ಬೆಂಗಳೂರು: ಚಿಕ್ಕಮಗಳೂರಿನಲ್ಲಿ ಕರ್ತವ್ಯದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದ ಯುವತಿಯ ಅಂಗಾಂಗಗಳನ್ನು ಪೋಷಕರು ಆಸ್ಪತ್ರೆಗೆ ದಾನ ಮಾಡುವ ಮೂಲಕ ಐವರ ಬಾಳಿಗೆ ಬೆಳಕಾಗಿದ್ದಾರೆ.
ಚಿಕ್ಕಮಗಳೂರಿನ ಹೊಸಕೊಪ್ಪದ ಎನ್‌ಆರ್ ಪುರ ತಾಲೂಕಿನ 22 ವರ್ಷದ ಟಿ.ಕೆ. ಗಾನವಿ ಶಿವಮೊಗ್ಗದ ನರ್ಸಿಂಗ್ ಹೋಮ್‌ನಲ್ಲಿ ನರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಫೆ. 8ರ ಬೆಳಗ್ಗೆ 3.30ಕ್ಕೆ ಕರ್ತವ್ಯ ನಿರ್ವಹಿಸುತ್ತಿರುವಾಗ ಕುಸಿದು ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿತ್ತು. ಫೆ. 12ರಂದು ಬ್ರೈನ್ ಡೆಡ್ ಆಗಿರುವುದಾಗಿ ವೈದ್ಯರು ಘೋಷಿಸಿದ್ದು, ಕುಟುಂಬಸ್ಥರು ಯುವತಿಯ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ನೀಡಿದ್ದು, ತುರ್ತು ಅಗತ್ಯವಿದ್ದ 5 ಮಂದಿಗೆ ದಾನ ಮಾಡಲಾಗಿದೆ.
ಇದನ್ನೂ ಓದಿ:ವಕೀಲ ಜಗದೀಶ್ ಸೆರೆ: 14 ದಿನ ನ್ಯಾಯಾಂಗ ಬಂಧನ
ಡಾ| ಸುಧಾಕರ್ ಟ್ವೀಟ್
ಮರಣ ಪೂರ್ವದಲ್ಲಿ ರೋಗಿಗಳ ಆರೈಕೆಯಲ್ಲಿ ಸೇವೆ ಸಲ್ಲಿಸಿದ್ದ ನರ್ಸ್ ಟಿ.ಕೆ. ಗಾನವಿ ಅವರು ಮರಣದ ಅನಂತರವೂ ತನ್ನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಜೀವನದ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ. ಆ ಮೂಲಕ ಲಕ್ಷಾಂತರ ಮಂದಿಗೆ ಪ್ರೇರಣೆಯಾಗಿದ್ದಾರೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಟ್ವೀಟ್ ಮಾಡಿದ್ದಾರೆ.