ಈ ಹಿಂದೆ ನಿನ್ನ ಜೊತೆ ಮಾತಾಡುವಾಗ, ನಿನ್ನ ಬಗ್ಗೆ ಒಂದು ಇಮೇಜ್ ಸೃಷ್ಟಿಯಾಗಿತ್ತಲ್ಲ, ಅದೇ ರೀತಿಯ ಮನುಷ್ಯ ನೀನು ಅಂತ ಭೇಟಿಯಾದ ಸ್ವಲ್ಪ ಹೊತ್ತಿಗೇ ತಿಳಿದು ಹೋಯ್ತು. ನೀನೊಬ್ಬ ಅಪರಿಚಿತ ಎಂಬ ಭಾವನೆಯೇ ಬರಲಿಲ್ಲ
ಸ್ನೇಹಿತನೇ,
ನಮ್ಮ ಲವ್ ಸ್ಟೋರಿ ಒಂಥರಾ ಸಿನಿಮಾ ಕಥೆಯೇ ಬಿಡು. ನೇರವಾಗಿ ನೋಡದೆಯೇ ಹೇಗೆ ಪ್ರೀತಿ ಹುಟ್ಟಿಕೊಂಡಿತು ಅಂತ ಇಬ್ಬರಿಗೂ ಗೊತ್ತಾಗಲೇ ಇಲ್ಲ. ಬರೀ ಚಾಟಿಂಗ್, ಫೋನ್ ಕಾಲ್ ಮುಖಾಂತರ ಪ್ರಾರಂಭವಾದ ಪ್ರೀತಿ ಇಷ್ಟೊಂದು ಗಾಢವಾಗುತ್ತದೆ ಅಂತ ಯಾರಿಗೆ ಗೊತ್ತಿತ್ತು ಹೇಳು?
ಮೊದಮೊದಲಿಗೆ ನೀನು ಸುಮ್ಮನೇ ಫ್ಲರ್ಟ್ ಮಾಡ್ತಾ ಇದ್ದೀಯ ಅಂದುಕೊಂಡಿದ್ದೆ. ಆವತ್ತು ನೀನು, “ನಿನ್ನನ್ನು ಭೇಟಿಯಾಗೋಕೆ ಬರ್ತೀನಿ’ ಅಂದಾಗ, “ನಿಜಾನಾ?’ ಎಂಬ ಉದ್ಗಾರ ತೆಗೆದಿದ್ದು ಅದಕ್ಕೇ. ನಿನ್ನ ಮೇಲೆ ಸಂಶಯ ಅನ್ನೋದಕ್ಕಿಂತಲೂ, ಬರೀ ಫೋನ್‌ನಲ್ಲಿ ಮಾತನಾಡಿದ ವ್ಯಕ್ತಿ ಎದುರಿಗೆ ಬರುತ್ತಿದ್ದಾನಲ್ಲ ಎಂಬ ಕುತೂಹಲದ ಆನಂದ. ಮೇಲಾಗಿ, ನಿನ್ನ ಮನಸ್ಸಿನಲ್ಲಿಯೂ ಇಷ್ಟು ಬೇಗ ಪ್ರೀತಿಯ ಹೂವು ಅರಳಿತಲ್ಲ ಅನ್ನೋ ಅಚ್ಚರಿ.
ಕೊನೆಗೂ ನಾವು ಭೇಟಿಯಾಗುವ ಆ ದಿನ ಬಂದೇ ಬಿಟ್ಟಿತು. ನಿನ್ನನ್ನು ನೋಡುವ ಹಂಬಲ, ತುಸು ನಾಚಿಕೆ, ಮುಜುಗರ, ಕುತೂಹಲ, ಭಯ…ಹೀಗೆ ಅವತ್ತು ಎಲ್ಲ ಭಾವನೆಗಳೂ ಒಟ್ಟೊಟ್ಟಿಗೇ ನನ್ನಲ್ಲಿ ಮೇಳೈಸಿದ್ದವು. ಸುಮಾರು ಒಂದು ಗಂಟೆ ನಿನಗಾಗಿ ಬಸ್ ಸ್ಟಾಪ್‌ನಲ್ಲಿ ಕಾಯುತ್ತಿದ್ದವಳಿಗೆ, ನೀನು ಬಾರದೇ ಹೋದರೆ ಎಂಬ ಅನುಮಾನ ಮೂಡಿ, ದಿಗಿಲಾಗಿದ್ದು ಸುಳ್ಳಲ್ಲ. ಸಮಯ ಕಳೆದಂತೆ, ನಿನ್ನ ಮೇಲೆ, ನಿನ್ನನ್ನು ನಂಬಿದ ನನ್ನ ಮೇಲೆ ಸಿಟ್ಟು ಕೂಡ ಬಂತು. ಆದರೆ, ನೀನು ಮೋಸ ಮಾಡಬಹುದು ಅಂತ ಮನಸ್ಯಾಕೋ ಒಪ್ಪಿಕೊಳ್ಳಲಿಲ್ಲ. ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿರಬಹುದು, ಹೊರಡುವಾಗ ಲೇಟ್ ಆಯೆ¤àನೋ ಅಂತೆಲ್ಲಾ ಸಮಾಧಾನ ಹೇಳಿಕೊಂಡೆ. ಪ್ರತಿ ಬಸ್ ಬಂದು ನಿಂತಾಗಲೂ ಈ ಬಸ್ಸಿನಿಂದ ಇಳಿಯಬಹುದಾ? ಆ ಬಸ್ಸಿನಿಂದ ಇಳಿಯಬಹುದಾ? ಎಂದು ಎಲ್ಲ ಬಸ್ಸುಗಳ ಬಾಗಿಲನ್ನೇ ನೋಡುತ್ತಿದ್ದೆ. ಆಗ ನೀನು ಫೋನಾಯಿಸಿ, “ಸಾರಿ, ಸಾರಿ… ಹೊರಡೋದು ಲೇಟ್ ಆಯ್ತು. ಇನ್ನು ಐದೇ ನಿಮಿಷದಲ್ಲಿ ಬರುತ್ತೇನೆ’ ಅಂದಾಗ ನೆಮ್ಮದಿಯ ನಿಟ್ಟುಸಿರಿನ ಜೊತೆಗೆ, ಅದೇನೋ ಉದ್ವೇಗ.
ಹೇಳಿದಂತೆ ಐದು ನಿಮಿಷದಲ್ಲಿ ಬಸ್ ಇಳಿದು ನಾನಿರುವಲ್ಲಿ ಬಂದಾಗ, ಹೃದಯ ಬಡಿತದಲ್ಲಿ ಏರುಪೇರು. ಜಗತ್ತಿನಲ್ಲಿ ಮುಖವಾಡದ ಜನರೇ ಹೆಚ್ಚು. ಅವರಲ್ಲಿ ನೀನೊಬ್ಬ ಒಳ್ಳೆಯವನು ಅನ್ನಿಸಿತು. ಈ ಹಿಂದೆ ನಿನ್ನ ಜೊತೆ ಮಾತಾಡುವಾಗ, ನಿನ್ನ ಬಗ್ಗೆ ಒಂದು ಇಮೇಜ್ ಸೃಷ್ಟಿಯಾಗಿತ್ತಲ್ಲ, ಅದೇ ರೀತಿಯ ಮನುಷ್ಯ ನೀನು ಅಂತ ಭೇಟಿಯಾದ ಸ್ವಲ್ಪ ಹೊತ್ತಿಗೇ ತಿಳಿದು ಹೋಯ್ತು. ನೀನೊಬ್ಬ ಅಪರಿಚಿತ ಎಂಬ ಭಾವನೆಯೇ ಬರಲಿಲ್ಲ ನೋಡು! ಅತಿ ಪರಿಚಯದವರು ಕೆಲ ವರ್ಷಗಳ ನಂತರ ಭೇಟಿಯಾದಾಗ ಯಾವ ಭಾವನೆ ಬರುತ್ತದೋ, ಅದೇ ಭಾವನೆ ಮನಸ್ಸಿನಲ್ಲಿ. ಮಾತುಗಳನ್ನು ಪ್ರಾರಂಭಿಸುವ ಮೊದಲು ಹಾಗೆಯೇ ಇಬ್ಬರೂ ಮುಖ ನೋಡ್ತಾ ನಿಂತದ್ದು, ನಂತರ ನಾನೇ ವಟವಟ ಅಂತ ಮಾತಿಗಿಳಿದಿದ್ದು, ನೀನು ಬರೀ ಹಾ, ಹು, ಹೌದಾ, ಸರಿ, ಆಯ್ತು… ಅಂತ ಪ್ರಾರಂಭಿಸಿ, ಆಮೇಲೆ ನಿಧಾನವಾಗಿ ಹರಟೆ ಶುರು ಮಾಡಿದ್ದು…. ನೆನಪಿದೆಯಾ?
ಒಂದಂತೂ ನಿಜ ಕಣೋ, ನೀನು ಫೋನ್‌ನಲ್ಲಿ ನಿನ್ನ ಬಗ್ಗೆ ಹೇಳಿಕೊಂಡಿ¨ªೆಯಲ್ಲ, ಹಾಗೆಯೇ ಇದ್ದೀಯಾ. ನಿನ್ನಲ್ಲಿ ಯಾವ ಕಪಟವಿಲ್ಲ. ಇದ್ದದ್ದನ್ನು ಇದ್ದಂತೆಯೇ ಹೇಳುವ ಧೈರ್ಯಶಾಲಿ ಹುಡುಗ ನನ್ನವನೆಂದು ಹೇಳಿಕೊಳ್ಳಲು ನಂಗೆಷ್ಟು ಗರ್ವ ಗೊತ್ತಾ? ಎಲ್ಲೋ ಇರುವ ನೀನು, ಇನ್ನೆಲ್ಲೋ ಇರುವ ನನ್ನನ್ನು ಭೇಟಿಯಾಗಲು ಬಂದೆಯಲ್ಲ; ಅದು ನನ್ನ ಜೀವನದ ಸ್ಮರಣೀಯ ದಿನ. ಆದಷ್ಟು ಬೇಗ ನೀನಿರುವಲ್ಲಿಗೇ ಬರ್ತೀನಿ ಅಂತ ಹೇಳಿದ್ದೀಯಲ್ವಾ? ಆ ಭರವಸೆಯ ಜೊತೆಗೆ ದಿನ ಕಳೆಯುತ್ತಿದ್ದೇನೆ. ಬೇಗ ಬಂದು ಬಿಡು ಆಯ್ತಾ? ಅಲ್ಲಿಯವರೆಗೆ ಎಂದಿನಂತೆ ಫೋನು, ಮೆಸೇಜು ಮಾಡ್ತಾ ಇರು…
ಮಾಲಾ ಅಕ್ಕಿಶೆಟ್ಟಿ, ಬೆಳಗಾವಿ