನೊಂದಿಗೆ- ಶ್ರೀಮತಿ ವಿಶ್ವನಾಥ್, ಶ್ರೀಮತಿ ಗಣೇಶ್… ಹೀಗೆ ಸಂಬೋಧಿಸುತ್ತಾರೆ. ಮಹಿಳೆಯ ಹೆಸರಿಗೆ ಅಸ್ತಿತ್ವವೇ ಇಲ್ಲ !
Related Articles
Advertisement
ಮದುವೆಯಾದ ಕೂಡಲೇ ಹೆಣ್ಣುಮಕ್ಕಳ ಹೆಸರು ಬದಲಾಯಿಸುವ ಸಂಪ್ರದಾಯ ಇದೆ. ಆಕೆ, ಗೋತ್ರವನ್ನು ಕಡಿದುಕೊಂಡು ಹೊಸ ಗೋತ್ರವನ್ನು ಪಡೆಯುತ್ತಾಳೆ. ಇದು, ಅವಳು ತವರುಮನೆಯಿಂದ ಸಂಬಂಧ ಕಡಿದುಕೊಂಡ ಸೂಚನೆಯೂ ಹೌದು. ಇದು ಪಿತೃಪ್ರಧಾನ ಸಮಾಜದಲ್ಲಿರುವ ಸಂಪ್ರದಾಯ. ಮಾತೃಪ್ರಧಾನ ಸಮಾಜದಲ್ಲಿ “ಕೊಟ್ಟ ಹೆಣ್ಣು ಕುಲದಿಂದ ಹೊರಗೆ’ ಎಂಬ ಕಟ್ಟಳೆ ಇಲ್ಲ. ಆಕೆ ತವರುಮನೆಯೊಂದಿಗೆ ಸಂಬಂಧವನ್ನು ಮುಂದುವರಿಸಿರುತ್ತಾಳೆ. ಆದರೆ, “ಹೊಸಹೆಸರಿಡುವುದು’ ಆಧುನಿಕ ಕ್ರಮ. ಇದು ಪಿತೃಪ್ರಧಾನ ಸಂಪ್ರದಾಯದಲ್ಲೂ ಇದೆ, ಮಾತೃಪ್ರಧಾನ ಸಂಪ್ರದಾಯದಲ್ಲೂ ಇದೆ.
ಸರಕಾರಿ ವ್ಯವಹಾರದ ಅರ್ಜಿ ಫಾರಂಗಳಲ್ಲಿಯೂ ವಿವರಗಳನ್ನು ತುಂಬುವಾಗ ಅಭ್ಯರ್ಥಿ “ಮೇಲ್’ ಆಗಿದ್ದರೆ ಅಪ್ಪನ ಹೆಸರನ್ನು ಬರೆಯಲು ಸೂಚಿಸಲಾಗುತ್ತದೆ. ಅರ್ಜಿ ತುಂಬುವವರು “ಫೀಮೇಲ್’ ಆಗಿದ್ದರೆ ಅವರು ಅಪ್ಪನ ಅಥವಾ ಗಂಡನ ಹೆಸರನ್ನು ಬರೆಯಬಹುದು. ಅಭ್ಯರ್ಥಿಯಾದವನು ಗುರುತಿಗಾಗಿ ತನ್ನ ಹೆಂಡತಿಯ ಹೆಸರನ್ನು , ತನ್ನ ಅಮ್ಮನ ಹೆಸರನ್ನು ಬರೆಯುವ ಅವಕಾಶಗಳಿಲ್ಲ , ಇದ್ದರೂ ಬಹಳ ಅಪರೂಪ.
“ದಂಪತಿ’ ಎಂಬ ಪದವಿದೆ. ಜಾಯಾಪತಿ ಎಂಬುದರ ಸಂಕ್ಷಿಪ್ತ ರೂಪವಿದು. ಜಾಯೆ ಎಂದರೆ ಹೆಂಡತಿ. ಪತಿ ಎಂದರೆ ಗಂಡ. “ಗಂಡಹೆಂಡತಿ’ ಎಂದು ವಾಡಿಕೆಯಲ್ಲಿ ಹೇಳುವ ಕ್ರಮವಿದ್ದರೂ ಸಾಂಪ್ರದಾಯಿಕವಾಗಿ ಅದು “ದಂಪತಿ’. ಆದರೆ, ಹೆಂಡತಿ ಮೊದಲು, ಬಳಿಕ ಗಂಡ. ನಮ್ಮ ದೇವರ ಹೆಸರುಗಳಲ್ಲಿ ನೋಡಿ ಲಕ್ಷ್ಮೀ-ನಾರಾಯಣ ಎನ್ನುತ್ತೇವೆ. ಅದು ವಿಶೇಷವಾಗಿ ವಿಷ್ಣುವನ್ನು ಸಂಬೋಧಿಸುವ ಹೆಸರೇ. ಬ್ರಹ್ಮನನ್ನು “ವಾಣೀ-ರಮಣ’ ಎಂದು ಕರೆಯುವ ಪದ್ಧತಿ ಇದೆ. ಪ್ರೇಮಿಗಳಾದ ಕೃಷ್ಣ ಮತ್ತು ರಾಧೆಯರಲ್ಲಿ ರಾಧೆಯ ಹೆಸರು ಮೊದಲು, ಕೃಷ್ಣನ ಹೆಸರು ಅನಂತರ. ರಾಧಾ-ಕೃಷ್ಣ ಎಂಬುದು ಜೋಡಿಯ ಹೆಸರು. ಅದು ರಾಧೆಯನ್ನು ಕುರಿತ ಸಂಬೋಧನೆಯಂತೂ ಅಲ್ಲ. ಆದರೆ, ಕೃಷ್ಣನಿಗೆ “ರಾಧಾಕೃಷ್ಣ’ ಎಂದು ಕರೆದರೂ ಅಸಂಗತವೆನ್ನಿಸುವುದಿಲ್ಲ.
ರಾಮನನ್ನು ಕೊಂಡಾಡುವಾಗ ಅಯೋಧ್ಯೆ ರಾಮ, ಕೋದಂಡರಾಮ ಎಂಬ ಹೆಸರುಗಳ ಜೊತೆಗೆ ಜಾನಕೀ-ರಾಮ ಎಂದೂ ಹೇಳುತ್ತೇವೆ. ರಾಮನನ್ನು ಅವನ ಹೆಂಡತಿಯ ಹೆಸರಿನ ಜೊತೆಗೆ ಗುರುತಿಸಿಕೊಳ್ಳುತ್ತೇವೆ. ಸೀತೆಯನ್ನು ಮಾತ್ರ ವೈದೇಹಿ, ಮೈಥಿಲಿ, ಜಾನಕಿ ಎಂದು ಅವಳ ತವರುಮನೆಯ ಸಂಬಂಧಿತ ಹೆಸರುಗಳಿಂದಲೇ ಕರೆಯುತ್ತೇವೆ.
ಉಪನಿಷತ್ತಿನ ಜಾಬಾಲನಾಗಲಿ, ಐತರೇಯನಾಗಲಿ ತಾಯಿಯ ಹೆಸರಿನಿಂದಲೇ ಗುರುತಿಸಲ್ಪಟ್ಟದ್ದಲ್ಲವೆ?ಹೆಸರಿನಲ್ಲೇನಿದೆ ಎಂದು ಕೇಳಬಹುದು. ಹೆಸರು ಎಷ್ಟು ಸುಂದರವಾದರೂ ತನಗೆ ತಾನೇ ಕರೆದುಕೊಳ್ಳುವುದಕ್ಕಾಗುವುದಿಲ್ಲ. ತನ್ನ ಹೆಸರು ಬೇರೆಯವರು ಸಂಬೋಧಿಸಲಿಕ್ಕಾಗಿಯೇ ಇರುವುದು! “ಹೆಸರು ಗಳಿಸುವುದು’ ಎಂದರೆ ಬೇರೆಯವರು ತನ್ನ ಹೆಸರನ್ನು ಹೆಚ್ಚು ಹೆಚ್ಚು ಉಚ್ಚರಿಸುವಂತೆ ಮಾಡುವುದು ಎಂದೇ ಅರ್ಥ. ಸಾಮಾನ್ಯವಾಗಿ, ಗಂಡನ ಹೆಸರನ್ನು ಹೆಂಡತಿ ಉಚ್ಚರಿಸುವ ಕ್ರಮವಿಲ್ಲ. “ಗೌರವಸೂಚಕ’ ಎಂಬರ್ಥದಲ್ಲಿ ಅಲ್ಲ ; ಹೆಂಡತಿಯ ಹೆಸರನ್ನು ತನ್ನ ಹೆಸರಿನ ಭಾಗವೇ ಆಗಿದೆ ಎಂಬ ಕಾರಣಕ್ಕಾಗಿ. ಅದೇ ರೀತಿ ಹೆಂಡತಿಯ ಹೆಸರನ್ನೂ ಗಂಡ ಕರೆಯುವುದು ಸರಿಯಲ್ಲ. ಯಾಕೆಂದರೆ, ಅವಳು ತನ್ನ ಬದುಕಿನ ಭಾಗವಾಗುವುದರೊಂದಿಗೆ ಅವಳ ಹೆಸರು ಕೂಡ ತನ್ನದೇ ಆಗಿದೆ ಎಂಬ ಭಾವದಲ್ಲಿ ಅದನ್ನು ಉಚ್ಚರಿಸದೆ ಉಳಿಯುವುದು. ಇದೊಂದು ಬಗೆಯ ಶಿಷ್ಟಾಚಾರ. ಗಂಡನನ್ನು “ರೀ, ಇವರೇ’ ಎಂದು ಕರೆದರೆ, ಹೆಂಡತಿಯನ್ನು ಗಂಡ ಕರೆಯುವುದೂ “ಲೇ, ಇವಳೇ’ ಎಂದೇ. ಹಾಗೆ ಕರೆಯುವುದೆಂದರೆ, ಹೆಸರನ್ನು ಸಂಬೋಧಿಸದೆ ಅಗೌರವಿಸುವುದು ಎಂದರ್ಥಲ್ಲ. ಹಾಗೆ ಹೆಸರು ಕರೆಯದಿರುವುದೇ ಚೆಂದ. ಕಕ್ಕುಲಾತಿಯಿಂದ ಹೆಂಗಸರು “ನಮ್ಮ ಯಜಮಾನರು’, “ನಮ್ಮ ಮನೆಯವರು’ ಎನ್ನುತ್ತಾರೆ. ಅದೇ ರೀತಿ ಗಂಡಸರು, “ನಮ್ಮ ಮನೆಯವಳು’, “ನಮ್ಮ ಯಜಮಾನಿ¤’ ಎಂದೆಲ್ಲ ಸೂಚಿಸುವುದಿದೆೆ. ಇವತ್ತು ಕಾಲವೆಷ್ಟು ಮುಂದುವರಿದಿದೆಯೆಂದರೆ ಪರಸ್ಪರ ಹೆಸರು ಹಿಡಿದು ಕರೆಯುತ್ತಾರೆ. ಕೆಲವರು ಅರ್ಧ ಹೆಸರಿನಿಂದ, ಅಡ್ಡಹೆಸರಿನಿಂದ ಸಂಬೋಧಿಸುತ್ತಾರೆ. ಪರಸ್ಪರ ಸಮಾನಭಾವದಿಂದ ಎಲ್ಲವನ್ನೂ ಸ್ವೀಕರಿಸುತ್ತಿರುವ ಈ ದಿನಗಳಲ್ಲಿ ಹೀಗೆ ಪರಸ್ಪರರ ಹೆಸರು ಹಿಡಿದು ಕರೆಯುವುದು ಅಸಂಬದ್ಧವಾಗಿ ತೋರುವುದಿಲ್ಲ. ಆದರೆ, ಸಮಾನಭಾವದಿಂದ ಇದ್ದೇವೆ ಎಂದು ಭಾವಿಸುವ ಕೆಲವು ಸಂಸಾರಗಳು ಬಾಳುವುದು ಸೀಮಿತ ದಿನಗಳು ಮಾತ್ರ! ಮದುವೆಯಾದ ಮರುದಿನವೇ ಬಹಳ ಅಭಿಮಾನದಿಂದ ತನ್ನ ಗಂಡನ ಹೆಸರನ್ನು ತನ್ನ ಹೆಸರಿನ ಜೊತೆಗೆ ಸೇರಿಸಿಕೊಂಡವರ ಸಂಸಾರದಲ್ಲಿಯೂ ವಿಘಟನೆ ನಡೆಯವುದಿಲ್ಲ ಎಂದೇನಿಲ್ಲ.
“ಪರಸ್ಪರ’ ಎಂಬುದು ಬಹಳ ಸುಂದರವಾದ ಪದ. ಅದು ಸುಖ ಸಂಸಾರಕ್ಕೆ ಅತ್ಯಂತ ಆವಶ್ಯಕವಾದ ಪದ. ಹೆಸರು ಬದಲಾಯಿಸುವುದರಿಂದಾಗಲಿ, ಹೆಸರು ಬದಲಾಯಿಸದೇ ಇರುವುದರಿಂದಾಗಲಿ ಏನೂ ಸಾಧ್ಯವಾಗುವುದಿಲ್ಲ. “ಪರಸ್ಪರ’ ಚೆನ್ನಾಗಿದ್ದರೆ ಮಾತ್ರ ಎಲ್ಲವೂ ಸುಖ. ಮೈತ್ರೇಯಿ ಪವಾರ್