ಇರದ ಪ್ರೀತಿಗಿಂತಲೂ ಜೊತೆಗಿರುವ ಸ್ನೇಹವೇ ಚಂದ. ಆಹಾ! ಎಷ್ಟು ಚಂದ ಅಲ್ವಾ ಈ ಮಾತು? ನಮ್ಮಲ್ಲಿ ಇಲ್ಲದಿರುವ ವಸ್ತು ಅಥವಾ ವಿಷಯದ ಬಗ್ಗೆಯೇ ನಾವು ಸದಾ ಯೋಚಿಸುತ್ತಾ ನಮ್ಮೆದುರಿಗಿರುವ ಖುಷಿಯನ್ನು ಮರೆತುಬಿಡುತ್ತೇವೆ. ಗೊತ್ತಾ ನಿಂಗೆ? ನೀನು ನನ್ನ ಜೀವನಕ್ಕೆ ಕಾಲಿಡುವ ಮುನ್ನ ನಾನು ಕೇವಲ ಹೂವಾಗಿದ್ದೆ. ಅದಕ್ಕೆ ಪರಿಮಳ ತಂದು, ಆ ಹೂವು ದೇವರ ಗುಡಿ ಸೇರುವಂತೆ ಮಾಡಿದವನು ನೀನು.
ಮಾಯಾವಿಯಂತೆ ಬಂದು ನನ್ನ ಜೀವನವನ್ನು ಸ್ನೇಹದಿಂದ ತುಂಬಿದೆ. ನಿನ್ನ ಜೊತೆ ಕಳೆದ ಕೆಲವು ಘಳಿಗೆಗಳಿಗಿಂತಲೂ, ಜೊತೆಗಿದ್ದ ಸಮಯದಲ್ಲಿ ನೀನು ಆಡಿದ್ದ ಮುದ್ದು ಮಾತುಗಳೇ ಚಂದ. “ನಿನ್ನನ್ನು ಪ್ರೀತಿಸಿ, ಕಳೆದುಕೊಳ್ಳುವುದಕ್ಕಿಂತ ಲೈಫ್ ಲಾಂಗ್ ಹೀಗೆ ನನ್ನ ಬೆಸ್ಟ್ ಫ್ರೆಂಡ್ ಆಗಿರು’ ಎಂದು ಈಗ ತಾನೇ ನೀನು ನನ್ನ ಕಿವಿಯಲ್ಲಿ ಹೇಳಿದಂತೆ ಭಾಸವಾಗುತ್ತಿದೆ. ಪ್ರತಿಯೊಬ್ಬ ಪುರುಷನ ಪ್ರಗತಿಯ ಹಿಂದೆ ಒಬ್ಬ ಮಹಿಳೆಯಿರುತ್ತಾಳೆಂಬ ಮಾತಿದೆ.
ಸ್ನೇಹಿತೆಯಾದ ನನಗೆ ನೀನು ಈ ಸ್ಥಾನ ನೀಡಿದ್ದು ತುಂಬಾ ಸಂತೋಷದ ವಿಷಯ. ಪಕ್ಕದಲ್ಲಿ ಅಮೃತವಿರುವಾಗ ದೂರದಲ್ಲಿರುವ ಸಕ್ಕರೆಯ ಮೇಲೆ ಆಸೆ ಪಡಬಾರದು ಎಂಬುದರ ಅರಿವು ಮಾಡಿಸಿದೆ ನೀನು. ಖಾಲಿಯಾಗಿದ್ದ ಬಿಳಿ ಹಾಳೆಗೆ ಕಾಮನಬಿಲ್ಲಿನಂತೆ ರಂಗನ್ನು ತುಂಬಿಸಿದ ನಿನ್ನ ಸ್ನೇಹಕ್ಕೆ ಹೇಗೆ ಧನ್ಯವಾದ ಹೇಳುವುದೋ ಗೊತ್ತಾಗುತ್ತಿಲ್ಲ.
ನನ್ನ ಬಗ್ಗೆ ನನಗೆ ಅರಿವಿಲ್ಲದ್ದನ್ನು ನೀನು ಗಮನಿಸಿ, ನನ್ನನ್ನು ಮೇಲಕ್ಕೆತ್ತಿದೆ. ನಾನು ತಪ್ಪು ಹೆಜ್ಜೆ ಇಟ್ಟಾಗ, ಸರಿಯಾದ ದಾರಿ ತೋರಿಸಿದೆ. ನನಗೆ ಭಯವಾದಾಗ “ಜೊತೆಯಲ್ಲಿ ನಾನಿಲ್ಲವೇ?’ ಎಂದು ಸಮಾಧಾನಿಸಿದೆ. ಜೀವನದ ಸುಖ- ದುಃಖದಲ್ಲಿ ಕೈ ಜೋಡಿಸಿದೆ. ನಾ ಎಡವಿ ಬೀಳುತ್ತಿದ್ದಾಗ ನೀ ಸಹಾಯ ಹಸ್ತ ಚಾಚಿದೆ.
ಈ ಜೀವನದಲ್ಲಿ ನಾ ಕಂಡ ಮುದ್ದು/ ಪೆದ್ದು ಗೆಳೆಯ ನೀನು. ನನ್ನ ಒಂದು ಮುಗುಳು ನಗೆಗೆ ನೀ ಎಷ್ಟು ಕಸರತ್ತು ಮಾಡುತ್ತಿದ್ದೆ ಅಂತ ನನಗೆ ಗೊತ್ತು. ನಿನ್ನ ಮನಸ್ಸಿನಲ್ಲಿ ಎಷ್ಟೇ ದುಃಖ, ನೋವಿದ್ದರೂ ಅದನ್ನು ಬದಿಗಿಟ್ಟು ನನ್ನೊಂದಿಗೆ ಸಂತೋಷವಾಗಿ ಇರುತ್ತಿದ್ದೆ ಎಂಬುದೂ ನನಗೆ ಗೊತ್ತು. ಕೆಲವೇ ದಿನಗಳಲ್ಲಿ ನಾವಿಬ್ಬರೂ ದೂರವಾಗಬಹುದು. ಆದರೆ, ಈ ನಮ್ಮ ಗೆಳೆತನ ನಾನಿರುವವರೆಗೂ ಹೀಗೇ ಇರಲಿ ಎಂಬುದಷ್ಟೇ ಆ ದೇವರಲ್ಲಿ ನನ್ನ ಪ್ರಾರ್ಥನೆ…
ಇಂತಿ… ರುಬಿನಾ ಅಂಜುಮ್