ಬೆಂಗಳೂರು: ಪೇಯಿಂಗ್ ಗೆಸ್ಟ್(ಪಿಜಿ) ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಟ್ಟ ವಿಮರ್ಶೆ ಮಾಡಿದ ಯುವತಿಯ ವೈಯಕ್ತಿಕ ಡೇಟಾವನ್ನು ಡೇಟಿಂಗ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿ ಕಿರುಕುಳ ನೀಡಿದ ಪಿಜಿ ಮಾಲೀಕನನ್ನು ಪೂರ್ವ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರ ನಿವಾಸಿ ಆನಂದ್ ಶರ್ಮಾ (32) ಬಂಧಿತ. ಆರೋಪಿಯ ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. 24 ವರ್ಷದ ಸಂತ್ರಸ್ತೆಯೊಬ್ಬರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸೆನ್ ಠಾಣೆ ಪೊಲೀಸರು ಮಾಹಿತಿ ನೀಡಿದರು.
ರಾಜಸ್ಥಾನ ಮೂಲದ ಆರೋಪಿ, ಕೆಲ ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ಶೇಷಾದ್ರಿಪುರ ದಲ್ಲಿ ವಿ-ಸ್ಟೇಜ್ ಎಂಬ ಪಿಜಿ ನಡೆಸುತ್ತಿದ್ದಾನೆ. ಕೆಲ ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸಂತ್ರಸ್ತೆ, ಆರೋಪಿಯ ಪಿಜಿಯಲ್ಲಿ ವಾಸವಾಗಿದ್ದಳು. ಆದರೆ, ಪಿಜಿಯಲ್ಲಿ ಸರಿಯಾದ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಆಕೆ ಕೆಲ ದಿನಗಳ ಹಿಂದಷ್ಟೇ ಪಿಜಿ ತೊರೆದು ಬೇರೆಡೆ ವಾಸವಾಗಿದ್ದಾಳೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಪಿಜಿ ಬಗ್ಗೆ ಕೆಟ್ಟ ವಿಮರ್ಶೆ ಮಾಡಿದ್ದಳು. ಅದರಿಂದ ಕೆಲ ಗ್ರಾಹಕರು, ಆರೋಪಿಯ ಪಿಜಿ ಸೇರಲು ಹಿಂದೇಟು ಹಾಕುತ್ತಿದ್ದರು. ಜತೆಗೆ ಪಿಜಿಯಲ್ಲಿದ್ದ ಕೆಲವರು ತೊರೆಯಲು ನಿರ್ಧರಿಸಿದ್ದರು. ಆಗ ಸಂತ್ರಸ್ತೆ, ಆನ್‌ಲೈನ್‌ನಲ್ಲಿ ಮಾಡಿದ್ದ ವಿಮರ್ಶೆ ಗಮನಿಸಿದ ಆರೋಪಿ, ಆಕೆಗೆ ಬುದ್ದಿ ಕಲಿಸಬೇಕೆಂದು ನಿರ್ಧರಿಸಿ, ಈ ಕೃತ್ಯ ಎಸಗಿದ್ದಾನೆ ಎಂಬುದು ಗೊತ್ತಾಗಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಲೋಕ್ಯಾಂಟೋ ಆ್ಯಪ್‌ನಲ್ಲಿ ಯುವತಿಯ ಮಾಹಿತಿ:
ಸಂತ್ರಸ್ತೆ ಪಿಜಿಗೆ ಸೇರುವಾಗ ನೀಡಿದ್ದ ಆಕೆಯ ವೈಯಕ್ತಿಕ ದಾಖಲೆಗಳನ್ನು ಆರೋಪಿ ಆನಂದ್ ಶರ್ಮಾ, ಲೋಕ್ಯಾಂಟೋ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಅಲ್ಲದೆ, ಆಕೆಯ ಫೋಟೋವನ್ನು ಅಪ್‌ಲೋಡ್ ಮಾಡಿ, ಕಾಲ್ ಗರ್ಲ್ಸ್ ಮಾದರಿ ಬಿಂಬಿಸಿದ್ದ. ಅಲ್ಲದೆ, ಈತನೂ ಆಕೆಯ ಮೊಬೈಲ್ ನಂಬರ್ ಅನ್ನು ತನ್ನ ಆಪ್ತ ಬಳಗದಲ್ಲಿ ಶೇರ್ ಮಾಡಿದ್ದ. ಹೀಗಾಗಿ ಆಕೆಗೆ ಕೆಲ ಯುವಕರಿಂದ ಪೋನ್ ಕರೆಗಳು ಬರುತ್ತಿತ್ತು. ಅದರಿಂದ ಗಾಬರಿಗೊಂಡ ಸಂತ್ರಸ್ತೆ, ಸೆನ್ ಠಾಣೆಗೆ ಬಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಆರೋಪಿಯ ಕೃತ್ಯ ಬಯಲಾಗಿದೆ. ಅಲ್ಲದೆ, ಆತ ಕೂಡ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೂರ್ವ ವಿಭಾಗದ ಸೆನ್ ಠಾಣೆಯ ಇನ್‌ಸ್ಪೆಕ್ಟರ್ ಉಮೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.