Advertisement

ನಿನ್ನ ಪ್ರೇಮದ ಪರಿಯ…

07:23 PM Feb 17, 2020 | mahesh |

ಪಟ ಪಟ ಗದ್ದಲವೆಬ್ಬಿಸುತ್ತಾ ಓಡಿಸುವ ನಿನ್ನ ಬುಲೆಟ್‌ ಬೈಕು, ಗಿಟಾರ್‌ ನುಡಿಸುವ ನಿನ್ನ ಪ್ರೀತಿಯ ಜೊತೆಗೆ ಆ ಗೆಳೆಯರು ಇದ್ದರೆ ಸಾಕು, ಜಗತ್ತನ್ನೇ ಸುತ್ತುವ ಹುಮ್ಮಸ್ಸಿನಲ್ಲಿ, ನಿನ್ನನ್ನೇ ಜಗತ್ತು ಎಂದು ಕೊಂಡಿರುವ ನಾನು ಹೇಗೆ ಸುಮ್ಮನಿರಲಿ ಹೇಳು?

Advertisement

ಈ ಪ್ರೀತಿಯು ಬರುವಾ ಮುಂಚೆ ಯಾರಿಗೂ ಹೇಳ್ಳೋಲ್ಲ ಈ ಪ್ರೀತಿಯ ಆರಂಭಕೆ ಕಾರಣ ಬೇಕಿಲ್ಲ
ನನ್ನ ಮೆಚ್ಚಿನ ಹಂಸಲೇಖ ವಿರಚಿತ ಈ ಸಾಲುಗಳನ್ನು ಗುನುಗುವಾಗ, ನಿನ್ನ ನೆನಪಾಗಿ ಮನ ನವಿಲಿನಂತೆ ನರ್ತಿಸುತ್ತದೆ ಕಣೋ. ನವ ಪ್ರೇಮಿಗಳಿಗೆ, ನಿತ್ಯನೂತನ ಎನಿಸುವಂಥ ಸಾಲುಗಳಿವು. ಕ್ಲಾಸ್‌ನಲ್ಲಿ ನನ್ನೆಡೆ ಕಳ್ಳ, ಓರೆ ನೋಟ ಬೀರುತ್ತಾ ಕುಳಿತು, ಅದೆಷ್ಟು ಪಾಠ ಕೇಳುತ್ತಿದ್ದೆಯೋ, ಬಿಡುತ್ತಿದ್ದೆಯೋ, ಲೆಕ್ಚರರ್‌ ಹತ್ತಿರ ಬೈಸಿಕೊಳ್ಳುತ್ತಿದ್ದುದಂತೂ ಗ್ಯಾರಂಟೀ. ಆಗ ನಾನು ಮುಸಿ ಮುಸಿ ನಕ್ಕರೆ, ಜನ್ಮ ಪಾವನವಾದಷ್ಟು ಸಂತಸ ಪಡುವ ನಿನ್ನ ಹುಚ್ಚುತನ ನೋಡಿ ತಬ್ಬಿಬ್ಟಾಗುವ ಸರದಿ ನನ್ನದಾಗಿತ್ತು. ಬರೀ ಲೈನ್‌ ಹೊಡೆದು ಸಮಯ ಕೊಲ್ಲುವ ಉಡಾಳ ಅಂತಾ ತಿಳಿದಿದ್ದ ನನಗೆ, ನೀನೊಬ್ಬ ಉತ್ತಮ ಕ್ರೀಡಾಪಟು, ಚರ್ಚಾಸ್ಪರ್ಧೆಯಲ್ಲಿ ನಿನ್ನ ವಾಗjರಿ, ಓದಿನಲ್ಲಿ ತರಗತಿಗೇ ಮೊದಲು ಎಂಬ ಇನ್ನೊಂದು ಮುಖದ ಅರಿವಾದಾಗ, ನನ್ನ ಮನಸ್ಸನ್ನೇ ನಿನಗೆ ಅರ್ಪಿಸಿದ್ದೆ. ಎಷ್ಟೋ ಚಂದದ ಹುಡುಗಿಯರು ನಿನ್ನ ಪ್ರೇಮದ ಕೃಪಾಕಟಾಕ್ಷಕ್ಕಾಗಿ ಕಾದಿರುವಾಗ, ಸಾಮಾನ್ಯ ರೂಪದವಳಾದ ನನಗೆ ನೀನು ಕೈಗೆಟುಕಲಾರದ ನಕ್ಷತ್ರ ಎನಿಸಿತ್ತು. ನಿನ್ನ ಗಂಭೀರ ನಡೆನುಡಿಗೆ ನಾನು ಸೋತಿದ್ದು ಎಂದು ಹೇಳಿದಾಗ ಮನ ತುಂಬಿ ಬಂದಿತ್ತು.

ನೀನೊಲಿದಾ ಕ್ಷಣದಿಂದ ನನಗೆ ಭುವಿಯಲ್ಲೇ ಸ್ವರ್ಗವೊಂದು ಸೃಷ್ಟಿಯಾದಂತಿದೆ. ಆದರೂ ಪ್ರತಿದಿನ, ಪ್ರತಿಕ್ಷಣ ನೀನು ಕೇವಲ ನನ್ನನ್ನೇ ನೋಡಬೇಕು, ಮಾತನಾಡಿಸಬೇಕು, ಧ್ಯಾನಿಸುತ್ತಿರಬೇಕೆಂಬ ಹುಚ್ಚು ಮನಸ್ಸಿನ ತಳಮಳಕ್ಕೆ ತಡೆ ಹಾಕುವುದಾದರೂ ಹೇಗೆ? ನಿನಗೂ ನಿನ್ನದೇ ಆದ ಜಗತ್ತಿದೆ, ಜವಾಬ್ದಾರಿಯಿದೆ ಎಂದು ಗೊತ್ತಿದ್ದರೂ ನಿಯಂತ್ರಿಸಲಾಗದ ಅಸಹಾಯಕತೆ ನನ್ನದು. ಪಟ ಪಟ ಗದ್ದಲವೆಬ್ಬಿಸುತ್ತಾ ಓಡಿಸುವ ನಿನ್ನ ಬುಲೆಟ್‌ ಬೈಕು, ಗಿಟಾರ್‌ ನುಡಿಸುವ ನಿನ್ನ ಪ್ರೀತಿಯ ಜೊತೆಗೆ ಆ ಗೆಳೆಯರು ಇದ್ದರೆ ಸಾಕು, ಜಗತ್ತನ್ನೇ ಸುತ್ತುವ ಹುಮ್ಮಸ್ಸಿನಲ್ಲಿ, ನಿನ್ನನ್ನೇ ಜಗತ್ತು ಎಂದು ಕೊಂಡಿರುವ ನಾನು ಹೇಗೆ ಸುಮ್ಮನಿರಲಿ ಹೇಳು?. ಎಲ್ಲಿದ್ದರೂ, ಹೇಗಿದ್ದರೂ ನನ್ನೊಡನೆ ಕಳೆಯುವ ಸಮಯಕ್ಕೆ ನೀನೂ ಹಾತೊರೆಯುವೆ ಎಂದು ಗೊತ್ತಿದ್ದರೂ, ಕಡಿವಾಣವಿಲ್ಲದ ಮನಸು ಏನೇನೋ ಹುಚ್ಚು ಕಲ್ಪನೆಗಳನ್ನು ಮಾಡಿಕೊಳ್ಳುತ್ತದೆ. ತುಂಬಾ ಸ್ವಾರ್ಥಿ ನಾನು ಅಲ್ವಾ?…

ನಳಿನಿ. ಟಿ. ಭೀಮಪ್ಪ, ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next