ಯಾರು ಕಲಿಸಿದರು ನಿನಗೆ ಹುಡುಗರ ಎದೆಗೆ ನಿನ್ನ ಕಣ್ಣಿನ ಬಾಣಗಳನ್ನು ಬಿಡುವುದು. ಆ ಕಣ್‌ಬಾಣಗಳಿಂದ ಅದೆಷ್ಟು ಹುಡುಗರ ನಿದ್ದೆ ಕೆಟ್ಟಿದೆಯೋ? ನನಗೆ ತಿಳಿಯದು! ಆದರೆ, ನನಗೆ ಮಾತ್ರ ನಿನ್ನ ಕಣ್ಣಿನ ಬಾಣಗಳಿಂದ ನನ್ನೆದೆ ನಿನ್ನ ಪ್ರೀತಿಯೆಂಬ ಬಾಣಗಳ ಬಲೆಗೆ ಸಿಲುಕಿಕೊಂಡಿದೆ. ನೀ ನನ್ನನ್ನು ನೋಡುತ್ತಿರುವಾಗ ನಿನ್ನ ಕಣ್ಣಂಚಿನಲ್ಲಿನ ನನ್ನಯ ಮೇಲಿನ ಪ್ರೀತಿ, ನಿನ್ನ ಕಣ್ಣಿನ ಕೆಳಗಿರುವ ಕೆನ್ನೆಯ ಮೇಲೆ ವಸಂತಕಾಲದ ಹೊಸ ಚಿಗುರುನಂತಿರುವ ತುಸು ನಾಚಿಕೆ, ನಿನ್ನ ಕೆನ್ನೆಯ ಕೆಳಗಿರುವ ತುಟಿಯ ಮೇಲೆ ನನಗೆ ಏನನ್ನೋ ಹೇಳಬೇಕೆಂದು ಹಪಹಪಿಸುತ್ತಿರುವ ಆದರೂ ಹೇಳಲು ಸಂಕೋಚ ಸೂಸುತ್ತಿರುವ ನಿನ್ನ ಮೌನವಾದ ತುಟಿಗಳು. ಈ ನಿನ್ನ ಹೆಣ್ತನದ ಲಕ್ಷಣಗಳಿಗೆ ನನ್ನ ಹೃದಯ ಸೋಲೊಪ್ಪಿಕೊಂಡಿದೆ ಚೆಲುವೆ!
Advertisement
ನನ್ನ ಹೃದಯ ನಿನಗೆ ಸೋತರೂ ಅದು ಸುಮ್ಮನಿರದೇ, ನಿನ್ನ ಹೃದಯವನ್ನು ಗೆಲ್ಲಲು ಪ್ರಯತ್ನಿಸುತ್ತಿದೆ. ಈಗಿನ ಕಾಲದ ಪಾಶ್ಚಾತ್ಯ ಸಂಸ್ಕೃತಿಗೆ ಅಂಟಿಕೊಳ್ಳುತ್ತಿರುವ ಯುವತಿಯರಿಗೆ ನಿನ್ನ ತೋರಿಸಬೇಕು ಚೆಲುವೆ. ಭಾರತೀಯ ಸಂಸ್ಕೃತಿಯನ್ನು ದುಪ್ಪಟ್ಟು ಮಾಡುವಂತೆ ನೀನು ಉಡುವ ಉಡುಗೆ, ಪಾಶ್ಚಾತ್ಯ ಸಂಸ್ಕೃತಿಯನ್ನು ತಲೆಬಾಗಿಸುವಂಥ ನೀನು ತೊಡುವ ತೊಡುಗೆ, ನಿನ್ನ ಮಾತಿನಲ್ಲಿನ ಮಧುರತೆ, ನಿನ್ನ ಗುಂಗುರು ಕೇಶಗಳ ಅಲಂಕಾರಿಕ ಜಡೆ, ನಿನಗಿಂತ ಹಿರಿಯರಾದರೂ ಕಿರಿಯರಾದರೂ ಅವರ ಮುಂದೆ ನೀ ನಡೆದುಕೊಳ್ಳುವ ನಡೆ ಒಟ್ಟಾರೆ ಭಾರತೀಯ ಸಂಪ್ರದಾಯಕ್ಕೆ ಸೀರೆ ಕಟ್ಟಿರುವಂಥ ನಿನ್ನ ಸಂಪೂರ್ಣ ಹೆಣ್ತನಕ್ಕೆ ನನ್ನ ಹೃದಯ ಸೋತಿದೆ ಚೆಲುವೆ. ಬಾ ಇನ್ನಾದರೂ ನನ್ನ ಕಣ್ಣೆದುರಿಗೆ ನೀ ನಿಜವಾಗಿ ಕಾಣಿಸು! ಯಾವಾಗಲೂ ನನ್ನ ಕಣ್ಣಿನ ಹಿಂದೆ ಕನಸಾಗಿಯೇ ಇರಬೇಡ. ನಿನ್ನ ನಿಜಜೀವನದ ಭೇಟಿಗಾಗಿ, ನಿನಗಾಗಿ ನಾ ಕಾಯುತ್ತಿದ್ದೇನೆ…