Advertisement

ವಿಮಾನ ನಿಲ್ದಾಣದಿಂದ ಅಪಹರಿಸಿ ಯುವತಿ ಕೊಲೆ?

12:51 AM Aug 21, 2019 | Lakshmi GovindaRaj |

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತಡೆಗೋಡೆ ಸನಿಹ ಕೊಲೆಯಾಗಿದ್ದ ಯುವತಿ ಕೊಲ್ಕತ್ತಾ ಮೂಲದ ಮಾಡೆಲಿಂಗ್‌ ಕ್ಷೇತ್ರದ ಕಾರ್ಯಕ್ರಮಗಳ ಆಯೋಜಕಿ ಎಂಬ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ ಎಂದು ಗೊತ್ತಾಗಿದೆ.

Advertisement

ಮೇ 31ರಂದು ವಿಮಾನ ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಕಾಡಯರಪ್ಪನಹಳ್ಳಿಯ ಕಾಲು ದಾರಿಯಲ್ಲಿ ಅಪರಿಚಿತ ಯುವತಿಯ ಮೃತದೇಹ ಪತ್ತೆಯಾಗಿತ್ತು. ಈ ಕುರಿತು ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದ ಬಾಗಲೂರು ಪೊಲೀಸರು, ಇದೀಗ ಯುವತಿಯ ಗುರುತು ಹಾಗೂ ಆಕೆಯ ಹಿನ್ನೆಲೆಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತೂಂದೆಡೆ ಕಾರ್ಯಕ್ರಮವೊಂದನ್ನು ನಡೆಸಿಕೊಡಲು ಕೊಲ್ಕತ್ತಾದಿಂದ ಆಗಮಿಸಿದ್ದ ಯುವತಿಯನ್ನು ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೊಲೆಗೈದಿರುವ ಬಗ್ಗೆ ಬಾಗಲೂರು ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಈ ಬೆನ್ನಲ್ಲೇ ಕೊಲೆಪ್ರಕರಣದ ಆರೋಪಿ ಎನ್ನಲಾದ ಹಿನ್ನೆಲೆಯಲ್ಲಿ ಕ್ಯಾಬ್‌ ಚಾಲಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಪ್ರಕರಣ ತನಿಖಾ ಹಂತದಲ್ಲಿರುವ ಕಾರಣ ಆರೋಪಿ ಹೆಸರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ದೂರವಾಣಿ ಕರೆ ನೀಡಿತು ಸುಳಿವು!: ಯುವತಿಯ ತಲೆ ಮೇಲೆ ಸಿಮೆಂಟ್‌ ಇಟ್ಟಿಗೆ ಎತ್ತಿ ಹಾಕಿ ಕೊಲೆಗೈದಿದ್ದ ದುಷ್ಕರ್ಮಿಗಳು, ಆಕೆಯ ಎದೆಭಾಗ ಹಾಗೂ ಹೊಟ್ಟೆಯ ಭಾಗಕ್ಕೂ ಇರಿದ ಗುರುತುಗಳಾಗಿದ್ದವು. ಘಟನಾ ಸ್ಥಳದಲ್ಲಿ ಯಾವುದೇ ರೀತಿ ದಾಖಲೆಗಳಾಗಲಿ ಲಭ್ಯವಾಗಿರಲಿಲ್ಲ.ಅತ್ಯಂತ ಜಟಿಲವಾಗಿದ್ದ ಈ ಪ್ರಕರಣದ ತನಿಖೆಯ ಜಾಡುಹಿಡಿದು ಆ ಪ್ರದೇಶದ ಘಟನಾ ಸ್ಥಳದಲ್ಲಿ ಕಾರ್ಯನಿರ್ವಹಿಸಿದ್ದ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸಿದಾಗ ಯುವತಿ ಬಳಸುತ್ತಿದ್ದ ಮೊಬೈಲ್‌ ನಂಬರ್‌ ಪತ್ತೆಯಾಗಿತ್ತು.

Advertisement

ಇದೇ ಸುಳಿವು ಅಧರಿಸಿ ತನಿಖೆ ನಡೆಸಿದಾಗ ಆಕೆ ಕೊಲ್ಕತ್ತಾ ಮೂಲದವಳು ಹಾಗೂ ಮಾಡೆಲಿಂಗ್‌ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳ ಆಯೋಜನೆ ಮಾಡುವ ಕೆಲಸ ನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ. ಕೊಲ್ಕತ್ತಾದಲ್ಲಿರುವ ಆಕೆಯ ಪೋಷಕರನ್ನು ಪತ್ತೆ ಮಾಡಿ ವಿಷಯ ತಿಳಿಸಿದ್ದು, ನಗರಕ್ಕೆ ಆಗಮಿಸಿರುವ ಅವರು ಮೃತದೇಹದ ಗುರುತು ಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಚಿನ್ನದ ಸರದ ಆಸೆಗೆ ನಡೆಯಿತೇ ಕೊಲೆ?: ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯುವತಿಯನ್ನು ಕರೆದೊಯ್ದು ಆಕೆಯ ಬಳಿಯಿದ್ದ ಚಿನ್ನದ ಸರ ಹಾಗೂ ಹಣ ದೋಚುವ ಬಗೆ ಕೊಲೆ ಮಾಡಿರುವ ಸಾಧ್ಯತೆಯಿದೆ.ಈ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದರು.

ಕೊಲೆಯಾಗಿದ್ದ ಅಪರಿಚಿತ ಯುವತಿಯ ವಿಳಾಸ, ಆಕೆಯ ಕುರಿತ ಮಾಹಿತಿ ಪತ್ತೆಹಚ್ಚಲಾಗಿದ್ದು, ಕೊಲೆಗೆ ಕಾರಣ ಸಹ ಗೊತ್ತಾಗಿದ್ದು, ಆರೋಪಿಗಳ ಬಂಧನಕ್ಕೆ ಕ್ರಮವಹಿಸಲಾಗಿದೆ.
-ಭೀಮಾಶಂಕರ್‌ ಎಸ್‌.ಗುಳೇದ್‌, ಡಿಸಿಪಿ, ಈಶಾನ್ಯ ವಿಭಾಗ

* ಮಂಜುನಾಥ್‌ ಲಘುಮೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next