ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಗೆ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಅವರು ಬಲಿಯಾದ ಘಟನೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಇಂದು ಸುರಿದ ಭಾರೀ ಮಳೆಯಿಂದ ಕೆ.ಆರ್.ವೃತ್ತದ ಅಂಡರ್ ಪಾಸ್ ನಲ್ಲಿ ಮಳೆನೀರಿಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಎಂಬ ಯುವತಿ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ರಭಸ ಮಳೆಯ ಮುನ್ನೆಚ್ಚರಿಕೆ ಇದ್ದರೂ ಬಿಬಿಎಂಪಿ ಆಡಳಿತ ಎಚ್ಚೆತ್ತುಕೊಳ್ಳದೆ ಇರುವುದು ನಿರ್ಲಕ್ಷ್ಯದ ಪರಮಾವಧಿ ಎಂದು ಅವರು ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂಡರ್ ಪಾಸ್ ಗಳಲ್ಲಿ ಕಸಕಡ್ಡಿ ತೆಗೆದು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕಾಗಿದ್ದ ಪಾಲಿಕೆ, ಮೈಮರೆತು ಕರ್ತವ್ಯಲೋಪ ಎಸಗಿದೆ. ಪ್ರತೀಸಲವೂ ಮಳೆ ಬಂದಾಗ ಅವಾಂತರ, ಪ್ರಾಣಹಾನಿ ಸಂಭವಿಸಿದ ಮೇಲೆ ಪಾಲಿಕೆ ಎಚ್ಚೆತ್ತುಕೊಳ್ಳುತ್ತದೆ, ಯಾಕೆ? ಮಳೆ ಬಂದರೆ ಜನರು ಸಾಯಲೇಬೇಕೆ? ಎಂದು ಅವರು ಪ್ರಶ್ನಿಸಿದ್ದಾರೆ.
ಭಾರೀ ಮಳೆ ಸುರಿಯುತ್ತಿದ್ದ ಅಪಾಯದ ಸಮಯದಲ್ಲಿಯೂ ವಾಹನ ಚಾಲಕರು ಅತ್ಯಂತ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡ ಮೇಲೂ ಚಾಲಕ ಕಾರನ್ನು ಅಂಡರ್ ಪಾಸ್ ಮೂಲಕ ಚಾಲನೆ ಮಾಡಬಾರದಿತ್ತು. ಸಂಚಾರಿ ಪೊಲೀಸರು ಮೊದಲೇ ಮುನ್ನೆಚ್ಚರಿಕೆ ನೀಡಬೇಕಿತ್ತು ಎಂದು ಹೇಳಿದ್ದಾರೆ.
ಬಿಬಿಎಂಪಿ ಅಧಿಕಾರಿಗಳು ಕೂಡಲೇ ನಗರದ ಉದ್ದಗಲಕ್ಕೂ ಎಲ್ಲಾ ಅಂಡರ್ ಪಾಸ್ ಗಳನ್ನು ವಿಸ್ತೃತವಾಗಿ ಪರಿಶೀಲಿಸಿ, ಕಸಕಡ್ಡಿ ವಿಲೇವಾರಿ ಮಾಡಿಸಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಇನ್ನೊಂದು ಪ್ರಾಣನಷ್ಟವೂ ಆಗುವುದಕ್ಕೆ ಅವಕಾಶ ನೀಡಬಾರದು ಎಂದು ಹೇಳಿರುವ ಅವರು; ಮೃತ ನತದೃಷ್ಟ ಯುವತಿ ಕುಟುಂಬಕ್ಕೆ ಪರಿಹಾರ ನೀಡಿರುವುದು ಸ್ವಾಗತಾರ್ಹ. ಆದರೆ, ಇಂತಹ ದುರಂತಗಳು ಮರುಕಳಿಸದಂತೆ ರಾಜ್ಯ ಕಾಂಗ್ರೆಸ್ ಸರಕಾರ ಶಾಶ್ವತ ಪರಿಹಾರ ರೂಪಿಸಬೇಕು. ಅಂಡರ್ ಪಾಸ್, ರಸ್ತೆ, ಚರಂಡಿ, ಒಳಚರಂಡಿಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎನ್ನುವುದು ನನ್ನ ಆಗ್ರಹ ಎಂದಿದ್ದಾರೆ.