Advertisement

ಯುವಜನತೆ ದೇಜಗೌ ಹಾದಿ ಅನುಸರಿಸಿ

12:01 PM Oct 05, 2018 | |

ಮೈಸೂರು: ಸಾಮಾಜಿಕ ಜಾಲತಾಣಗಳಲ್ಲಿ ಮೈಮರೆತು ಮುಳುಗಿರುವ ಯುವ ಸಮುದಾಯ ದೇಜಗೌ ಹಾದಿಯಲ್ಲಿ ನಡೆಯಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.

Advertisement

ಮಾನಸಗಂಗೋತ್ರಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಪರಿಷತ್‌ ಸಹಯೋಗದಲ್ಲಿ ಆಯೋಜಿಸಿದ್ದ ದೇಜಗೌ ಜನ್ಮಶತಮಾನೋತ್ಸವ ಹಾಗೂ ವಿಚಾರಗೋಷ್ಠಿಯಲ್ಲಿ ಮಾತನಾಡಿದ ಅವರು, ಬೇಂದ್ರ ಪದ್ಯ ಬ್ರಹ್ಮವಾದರೆ, ದೇಜಗೌ  ಗದ್ಯ ಬ್ರಹ್ಮರಾಗಿದ್ದಾರೆ. ಹಳೆಗನ್ನಡ, ಜಾನಪದ ಸಾಹಿತ್ಯದಲ್ಲಿ ಅಪಾರ ಸಂಶೋಧನೆ ನಡೆಸಿದ್ದರು. ದೇಜಗೌ ಸಾಹಿತ್ಯ ಕೃತಿಗಳನ್ನು ಪಟ್ಟಿ ಮಾಡಿದರೆ ಸಾಹಿತ್ಯ ಯಾತ್ರೆ ಮಾಡಿದಂತಾಗಲಿದೆ ಎಂದರು. 

ಸಾಹಿತಿ ಡಾ.ಕಮಲಾ ಹಂಪನಾ ಮಾತನಾಡಿ, ದೇಜಗೌ ಕೇವಲ ವಿದ್ಯಾಭ್ಯಾಸವನ್ನು ಮಾತ್ರ ಕಲಿಸಿದವರಲ್ಲ, ಬದಲಿಗೆ ಬದುಕು ಹೇಗೆ ನಡೆಯಬೇಕೆಂಬುದನ್ನೂ ಕಲಿಸಿದವರು. ಅವರ ಹಿಂದೆ ಶಿಷ್ಯಕೋಟಿಯೇ ಇತ್ತು. ದೇಜಗೌ ಒಂದು ಶತಮಾನದ ಅವಧಿಯನ್ನು ಕಂಡವರು, ಹೀಗಾಗಿ ದೇಜಗೌ ಬಗ್ಗೆ ಎಷ್ಟು ಹೇಳಿದಷ್ಟೂ ಕಡಿಮೆಯೇ. ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಿದ್ದ ದೇಜಗೌ, ತಾವಷ್ಟೇ ಅಲ್ಲದೆ ಅನೇಕರನ್ನು ಬೆಳೆಸಿದವರು.

ಲೋಕಸೇವಾ ಆಯೋಗದಲ್ಲಿ ಕನ್ನಡದ ಸುಳಿವೇ ಇರದಿದ್ದರೂ, ಇದಕ್ಕಾಗಿ ಹೋರಾಡಿ ಕನ್ನಡ ಪ್ರವೇಶ ಮಾಡಿಸಿದ್ದರು. ಈ ನಿಟ್ಟಿನಲ್ಲಿ ದೇಜಗೌರನ್ನು ನೆನಪಿಸಿಕೊಂಡು, ಅವರಿಗೆ ಗೌರವ ತೋರುತ್ತಿರುವ ಕೆಲಸವನ್ನು ಜಾನಪದ ಪರಿಷತ್‌ ಮತ್ತು ಸಾಹಿತ್ಯ ಅಕಾಡೆಮಿ ಮಾಡುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು. 

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್‌ ಅಧ್ಯಕ್ಷ ಟಿ.ತಿಮ್ಮೇಗೌಡ, ಸಾಹಿತಿಗಳಾದ ಡಾ.ಸಿ.ನಾಗಣ್ಣ, ಡಾ.ಸಿ.ಪಿ.ಕೃಷ್ಣಕುಮಾರ್‌, ಅಕಾಡೆಮಿ ರಿಜಿಸ್ಟ್ರಾರ್‌ ಎನ್‌.ಕರಿಯಪ್ಪ ಇನ್ನಿತರರಿದ್ದರು. 

Advertisement

ಸೋತರೂ ಮನೆಗೆ ಬಂದು ಹಾಲು ಕುಡಿದರು: ಕನ್ನಡ ಸಾಹಿತ್ಯ ಪರಿಷತ್‌ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನಕ್ಕಾಗಿ ಹಂಪನಾ ಮತ್ತು ದೇಜಗೌ ಇಬ್ಬರೂ ಸ್ಪರ್ಧಿಸಿದ್ದ ಹಿನ್ನೆಲೆಯಲ್ಲಿ ಗುರು ಶಿಷ್ಯರ ನಡುವೆ ಪೈಪೋಟಿ ನಡೆದಿತ್ತು. ಚುನಾವಣೆಯಲ್ಲಿ ಹಂಪನಾ ಆಯ್ಕೆಯಾಗಿದ್ದರು.

ಇದಾದ ಬಳಿಕ ಹಂಪನಾ ಅವರನ್ನು ಅಭಿನಂದಿಸಲು ಮನೆಗೆ ಬಂದಿದ್ದವರಲ್ಲಿ ದೇಜಗೌ ಕೂಡ ಇದ್ದರು. ಈ ವೇಳೆ ನನ್ನ ಶಿಷ್ಯ ಗೆದ್ದಿದ್ದು ಹಾಲು ಕುಡಿದಷ್ಟೇ ಸಂತೋಷವಾಯಿತು ಎಂದು ನಮ್ಮ ಮನೆಯಲ್ಲಿ ಹಾಲು ಕುಡಿದರು. ಇಂತಹ ಸಹೃದಯ ವ್ಯಕ್ತಿಯನ್ನು ಎಷ್ಟು ಕೊಂಡಾಡಿದರೂ ಸಾಲದು ಎಂದು ಡಾ.ಕಮಲಾ ಹಂಪನಾ ಈ ವೇಳೆ ಸ್ಮರಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next