Advertisement

ಕಲಾಸಂಸ್ಕೃತಿ ಉಳಿವಿಗೆ ಯುವಜನತೆ ಪಣ ತೊಡಿ

12:07 PM Nov 02, 2018 | |

ಮೈಸೂರು: ನಮ್ಮ ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಮ್ಮ ಯುವ ಸಮೂಹ ಶ್ರಮಿಸಬೇಕಿದೆ. ನಮ್ಮ ಸಂಸ್ಕೃತಿ ಬೆಳೆದಂತೆ ಸಮಾಜ ಮತ್ತು ದೇಶ ಆರೋಗ್ಯವಾಗಿರಲಿದೆ ಎಂದು ಚಿತ್ರ ನಿರ್ದೇಶಕ ಟಿ.ಎಸ್‌.ನಾಗಾಭರಣ ಹೇಳಿದರು. 

Advertisement

ನಗರದ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದ ನಾದಮಂಟಪದಲ್ಲಿ ಸಂಸ್ಕಾರ ಭಾರತೀ ಮೈಸೂರು ಘಟಕ ಮತ್ತು ಗಣಪತಿ ಸಚ್ಚಿದಾನಂದ ಆಶ್ರಮ ಆಯೋಜಿಸಿರುವ ರಾಷ್ಟ್ರೀಯ ಯುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾದ ಮತ್ತು ಪ್ರಕೃತಿ ನಡುವೆ ಅವಿನಾಭಾವ ನಂಟಿದ್ದು, ಪ್ರಕೃತಿಯೊಂದಿಗೆ ನಮ್ಮನ್ನು ಸಮೀಕರಿಸಿಕೊಳ್ಳಬೇಕಾದರೆ ನಾದ ಅಗತ್ಯವಿದೆ. ನಾದಕ್ಕೆ ತನ್ನದೆಯಾದ ಶೈಲಿ, ಸ್ವಭಾವ ಮತ್ತು ಒಳಮನಸ್ಸಿದ್ದು, ನಮ್ಮ ಮನಸ್ಸನ್ನು ನಿರ್ಮಲವಾಗಿ ಇಡುವುದರಿಂದ ಇವೆರಡನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು. 

ಮಾನವೀಯ ಮನೋಭಾವ: ಪ್ರಸ್ತುತ ನಾವು ಬದುಕುವ ಮಾರ್ಗದ ಎಡ-ಬಲದ ಸಿದ್ಧಾಂತಗಳು ಮನುಷ್ಯನನ್ನು ನೋಡುವ ಬಗೆಯನ್ನು ಬದಲಾಯಿಸಿವೆ. ಇದರಿಂದ ನಾವು ಮನುಷ್ಯರಾಗಿ ಬದುಕುತ್ತಿದ್ದೇವೆಯೇ ಎಂಬ ಅನುಮಾನ ಮೂಡುತ್ತಿದ್ದು, ಎಡ-ಬಲದ ಮನೋಭಾವದ ಬದಲು ನಾವೆಲ್ಲರೂ  ಮಾನವರೆಂಬ ಮನೋಭಾವದಿಂದ ಬದುಕಬೇಕಿದೆ.

ಇದರ ಮೂಲಕ ಒಬ್ಬರೂ ಮತ್ತೂಬ್ಬರನ್ನು ಮನುಷ್ಯರನ್ನಾಗಿ ನೋಡುವುದನ್ನು ಕಲಿಯಬೇಕಿದೆ. ಮನುಷ್ಯ ಜಾತಿ-ಧರ್ಮಗಳ ಹೊರತಾಗಿ ಮಾನವೀಯತೆ ನೆಲೆಗಟ್ಟಿನಲ್ಲಿ ಬದುಕುವ ಅಗತ್ಯವಿದೆ.  ಕಲಾ ಪ್ರಕಾರಗಳು ಮಾತ್ರ ಯಾವುದೇ ಲಿಂಗ, ಜಾತಿ, ಧರ್ಮಗಳನ್ನು ನೋಡದೆ ತನ್ನತ್ತ ಎಳೆದುಕೊಳ್ಳುತ್ತವೆ ಎಂದು ಹೇಳಿದರು. 

Advertisement

ಸಂಸ್ಕೃತಿ ಪರಂಪರೆ ಉಳಿಸಿ: ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಬ್ರಿಟಿಷರಿಗೆ ಕರ್ನಾಟಕದ ಶಕ್ತಿ ಬಗ್ಗೆ ಭಯವಿತ್ತು. ಹೀಗಾಗಿ ಮದ್ರಾಸ್‌ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕ, ಬಾಂಬೆ ಕರ್ನಾಟಕವೆಂದು ಪ್ರಾದೇಶಿಕವಾಗಿ ವಿಂಗಡಿಸಿದ್ದರು. ಇಂತಹ ಸಮಯದಲ್ಲಿ ಅಖಂಡ ಕರ್ನಾಟಕ ರೂಪುಗೊಳ್ಳಬೇಕೆಂದು ಆಲೂರು ವೆಂಕಟರಾಯರು ಕರೆ ನೀಡಿದ್ದರು.

ಇದಾದ ನಂತರ ವಿವಿಧ ರೀತಿಯ ಹೋರಾಟಗಳಿಂದ ಕರ್ನಾಟಕ ರಚನೆಗೊಂಡಿದೆ. ಇದನ್ನು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು. ಇದರೊಂದಿಗೆ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಪರಂಪರೆಯನ್ನು ಆಚರಿಸುತ್ತಾ, ಉಳಿಸಿ-ಬೆಳಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಮೈಸೂರು ಸಂಸ್ಕಾರ ಭಾರತೀ ವೆಬ್‌ಸೈಟ್‌ ಅನ್ನು ಸಚಿವ ಜಿ.ಟಿ.ದೇವೇಗೌಡ ಲೋಕಾರ್ಪಣೆಗೊಳಿಸಿದರು. ಕಾರ್ಯಕ್ರಮದಲ್ಲಿ ಸಂಗೀತದ ಕುರಿತು ಕನ್ನಡ, ಇಂಗ್ಲಿಷ್‌, ಸಂಸ್ಕೃತ ಭಾಷೆಯ 24 ಲೇಖನಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು. 

ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ, ಆಗ್ರಾದ ಸಂಸ್ಥಾಪಕ್‌ ಸಂಘಟನಾ ಮಂತ್ರಿ ಪದ್ಮಶ್ರೀ ಬಾಬಾ ಯೋಗೇಂದ್ರಜೀ, ಕರ್ನಾಟಕ ಉತ್ತರದ ಸಂಸ್ಕಾರ ಭಾರತೀ ಅಧ್ಯಕ್ಷ ಕೃಷ್ಣದೇವರಾಯ, ಸಂಸ್ಕಾರ ಭಾರತೀಯ ಮುಖ್ಯ ಕಾರ್ಯದರ್ಶಿ ಅಮೀರ್‌ಚಂದ್‌, ಭಾರತ ಸರ್ಕಾರದ ಸಾಂಸ್ಕೃತಿಕ ಕೇಂದ್ರ ದಕ್ಷಿಣ ವಲಯದ ನಿರ್ದೇಶಕ ಡಾ.ದೀಪಕ್‌ ಶಾಂತರಾಮ್‌ ಕಿರವಾಡ್ಕರ್‌, ಸಂಸದ ಪ್ರತಾಪ್‌ ಸಿಂಹ ಹಾಜರಿದ್ದರು. 

ನಾಲ್ಕು ದಿನಗಳ ಕಾರ್ಯಕ್ರಮ: ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಆಶ್ರಮದ ನಾದ ಮಂಟಪದಲ್ಲಿ ನ.4ರವರೆಗೆ ರಾಷ್ಟ್ರೀಯ ಯುವ ಸಂಗೀತೋತ್ಸವ ನಡೆಯಲಿದೆ. ಯುವ ಸಂಗೀತೋತ್ಸವದಲ್ಲಿ ಒಟ್ಟು 32 ಗೋಷ್ಠಿಗಳು ನಡೆಯಲಿದ್ದು, ಈ ಗೋಷ್ಠಿಗಳಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಯುವ ಸಂಗೀತ ಕಲಾವಿದರು ಭಾಗವಹಿಸಿದ್ದಾರೆ. ಕಾರ್ಯಕ್ರಮದಲ್ಲಿ ಮೈಸೂರು ಸಂಸ್ಥಾನದ ಕೊನೆಯ ಅರಸರಾಗಿದ್ದ ಶ್ರೀ ಜಯಚಾಮರಾಜ ಒಡೆಯರ್‌ ಅವರ ಜನ್ಮ ಶತಮಾನೋತ್ಸವದವಾದ ಹಿನ್ನೆಲೆಯಲ್ಲಿ ಅವರ ಸ್ಮರಣೆಯ ಗೀತೆಗಳ ಗಾಯನ ನಡೆಯಲಿದೆ. 

ನಾವಿಂದು ಪರಿಸರದಿಂದ ದೂರವಾದಷ್ಟು ಪ್ರಕೃತಿ ತನ್ನ ಒಡಲಿಗೆ ನಮ್ಮನ್ನು ಎಳೆದುಕೊಳ್ಳುತ್ತಿದೆ. ಇದಕ್ಕೆ ಇತ್ತೀಚೆಗೆ ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಪ್ರವಾಹದಿಂದ ತಿಳಿಯಬಹುದು. ಇದು ಪ್ರಕೃತಿ ನಮಗೆ ನೀಡುತ್ತಿರುವ ಎಚ್ಚರಿಕೆಯೂ ಆಗಿದೆ. ಹೀಗಾಗಿ ಪ್ರಕೃತಿಯ  ಸಂರಕ್ಷಣೆ ಮಾಡುವುದರ ಮೂಲಕ ಪರಿಸರ ಸಂರಕ್ಷಣೆಯತ್ತ ನಮ್ಮನ್ನು ದೂಡಬೇಕಿದೆ. 
-ಟಿ.ಎಸ್‌. ನಾಗಾಭರಣ, ಚಿತ್ರ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next