ನೀನು ಕಾಲೇಜಿನ ಗೇಟಿನ ಮುಂದೆ ಕಾಯುತ್ತಾ ನಿಂತಿದ್ದೆ. ಜೊತೆಗೆ ಒಂದಿಬ್ಬರು ಗೆಳತಿಯರು ಬೇರೆ! ಆಟೋಗ್ರಾಫ್ ಬರೆದಿರಬಹುದಾ ಅಥವಾ ನನಗೆ ಬೈಯೋಕೆ ಅಂತ ಕಾಯ್ತಿದ್ದಾಳ ಅಂತ ತಳಮಳ ಆಯ್ತು. ಗೇಟಿನ ಹತ್ತಿರ ಬರುತ್ತಿದ್ದಂತೆ ಹೃದಯ ತಮಟೆಯಂತೆ ಬಡಿದುಕೊಳ್ಳತೊಡಗಿತು.
ಹೇಗಿದ್ದೀಯಾ? ನಾನ್ಯಾರು ಅಂತ ಗೊತ್ತಾಯ್ತಾ? ನೆನಪಿಗೆ ಬರ್ತಾ ಇಲ್ವಾ? ಕಾಲೇಜಿನ ದಿನಗಳೊಮ್ಮೆ ನೆನಪು ಮಾಡಿಕೋ…
ಆ ಘಟನೆ ನೆನಪಿರಬಹುದು. ಅವತ್ತು ಸಮಾಜಶಾಸ್ತ್ರ ಉಪನ್ಯಾಸಕರು ಬೋರ್ಡ್ ಕ್ಲೀನ್ ಮಾಡೋಕೆ, ಹಾಳೆ ಕೊಡಿ ಅಂದ್ರು. ನಾವಿಬ್ಬರೂ ಸ್ಪರ್ಧೆಗೆ ಬಿದ್ದವರಂತೆ, ಪರ್ ಅಂತ ನೋಟ್ ಬುಕ್ಕಿನಿಂದ ಹಾಳೆ ಹರಿದು, “ತಗೊಳ್ಳಿ ಸರ್’ ಎಂದು ಒಟ್ಟಿಗೆ ಕೈ ಚಾಚಿದೆವು. ಆ ಕ್ಷಣ ಇಬ್ಬರೂ ಮುಖ ನೋಡಿಕೊಂಡು ನಕ್ಕೆವು. ಆಮೇಲೆ ದಿನಂಪ್ರತಿ ಇಬ್ಬರೂ ಕದ್ದು ಮುಚ್ಚಿ, ಕಳ್ಳಗಣ್ಣಿಂದ ನೋಡ್ತಾ ಇದ್ದ, ನಗ್ತಾ ಇದ್ದ ವಿಷಯ ನಮ್ಮಿಬ್ಬರಿಗೆ ಮಾತ್ರ ಗೊತ್ತಿತ್ತು.
ದಿನಗಳು ಕಳೆದವು. ವರ್ಷ ಕಳೆದೇ ಹೋಯ್ತು. ಇಬ್ಬರ ನಡುವೆ ನಗು ಬಿಟ್ಟರೆ, ಮಾತು-ಕಥೆ ನಡೆಯಲೇ ಇಲ್ಲ. ನಿನ್ನನ್ನು ಮಾತಾಡಿಸುವ ಧೈರ್ಯವೂ ನನಗೆ ಬರಲಿಲ್ಲ. ಆದರೆ, ಗೆಳೆಯರು ಬಿಡಬೇಕಲ್ಲ? “ಅವಳು ಮತ್ತೆ ಸಿಗುತ್ತಾಳ್ಳೋ, ಇಲ್ಲವೋ ಗೊತ್ತಿಲ್ಲ. ಹೋಗಿ ಮಾತಾಡಿಸು, ಫೋನ್ ನಂಬರ್ ಕೇಳು’ ಅಂತೆಲ್ಲಾ ಹುರಿದುಂಬಿಸಿದರು. ಈ ಮಧ್ಯೆ ಒಬ್ಬ ಗೆಳೆಯ ಹೀಗೊಂದು ಐಡಿಯಾ ಹೇಳಿದ: “ಹೇಗೂ ಕಾಲೇಜು ಮುಗೀತು. ಎಲ್ಲರೂ ಆಟೋಗ್ರಾಫ್ ಬರೆಸುತ್ತಾರೆ. ಇದೇ ಛಾನ್ಸು, ಹೋಗಿ ಅವಳಿಗೆ ಆಟೋಗ್ರಾಫ್ ಬುಕ್ ಕೊಡು’ ಎಂದ.
ನನಗೂ ಅದೇ ಸರಿ ಅನ್ನಿಸಿತು. ಆಟೋಗ್ರಾಫ್ ಪುಸ್ತಕ ಖರೀದಿಸಿ, ಬಣ್ಣಬಣ್ಣದ ಸ್ಕೆಚ್ ಪೆನ್‌ನಿಂದ ಅದನ್ನು ಅಲಂಕರಿಸಿದೆ. ನಿನಗೇ ಮೊದಲು ಬರೆಯಲು ಕೊಟ್ಟರೆ ಡೌಟ್ ಬರಬಹುದೆಂದು, ಒಂದಿಬ್ಬರು ಗೆಳೆಯರ ಕೈಯಲ್ಲಿ ಬರೆಸಿದೆ. ಮರುದಿನ, ಕಾಲೇಜು ಗೇಟಿನ ಬಳಿ ನೀನು ಬರುವುದನ್ನೇ ಕಾಯುತ್ತಾ ನಿಂತಿದ್ದೆ. ಧೈರ್ಯ ಮಾಡಿ,”ರೀ, ನಿಂತ್ಕೊಳ್ಳಿ ಅಂದೆ’. ನೀನು ಸೈಕಲ್‌ಗೆ ಬ್ರೇಕ್ ಹಾಕಿ ನಿಲ್ಲಿಸಿ, ಹುಬ್ಬಲ್ಲೇ ಏನೆಂದು ಕೇಳಿದೆ. “ಅದೂ, ಅದೂ ಆಟೋಗ್ರಾಫ್ ಬರೆದುಕೊಡಿ’ ಅಂತ ಇದ್ದಬದ್ದ ಧೈರ್ಯವನ್ನೆಲ್ಲ ಸೇರಿಸಿ ಹೇಳಿ, ನಿನ್ನ ಉತ್ತರಕ್ಕೂ ಕಾಯದೆ ನಡೆದೇ ಬಿಟ್ಟೆ. ಮಧ್ಯಾಹ್ನವೇ ಆಟೋಗ್ರಾಫ್ ಬರೆದು ಬುಕ್ ವಾಪಸ್ ಕೊಡೊ¤àಯಾ ಅಂತ ಕಾಯ್ತಾ ಇದ್ದೆ. ನೀನು ಕೊಡಲಿಲ್ಲ. ನನ್ನ ಚಡಪಡಿಕೆ ನೋಡಿ ಕೆಲ ಗೆಳೆಯರು, “ಅವರಪ್ಪನಿಗೆ ಹೇಳಿಬಿಟ್ರೆ, ನಾಳೆ ಅವರಪ್ಪನನ್ನ ಕಾಲೇಜಿಗೇ ಕರೆಸಿದ್ರೆ..’ ಅಂತೆಲ್ಲಾ ಹೆದರಿಸಿದರು. ನಾಳೆ ಕಾಲೇಜಿಗೆ ಬರಲೇಬೇಡ ಅಂತಲೂ ಹೇಳಿದರು. ನಾನು ಅದೇನಾಗುತ್ತೋ ನೋಡೇ ಬಿಡೋಣ ಅಂತ ಕಾಲೇಜಿಗೆ ಬಂದೆ.
ನೀನು ಕಾಲೇಜಿನ ಗೇಟಿನ ಮುಂದೆ ಕಾಯುತ್ತಾ ನಿಂತಿದ್ದೆ. ಜೊತೆಗೆ ಒಂದಿಬ್ಬರು ಗೆಳತಿಯರು ಬೇರೆ! ಆಟೋಗ್ರಾಫ್ ಬರೆದಿರಬಹುದಾ ಅಥವಾ ನನಗೆ ಬೈಯೋಕೆ ಅಂತ ಕಾಯ್ತಿದ್ದಾಳ ಅಂತ ತಳಮಳ ಆಯ್ತು. ಗೇಟಿನ ಹತ್ತಿರ ಬರುತ್ತಿದ್ದಂತೆ ಹೃದಯ ತಮಟೆಯಂತೆ ಬಡಿದುಕೊಳ್ಳತೊಡಗಿತು. ನಿನ್ನನ್ನು ಕಂಡೂ ಕಾಣದಂತೆ ಗೆಳೆಯರ ಮಧ್ಯದಲ್ಲಿ ತಲೆ ತಗ್ಗಿಸಿ ಹೋಗಲು ಮುಂದಾದೆ. “ಇಲ್ಲಿ ಕೇಳಿ..’ ಅಂತ ನೀನು ಕೂಗಿದೆ. ನಾನು ಕೇಳೇ ಇಲ್ಲವೆಂಬಂತೆ ಮುಂದೆ ನಡೆದೆ. “ರೀ, ಗುರುರಾಜ್ ನಿಂತ್ಕೊಳ್ಳಿ’ ಅಂತ ದನಿಯೇರಿಸಿ ಕರೆದಾಗ ಹಿಂದಿರುಗಿ ನೋಡಿದೆ. ಇನ್ನೇನು ಹೊಡೆದೇ ಬಿಡ್ತೀಯ ಅಂತ ಗುರಾಯಿಸುತ್ತಾ ಹತ್ತಿರ ಬಂದು, “ರೀ ನಾನ್ಯಾಕ್ರಿ ಬರೆಯಬೇಕು ಆಟೋಗ್ರಾಫ್? ನಾ ಬರೆಯಲ್ಲ. ತಗೊಳ್ಳಿ ನಿಮ್ಮ ಬುಕ್’ ಅಂತ ಆಟೋಗ್ರಾಪ್ ಬುಕ್ ಅನ್ನು ನನ್ನ ಕೈಗಿಟ್ಟು ಬರ್ರನೆ ನಡೆದೇಬಿಟ್ಟೆ.
ಅಲ್ಲಾ, ಅಷ್ಟು ದಿನವೂ ಕದ್ದುಮುಚ್ಚಿ ನನ್ನತ್ತ ನೋಡುತ್ತಿದ್ದೆ, ನಗುತ್ತಿದ್ದೆ. ಆಟೋಗ್ರಾಫ್ ಕೇಳಿದ್ದಕ್ಕೆ ಹಾಗ್ಯಾಕೆ ಸಿಟ್ಟು ಮಾಡಿಕೊಂಡೆ. ಆದರೆ, ನಿನ್ನ ಕಣ್ಣಲ್ಲಿ ಆವತ್ತು ಕೋಪವಂತೂ ಇರಲಿಲ್ಲ. ಮತ್ತೆ ಪ್ರೀತಿ ಇತ್ತಾ? ಗೊತ್ತಿಲ್ಲ… ಅದಕ್ಕೆ ನೀನೇ ಉತ್ತರ ಹೇಳಬೇಕು.
ಇಂತಿ ನಿನ್ನ ಆಟೋಗ್ರಾಫ್ಗಾಗಿ ಕಾದಿರುವ
ಗುರುರಾಜ ದೇಸಾಯಿ, ತಲ್ಲೂರು