Advertisement
ಹುಡುಗರ ಜತೆ ಸೇರಿ ಯುವತಿಯರು ಮದ್ಯಪಾನ ಮಾಡು ವುದನ್ನು ಕಂಡರೆ ಭಯವಾಗುತ್ತದೆ ಎಂದು ಗೋವಾ ಮುಖ್ಯಮಂತ್ರಿ ಮನೋಹರ ಪಾರಿಕರ್ ವಿಧಾನಸಭೆ ವತಿಯಿಂದ ಇತ್ತೀಚೆಗೆ ಏರ್ಪಡಿಸಿದ್ದ ಯುವ ಸಂಸತ್ತಿನಲ್ಲಿ ಹೇಳಿದ್ದು ವಿವಾದದ ಕಿಡಿ ಹೊತ್ತಿಸಿತು. ಮಹಿಳಾ ಸಮುದಾಯವನ್ನು ಅವಮಾನಿಸಲೆಂದೇ ಪಾರಿಕರ್ ಈ ಹೇಳಿಕೆ ನೀಡಿದ್ದಾರೆಂದು ಕೆಲವರು ಹುಯಿಲೆಬ್ಬಿಸಿದರು. ಆದರೆ ಗೋವಾದಲ್ಲಿ ಮದ್ಯ ಮತ್ತು ಡ್ರಗ್ಸ್ ಮಾಫಿಯಾ ಆಳವಾಗಿ ಬೇರೂರಿರುವ ಹಿನ್ನೆಲೆಯಲ್ಲಿ ಪಾರಿಕರ್ ಅವರ ಮಾತುಗಳಿಗೆ ಅರ್ಥವಿದೆ.
ಮಾಂಡೋವಿ ನದಿಯಲ್ಲಿ ಹರಿಯುವ ನೀರಿಗಿಂತ ಹೆಚ್ಚು ಪ್ರಮಾಣದ ಮದ್ಯ ಗೋವಾದಲ್ಲಿ ಬಿಕರಿಯಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಪಾರಿಕರ್ ಆತಂಕ ನಿಜವೇ ಆಗಿದ್ದರೂ ಮದ್ಯ ಹಾಗೂ ಡ್ರಗ್ಸ್ ಹಾವಳಿ ತಡೆಗಟ್ಟಲು ಗೋವಾ ಸರಕಾರ ಕ್ರಮ ಕೈಗೊಂಡಿಲ್ಲವೇಕೆ? ಮಣಿಪುರ, ಗುಜರಾತ್, ಉತ್ತರ ಪ್ರದೇಶದಂತೆ ಗೋವಾದಲ್ಲೂ ಮದ್ಯ ನಿಷೇಧ ಜಾರಿ ಮಾಡಬಾರದೇಕೆ?
Related Articles
Advertisement
ಮದಿರೆ – ಮಾನಿನಿಸದ್ಯ ದೇಶದಲ್ಲಿ ಮದ್ಯ ಸೇವಿಸುವ ಮಾನಿನಿಯರ ಪ್ರಮಾಣ ಶೇ. 5ರಷ್ಟಿದೆ. ಕೆಲವೇ ವರ್ಷಗಳಲ್ಲಿ ಅದು ಶೇ. 25ಕ್ಕೇರುವ ಆತಂಕ ವ್ಯಕ್ತವಾಗಿದೆ. 18ರಿಂದ 24 ವಯಸ್ಸಿನ ಯುವತಿಯರು ಮದ್ಯ ಸೇವನೆಗೆ ಒಗ್ಗಿಕೊಳ್ಳುತ್ತಿರುವುದು, ಬಿಯರ್, ವೈನ್‌ಗಳಿಗೆ ಅವರೇ ಪ್ರಮುಖ ಗ್ರಾಹಕರಾಗುತ್ತಿರುವುದು ನಿಜಕ್ಕೂ ಕಳವಳಕಾರಿ. ಆಧುನಿಕತೆಯ ಅಮಲು
ಪಾಶ್ಚಾತ್ಯ ಜೀವನ ಶೈಲಿಯ ಅನುಕರಣೆ ನಮ್ಮ ಸಂಪ್ರದಾಯ ಗಳನ್ನೇ ಮರೆಸಿದೆ. ಆಧುನಿಕತೆಯ ಹೆಸರಿನಲ್ಲಿ, ಶ್ರೀಮಂತಿಕೆಯ ಅಮಲಿನಲ್ಲಿ ಪುರುಷರು ಹಾಗೂ ಸ್ತ್ರೀಯರು ಒಟ್ಟಿಗೇ ಕುಳಿತು ಕುಡಿಯುತ್ತಾರೆ. ಕುಡಿದರೆ ತಪ್ಪೇನು? ನಮ್ಮ ಹಣದಲ್ಲಿ ನಾವು ಕುಡಿ ಯುತ್ತೇವೆ? ನೈತಿಕ ಪೊಲೀಸ್‌ಗಿರಿ ಬೇಡ ಎನ್ನುವವರೂ ಇದ್ದಾರೆ. ನಗರದಲ್ಲಿ ವಾಸಿಸುವ ಕುಟುಂಬಗಳು ಮನೆಯಲ್ಲೇ ಮದ್ಯದ ದಾಸ್ತಾನು ಹೊಂದಿರುತ್ತವೆ. ಪತಿ – ಪತ್ನಿ ಒಟ್ಟಿಗೇ ಕುಳಿತು ಕುಡಿಯು ತ್ತಾರೆ. ಮನೆಗೆ ಬರುವ ಅತಿಥಿಗಳಿಗೆ ಮಹಿಳೆಯರೇ ಯಾವುದೇ ಮುಜುಗರವಿಲ್ಲದೆ ಮದ್ಯ ಸುರಿದು ಕೊಡುತ್ತಾರೆ, ತಾವೂ ಕುಡಿಯುತ್ತಾರೆ. ಕೆಲವರಿಗೆ ಇದು ಅಂತಸ್ತಿನ ಸೂಚಕವೂ ಆಗಿದೆ. ಸಂತೋಷ ಕೂಟಗಳು ಮದ್ಯವಿಲ್ಲದೆ ಕೊನೆಯಾಗುವುದೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ತಾಯಂದಿರೇ ಕುಡಿದರೆ ಮಕ್ಕಳು ರುಚಿ ನೋಡದಿರುತ್ತಾರೆಯೇ?
ಇನ್ನು ಮದುವೆ, ಮೆಹಂದಿ ಮತ್ತಿತರ ಕೌಟುಂಬಿಕ ಸಮಾರಂಭ ಗಳು ಮದ್ಯ ಪೂರೈಕೆಯಿಲ್ಲದಿದ್ದರೆ ಅಪೂರ್ಣ ಎನಿಸಿಕೊಳ್ಳುತ್ತದೆ. ಆಧುನಿಕ ಮೆಹಂದಿ ಕಾರ್ಯಕ್ರಮಗಳಲ್ಲಂತೂ ಮದ್ಯ ಅನಿ ವಾರ್ಯ. ಪುರುಷ-ಮಹಿಳೆ ಎಂಬ ಬೇಧವಿಲ್ಲದೆ ಕುಡಿದು ಕುಣಿದು ಕುಪ್ಪಳಿಸುವುದೇ ಈಗ ಇಂತಹ ಸಮಾರಂಭಗಳ ಪ್ರಧಾನ ಅಂಗವಾಗಿದೆ. ಮದ್ಯದ ಚಟ ನಗರಗಳಿಗೆ ಮಾತ್ರ ಸೀಮಿತ ಎನ್ನುವಂತಿಲ್ಲ, ಈಗೀಗ ಹಳ್ಳಿಗಳಲ್ಲೂ ಕದ್ದುಮುಚ್ಚಿ ಮದ್ಯ ಸೇವಿಸುವ ಮಾನಿನಿಯರು ಕಾಣಸಿಗುತ್ತಾರೆ. ಅಧಃಪತನಕ್ಕೆ ಸಾಕ್ಷಿ
ದೆಹಲಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದರ ವಿದ್ಯಾರ್ಥಿನಿ ಯನ್ನು ಮದ್ಯಪಾನದ ಬಗ್ಗೆ ಕೇಳಿದಾಗ, “ಹೌದು ನಾನು ಕುಡಿ ಯುತ್ತೇನೆ. ಇಲ್ಲಿ ಯಾರು ಕುಡಿಯುವುದಿಲ್ಲ? ನನಗೆ ಈಗ 20 ವರ್ಷ ವಯಸ್ಸು. ಯಾವುದು ಸರಿ, ಯಾವುದು ತಪ್ಪೆಂದು ನಾನೇ ನಿರ್ಧರಿಸಬÇÉೆ’ ಎಂದು ಮುಖಕ್ಕೆ ಹೊಡೆದಂತೆ ಉತ್ತರಿಸಿದ್ದಾಳೆ. “ಕೆಲಸ ಮುಗಿದ ಮೇಲೆ ನಡೆಯುವ ಸಂತೋಷ ಕೂಟಗಳಲ್ಲಿ ಸಹೋದ್ಯೋಗಿಗಳೊಂದಿಗೆ ಸ್ವಲ್ಪ ಮದ್ಯ ಸೇವಿಸಿದರೆ ತಪ್ಪೇನು? ಒಂದು ಗ್ಲಾಸು ವೈನೂ ಕುಡಿಯದೆ ನಾನು ಗುಂಪಿಗೆ ಸೇರದ ಪದವಾಗಲು ಇಚ್ಛಿಸುವುದಿಲ್ಲ’ – ಕಾರ್ಪೊರೇಟ್ ಸಂಸ್ಥೆಯ ಮಹಿಳಾ ಉದ್ಯೋಗಿಯೊಬ್ಬರು ಹೇಳಿದ ಮಾತಿದು. ಮದ್ಯದ ಹೊಳೆಯಲ್ಲಿ ಮಿಂದೇಳಲು ಪುರುಷರಷ್ಟೇ ಮಹಿಳೆಯರೂ ಹಾತೊರೆಯುತ್ತಿರುವುದು ಈಗಿನ ಫ್ಯಾಶನ್. ಇವುಗಳೆಲ್ಲ ಏನನ್ನು ಧ್ವನಿಸುತ್ತವೆ? ನಮ್ಮ ಸಮಾಜ ನೈತಿಕವಾಗಿ ಅಧಃಪತನಗೊಳ್ಳುವು ದಕ್ಕೆ ಇದೇ ಸಾಕ್ಷಿಯಲ್ಲವೇ? ಮಹಿಳೆಯರ ಮದ್ಯದ ಚಟದಿಂದ ಕುಟುಂಬ ಮತ್ತು ಸಮಾ ಜದ ಮೇಲೆ ವ್ಯತಿರಿಕ್ತವಾದ ಪರಿಣಾಮಗಳಾಗುತ್ತಿವೆ ಎನ್ನುವುದು ಅಧ್ಯಯನದಿಂದ ತಿಳಿದು ಬಂದ ವಿಚಾರ. ಹಾಗೆಂದು ಪುರುಷ ಮದ್ಯ ಚಟದಿಂದ ಪರಿಣಾಮವಾಗುವುದಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಬಹುದು. ಕುಟುಂಬದಲ್ಲಿ ಪುರುಷ ದಾರಿ ತಪ್ಪಿ ನಡೆದರೂ ಮನೆಯನ್ನು ಸರಿತೂಗಿಸಿಕೊಂಡು ಹೋಗುವ ಸಾಮರ್ಥ್ಯ ಹೆಣ್ಣಿನಲ್ಲಿರುತ್ತದೆ. ಆದರೆ ಮಹಿಳೆಯೇ ದಾರಿ ತಪ್ಪಿದರೆ ಪುರುಷ ಅಸಹಾಯಕನಾಗುತ್ತಾನೆ. ಇದರಿಂದಾಗಿಯೇ ಕುಟುಂಬಗಳು ಛಿದ್ರಗೊಂಡಿರುವ ನೂರಾರು ಉದಾಹರಣೆಗಳಿವೆ. ಮನೆಯಿಂದ ದೂರ, ಮದ್ಯಕ್ಕೆ ಹತ್ತಿರ!
ಶಿಕ್ಷಣಕ್ಕಾಗಿ ಮನೆಯಿಂದ ಹೊರಗಿರುವ ವಿದ್ಯಾರ್ಥಿಗಳು, ಕೆಲಸಕ್ಕೆ ಸೇರಿ ಪಿಜಿಗಳಲ್ಲಿರುವವರು ಕುಡಿತದ ಚಟಕ್ಕೆ ಒಳಗಾಗುವ ಸಾಧ್ಯತೆ ಜಾಸ್ತಿ. ಹುಡುಗಿಯೊಬ್ಬಳನ್ನು ಪ್ರಶ್ನಿಸಿದಾಗ, ಹೆತ್ತವರ ಉಪಸ್ಥಿತಿಯಲ್ಲಿ ಮದ್ಯದ ಬಗ್ಗೆ ಯೋಚಿಸಲೂ ಭಯ ಪಡುತ್ತೇನೆ. ಅವರು ಇಲ್ಲದಿದ್ದಾಗ ಎಣ್ಣೆ ಹೊಡೆಯುತ್ತೇನೆ ಎಂದು ಕಣ್ಣು ಮಿಟುಕಿಸಿದಳು. ಇಂಥ ಕಳ್ಳ ಮನಸ್ಸುಗಳು ಎಷ್ಟಿವೆಯೋ? ಶಾಲೆ ತೆರೆಯುತ್ತೀರೋ? ಬಾರನ್ನೋ?
ನಗರೀಕರಣ, ವೈದ್ಯಕೀಯ , ತಾಂತ್ರಿಕ ಶಿಕ್ಷಣ, ಕಾರ್ಪೊರೇಟ್ ಸಂಸ್ಕೃತಿ, ಪಾರ್ಟಿ, ಫ್ಯಾಶನ್ ಶೋ ಇತ್ಯಾದಿಗಳು ಯುವಜನರಲ್ಲಿ ಮದ್ಯದ ಚಟವನ್ನು ಬಿತ್ತುತ್ತಿವೆ. ಸಮಾನತೆಯ ಅಮಲು ಬೇರೆ ಅವರನ್ನು ಕಾಡುತ್ತಿದೆ. ಕಂಪನಿ ಕೊಡಲೆಂದು ಶುರುವಾಗುವ ಮದ್ಯಸೇವನೆ ಕೊನೆಗೆ ಚಟವಾಗಿ ನಮ್ಮನ್ನೇ ಆಳುತ್ತದೆ ಎಂಬ ಅರಿವೂ ಇಲ್ಲದೆ ಕುಡಿಯುತ್ತಾರೆ! ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುತ್ತಾರೆ. ಹಾಗಾದರೆ ಹೆಣ್ಣು ಕುಡಿಯುವುದನ್ನು ಕಲಿತರೆ ಬಾರೊಂದು ತೆರೆದಂತೆ ಎನ್ನಬಹುದೇ? ಹೆಣ್ಣುಮಕ್ಕಳ ಸಾಧನೆಗೆ ಸಾಕಷ್ಟು ಒಳ್ಳೆಯ ಆಯ್ಕೆ ಹಾಗೂ ಅವಕಾಶಗಳಿವೆ. ಆದರೆ ಸಂಪ್ರದಾಯ ವನ್ನು ಮುರಿಯುವ ಉತ್ಸಾಹದಲ್ಲಿ ಹಾಗೂ ಸಮಾನತೆಯ ಭರದಲ್ಲಿ ಮಹಿಳೆ ಕುಡಿತವನ್ನು ಆಯ್ದುಕೊಳ್ಳುವುದು ಸರಿಯೇ? ಮದ್ಯಪಾನದ ಅರಿವುಳ್ಳ, ಇತರರಿಗೂ ಈ ಬಗ್ಗೆ ತಿಳಿಹೇಳಬಲ್ಲ ವಿದ್ಯಾವಂತ ಹಾಗೂ ಅನುಕೂಲಸ್ಥ ಕುಟುಂಬದವರೇ ಈ ರೀತಿ ನಶೆಯಲ್ಲಿ ಬಿದ್ದರೆ ಅವರ ಭವಿಷ್ಯದ ಕತೆಯೇನು? ಮಿತಿಯ ಸಮರ್ಥನೆ
ಮಹಿಳೆಯರು ಮಿತವಾಗಿ ಕುಡಿಯುತ್ತಾರೆ ಎಂಬ ವಾದವಿದೆ. ಆದರೆ ಮಹಾನಗರಗಳ ಪೊಲೀಸರನ್ನು ಕೇಳಿದರೆ ಇದರ ಅಸಲಿ ಮುಖ ಬಹಿರಂಗವಾಗುತ್ತದೆ. ಕುಡಿಯಲು ಶುರುವಿಟ್ಟ ಮೇಲೆ ಮಿತಿಯೆಲ್ಲ ಮರೆತು ಹೋಗುತ್ತದೆ. ಸ್ಪರ್ಧೆಗೆ ಬಿದ್ದವರಂತೆ, ಕೆಲವೊಮ್ಮೆ ತಮ್ಮ ಜತೆಗಿರುವ ಪುರುಷರಿಗಿಂತಲೂ ಜಾಸ್ತಿ ಮದ್ಯ ಕುಡಿದ ನಿದರ್ಶನಗಳೂ ಇವೆಯಲ್ಲ? ಮಿತಿಮೀರಿ ಕುಡಿದ ಮಹಿಳೆಯರು ಪುರುಷರಿಗಿಂತಲೂ ಕೆಟ್ಟದಾಗಿ ವರ್ತಿಸುತ್ತಾರೆ ಎಂದು ರಾತ್ರಿ ಬೀಟ್‌ನಲ್ಲಿರುವ ಪೊಲೀಸರಿಗೆ ಸಾಕಷ್ಟು ಅನುಭವ ಗಳಿಂದ ವೇದ್ಯವಾಗಿದೆ. ಗುಂಡಿನ ಮತ್ತಲ್ಲಿ ವಾಹನ ಚಾಲನೆ ಮಾಡಿದ ಸಂಬಂಧ ಬೆಂಗಳೂರು ಮಹಾನಗರದಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ. 30ರಷ್ಟು ಮಹಿಳೆಯರೇ ಮೇಲೆಯೇ ಇವೆಯಂತೆ. ಅನ್ಯ ರಾಜ್ಯಗಳಿಂದ ಉದ್ಯೋಗ ನಿಮಿತ್ತ ಉದ್ಯಾನನಗರಿಗೆ ಬಂದ ಯುವತಿಯರಿಂದಲೇ ಮದ್ಯದ ಕಿರಿಕಿರಿ ಜಾಸ್ತಿಯಂತೆ. ದಂಡ ಕಟ್ಟಿದರೆ ಪೊಲೀಸರು ಬಿಟ್ಟು ಬಿಡುತ್ತಾರೆ ಎಂಬ ಸದರ ಒಂದೆಡೆ. ಮತ್ತೂ ಕೆಲವರು ದಂಡ ಕಟ್ಟಲೂ ಕಿರಿಕಿರಿ ಮಾಡುತ್ತಾರೆ. ಪೊಲೀಸರನ್ನೇ ವಾಚಾಮಗೋಚರ ಬೈದು, ಹಲ್ಲೆ ಮಾಡಲು ಮುಂದಾಗುತ್ತಾರೆ. ಪೊಲೀಸರು ಇವರನ್ನು ಸಾಗಹಾಕದಿದ್ದರೆ ಕಿರುಕುಳದ ಆರೋಪ ಹೊರಿಸುತ್ತಾರೆ. ಬೆಂಗಳೂರಿನ ಪಬ್‌ಗಳಿಗೆ ಬರುವ ಗ್ರಾಹಕರ ಪೈಕಿ ಶೇ. 20ರಷ್ಟು 13ರಿಂದ 19 ವಯೋಮಿತಿಯ ಹೆಣ್ಣು ಮಕ್ಕಳು ಎಂದರೆ ಭಯ ವಾಗು ವುದಿಲ್ಲವೇ? ಇದು ಬದಲಾದ ಜೀವನ ಶೈಲಿಯ ದ್ಯೋತಕವೇ? ಮದ್ಯ ಮಾತ್ರವಲ್ಲ, ಬಿಂದಾಸ್ ಆಗಿ ಸಿಗರೇಟು – ಗಾಂಜಾ ಸೇದುವ ಹೆಣ್ಣು ಮಕ್ಕಳು, ಅದರ ಅಮಲಿನಲ್ಲಿ ಅಸುರಕ್ಷಿತ ಲೈಂಗಿಕ ಸಂಪರ್ಕಕ್ಕೂ ಒಳಗಾಗುತ್ತಿರುವುದು ಆತಂಕದ ವಿಷಯವಲ್ಲವೇ? ಸಮಾನತೆಯ ಪ್ರಶ್ನೆ
ಮನೆ – ಕಚೇರಿ ಎರಡೂ ಕಡೆ ಅಚ್ಚುಕಟ್ಟಾಗಿ ನಿಭಾಯಿಸುವ ಮಹಿಳೆ ಒಂದೆರಡು ಪೆಗ್ ಮದ್ಯ ಸೇವಿಸಿದರೆ ತನ್ನನ್ನು ತಾನು ನಿಯಂತ್ರಿಸಿಕೊಳ್ಳಲಾರಳೇ? ಎಂದು ಕೇಳುವವರಿದ್ದಾರೆ. ಮಹಿಳೆ ಯರು ಮದ್ಯ, ಗಾಂಜಾ, ಸಿಗರೇಟು ಸೇದಬಾರದು ಅನ್ನುತ್ತೀರಿ, ಪುರುಷರು ಇದನ್ನೆಲ್ಲ ಮಾಡಿದರೆ ಸರಿಯೇ ಎಂಬ ಪ್ರಶ್ನೆಯೂ ಮೂಡುತ್ತದೆ. ದುಶ್ಚಟ ಯಾರು ಮಾಡಿದರೂ ತಪ್ಪೇ. ಗಾದೆಯೇ ಇದೆಯಲ್ಲ – ಚಟವಿರುವ ಗಂಡಸರನ್ನು ನಂಬಬಾರದಂತೆ! ನಿಯಂತ್ರಣ ಹೇಗೆ?
ಕುಡಿತ ನಿಮ್ಮ ನಿತ್ಯದ ಅಭ್ಯಾಸವೇ? ಬೆಳಗ್ಗೆಯೇ ಕುಡಿಯಬೇಕು ಅನ್ನಿಸುತ್ತಿದೆಯೇ? ಕುಡಿಯದಿದ್ದರೆ ಕೈಕಾಲು ನಡುಗುತ್ತ ವೆಯೇ? ಕುಡಿತದಿಂದಾಗಿ ನಿಮ್ಮ ಕೆಲಸ, ಸಂಸಾರ, ಸಂಬಂಧ, ಗೆಳೆತನ ಇತ್ಯಾದಿಗಳಿಗೆ ತೊಂದರೆ ಆಗುತ್ತಿದೆಯೇ? ಆರಂಭದಲ್ಲಿ ವಿಧಿಸಿಕೊಂಡಿದ್ದ ಮಿತಿಯನ್ನು ಮೀರಿ ಕುಡಿಯುತ್ತಿದ್ದೇನೆ ಅನ್ನಿಸುತ್ತಿ ದೆಯೇ? ಶುರು ಮಾಡಿದ ಮೇಲೆ ನಿಲ್ಲಿಸುವುದಕ್ಕೆ ಸಮಸ್ಯೆಯೇ? ಹಾಗಿದ್ದರೆ, ನೀವು ಚಟಕ್ಕೆ ಬಿದ್ದಿದ್ದೀರಿ ಎಂದು ಅರ್ಥ. ಅದಕ್ಕೆ ಚಿಕಿತ್ಸೆಯ ಅಗತ್ಯ ಖಂಡಿತ ಇದೆ. ಇಲ್ಲದಿದ್ದರೆ ನಿಮ್ಮ ಆರೋಗ್ಯ, ಹಣ, ಕುಟುಂಬದ ನೆಮ್ಮದಿ ಸರ್ವನಾಶವಾಗುತ್ತದೆ. ಮದ್ಯದ ಚಟ ಪುರುಷರಿಗೆ ಹಾಗೂ ಮಹಿಳೆಯರಿಗೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಾಗೆ ನೋಡಿದರೆ ಮದ್ಯ ಪುರುಷರಿಗಿಂತ ಮಹಿಳೆಯರಿಗೆ ಹಾನಿ ಮಾಡುವುದು ಹೆಚ್ಚು ಎನ್ನುವುದು ವೈದ್ಯರ ಅಭಿಮತ. ಏಕೆಂದರೆ, ಮಹಿಳೆಯ ದೇಹದಲ್ಲಿ ಕೊಬ್ಬಿನ ಪ್ರಮಾಣ ಜಾಸ್ತಿ ಇರುತ್ತದೆ. ನೀರಿನ ಅಂಶ ಕಡಿಮೆ ಇರುತ್ತದೆ.ಮಹಿಳೆಯರ ಯಕೃತ್ತು ಕೂಡ ಪುರುಷರಿಗಿಂತ ಚಿಕ್ಕದು. ಇಂತಹ ದೇಹ ರಚನೆ ಇರುವ ಕಾರಣಕ್ಕಾಗಿ ಮಹಿಳೆಯ ದೇಹದಲ್ಲಿ ಮದ್ಯ ಜೀರ್ಣವಾಗಲು ಹೆಚ್ಚು ಹೊತ್ತು ಹಿಡಿಯುತ್ತದೆ. ಚಟಕ್ಕೆ ಬಿದ್ದವರಂತೆ ಮದ್ಯಪಾನ ಮಾಡುವ ಮಹಿಳೆಯರು ಕ್ರಮೇಣ ಖನ್ನತೆ ಹಾಗೂ ಇತರ ಮಾನಸಿಕ, ದೈಹಿಕ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಅಲ್ಲದೆ, ಲಿಂಗ ತಾರತಮ್ಯದ ಕಾರಣಕ್ಕಾಗಿ ಮಹಿಳೆಯರ ಮೇಲೆ ಇನ್ನಷ್ಟು ಹೊರೆ ಬೀಳುತ್ತಿದೆ. ವ್ಯಸನಮುಕ್ತಿ ಕೇಂದ್ರಗಳಿಗೆ ದಾಖಲಾಗಲೂ ಇದೇ ಅವರಿಗೆ ಅಡ್ಡಿಯಾಗುತ್ತಿದೆ. ನಾಳೆಯೇಕೆ ಇಂದೇ ಬಿಡಿ
ಸ್ವಯಂಶಿಸ್ತು ಇಲ್ಲಿ ಬಹುಮುಖ್ಯ. ಹಿರಿಯರೂ ತಮ್ಮಚಟಗಳ ಬಗ್ಗೆ ಪರಾಮರ್ಶೆ ನಡೆಸಿ, ಮಕ್ಕಳಿಗೆ ಅದರ ದುಷ್ಪರಿಣಾಮಗ ಳನ್ನು ತಿಳಿಹೇಳಿ, ಎಲ್ಲರೂ ಚಟಮುಕ್ತರಾಗು ವುದು ಸದ್ಯದ ಅನಿ ವಾರ್ಯತೆ. ಗೆಳೆಯರು ಒತ್ತಾಯಿಸಿದಾಗ ಒÇÉೆ ಎಂದರೆ ಹಾಗೂ ಈ ಮಾತಿಗೆ ಅಂಟಿಕೊಂಡರೆ ಸಾಕು, ಚಟ ನಮ್ಮ ಹತ್ತಿರಕ್ಕೂ ಸುಳಿಯುವುದಿಲ್ಲ. ಇದೇ ಕೊನೆ, ಇನ್ನು ಕುಡಿಯುವುದಿಲ್ಲ ಎಂದರೆ ನಂಬುವಂತಿಲ್ಲ. ಅಂಥ ನಾಳೆ ಬರುವುದೇ ಇಲ್ಲ. ನಾಳೆಯಿಂದ ಕುಡಿಯುವುದಿಲ್ಲ ಎನ್ನುವವರಿಗೆ ಇಂದೇ ಬಿಡಲು ಏನು ಅಡ್ಡಿ? ಅನಂತ ಹುದೆಂಗಜೆ