Advertisement

ನಿನ್ನ ಕಾಣಿಕೆ ಬದುಕಿಡೀ ನನ್ನೊಂದಿಗಿರುತ್ತೆ!

03:25 AM Jan 22, 2019 | |

ಹದಿಹರೆಯದ ಪ್ರೇಮ ಭಾವನೆಗಳ ಪ್ರಕಟಣೆಗೆ ಕಾಣುವ ಹತ್ತಾರು ಮಾರ್ಗಗಳಲ್ಲಿ ಅತಿ ಸುಲಭದ ಮಾರ್ಗವೊಂದಿದ್ದರೆ ಅದು ಪ್ರೇಮಪತ್ರವೆಂಬುದು ಎಲ್ಲರೂ ನಂಬುವ ಸತ್ಯವೇ! ಈಗಂತೂ ಗುಡ್‌ ಮಾರ್ನಿಂಗ್‌ ಎಂಬ ಸಂದೇಶದಿಂದ ಹಿಡಿದು ಗುಡ್‌ನೈಟ್‌ ಸಂದೇಶದೊಳಗೇ ಗುರಿತಪ್ಪಿ ಸಂಬಂಧಗಳು ಸಮಾಪ್ತಿಯಾಗಿ ಬಿಡುತ್ತವೆ. ಅಂಥದ್ದರಲ್ಲಿ, ಪ್ರೇಮಬರಹದ ಮೂಲಕ ಮನಗೆದ್ದ ಅಪರೂಪದ ಹುಡುಗಿ ನೀನು. ನೀನು ನನ್ನ ಮನದನ್ನೆ ಎಂಬುದರ ಬಗ್ಗೆ ನನಗೆ ಅತೀವ ಹೆಮ್ಮೆ. ಹೆಣ್ಣು ತಾನಾಗಿ ಒಲಿಯುವುದು ಕಮ್ಮಿಯೂ, ಒಲಿದುಬಿಟ್ಟರೆ ಅದೃಷ್ಟವೂ ಎಂದು ಕೇಳಿ ತಿಳಿದಿದ್ದ ನನಗೆ, ನೀನು ನನ್ನ ಬದುಕಿಗೆ ವಸಂತಗಾಲದ ಇಳಿಸಂಜೆಯಲ್ಲಿ ಸುರಿದ ಹನಿಮಳೆಯಂತೆ ಆಗಮಿಸಿ ಅಚ್ಚರಿಗೊಳಿಸಿದ್ದು ನಿಜ.

Advertisement

  ಪ್ರೇಮ ನಿವೇದನೆಗೆ ಸುಲಭಮಾರ್ಗ ಪ್ರೇಮಪತ್ರವೆಂಬುದು ಒಪ್ಪಿತ ಸತ್ಯವಾದರೂ, ಅದರಲ್ಲಿ ಗೆದ್ದವರು ಕೆಲವೇ ಮಂದಿಯಿದ್ದಾರು. ಕಾರಣ, ಕಸದಬುಟ್ಟಿ ತುಂಬುವಷ್ಟು ಪತ್ರ ಬರೆದು, ಕೊನೆಯಲ್ಲಿ ಬರೆದದ್ದು ಒಂದು ರೂಪ ಪಡೆದರೂ ಅದನ್ನು ಪ್ರಿಯತಮೆಗೋ, ಪ್ರಿಯಕರನಿಗೋ ತಲುಪಿಸುವಲ್ಲಿ ಎಡವುವವರೂ, ಪೀಕಲಾಟ ಅನುಭವಿಸುವವರು ಬಹುತೇಕರು. ಆದರೆ, ನೀನೋ ಗಟ್ಟಿಗಿತ್ತಿ! ನನ್ನ ಹುಟ್ಟುದಿನದ ಶುಭ ಮುಹೂರ್ತ ನೋಡಿಯೇ ಉಡುಗೊರೆಯೊಂದಿಗೆ ಕೊಟ್ಟ ಇಂಥದ್ದೊಂದು ಪತ್ರ ನನ್ನ ಬದುಕಿನ ದಿಕ್ಕುದೆಸೆ, ದೃಷ್ಟಿಕೋನವನ್ನೇ ಬದಲಿಸೀತೆಂದು ನಾನ್ಯಾವ ಕನಸಿನಲ್ಲೂ ಊಹಿಸಿರಲಿಲ್ಲ.

ಊರ ಜಾತ್ರೆಯಲ್ಲಿ ಗೊಂಬೆ ಕೊಳ್ಳಲೆಂದು ಜೋಳಿಗೆಯೊಳಗೆ ಕೂಡಿಟ್ಟ ಹಣದಂತಿದ್ದ ಆ ಪತ್ರವನ್ನು ತೆರೆಯಲೂ ಮನಸ್ಸು ಚಡಪಡಿಸುವಷ್ಟರ ಮಟ್ಟಿಗೆ, ಅದರಲ್ಲೊಂದು ನಾಜೂಕುತನವಿತ್ತು. ನಿನ್ನ ಪ್ರೇಮಪತ್ರದ ಸಾರಾಂಶ ನಿನ್ನ ಮನಸ್ಸಿನಷ್ಟೇ ಶುಭ್ರವಾಗಿತ್ತು. ಆ ನಿನ್ನ ಸುಂದರ ವಾಕ್ಯಗಳಲ್ಲಿನ ಪದಪೋಣಿಕೆ, ಘಮ್ಮನೆಯ ಮಲ್ಲಿಗೆಯ ಮೊಗ್ಗುಗಳನ್ನು ಹೊಸೆದಷ್ಟು ಸುಂದರ. ವಾಕ್ಯಗಳ ದೀರ್ಘಾಕ್ಷರ, ಒತ್ತಕ್ಷರಗಳು ನಿನ್ನ ಕೇಶರಾಶಿಯ ನಡುವೆ ಗುಂಪು ತಪ್ಪಿಸಿಕೊಂಡ ಕೂದಲೆಳೆಗಳಂತೆ ಕಾಣುತ್ತವೆ. ಅಲ್ಲಲ್ಲಿ ನೀನಿಟ್ಟ ಪೂರ್ಣ ವಿರಾಮದ ಬಿಂದುಗಳು ನಿನ್ನ ಕುಡಿಹುಬ್ಬುಗಳ ನಡುವಿನ ಬಿಂದಿಯಂತೆ ಪತ್ರಕ್ಕೆ ದೃಷ್ಟಿ ಬೊಟ್ಟನ್ನಿಡುತ್ತವೆ. ಮುತ್ತು ಪೋಣಿಸಿಟ್ಟಂಥ ಆ ನಿನ್ನ ಅಕ್ಷರಗಳು ನನ್ನ ಪಾಲಿಗೆ ಹವಳಗಳೇ ಹೌದು. ಅದೇ ಹವಳದಲ್ಲಿ ನನ್ನ ಹೆಸರು ಮೂಡಿವೆಯೆಂದರೆ ನನ್ನಂಥ ಅದೃಷ್ಟಶಾಲಿ ಬೇರ್ಯಾರೂ ಇರಲಾರರು.

ಪತ್ರದ ಕೊನೆಯಲ್ಲಿ ನೀನು ನಮ್ಮಿಬ್ಬರ ಹೆಸರನ್ನು ಒಟ್ಟಿಗೆ ಹೆಣೆದದ್ದು, ಮದುವೆ ಮಂಟಪದಲ್ಲಿ ಹೂಗಳನ್ನು ಶೃಂಗರಿಸಿದಂತೆಯೇ ಅದ್ಭುತವಾಗಿವೆ. ಒಟ್ಟಾರೆಯಾಗಿ ಆ ಪ್ರೇಮಪತ್ರ ನೀ ಕೊಟ್ಟ ಪ್ರೀತಿಪೂರ್ವಕ ಉಡುಗೊರೆಯೂ, ಈ ಜನ್ಮಕ್ಕೆ ನೀ ಕೊಟ್ಟ ಕಾಣಿಕೆಯೂ ಆಗಿ ಬದುಕಿರುವವರೆಗೆ ಜೊತೆಗಿರುತ್ತದೆ. 

ಅರ್ಜುನ್‌ ಶೆಣೈ

Advertisement
Advertisement

Udayavani is now on Telegram. Click here to join our channel and stay updated with the latest news.

Next