ಮಲ್ಪೆ: ಭಾರತದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ “ಶಿಖರದಿಂದ ಸಾಗರ’ ಐತಿಹಾಸಿಕ ಯಾನದಲ್ಲಿ ಭಾಗಿಯಾಗಿರುವ ರಾಜ್ಯದ 5 ಯುವತಿಯರು ಕಾಶ್ಮೀರದಲ್ಲಿ ಕೋಲ್‌ಹೈ (5,425 ಮೀ.) ಶಿಖರವನ್ನು ಯಸ್ವಿಯಾಗಿ ಏರಿ, ಅನಂತರ ಲಡಾಖ್‌ನಿಂದ 3,000 ಕಿ.ಮೀ. ಸೈಕಲ್ ಯಾನ ಮಾಡುತ್ತಾ ಕಾರವಾರ ತಲುಪಿದ್ದು, ಕಾರವಾರದಿಂದ ಕರ್ನಾಟಕದ ಕರಾವಳಿಯ 300 ಕಿ.ಮೀ. ಸಮುದ್ರದಲ್ಲಿ ಕಯಾಕಿಂಗ್ ಯಾನ ಮಾಡುತ್ತ ಗುರುವಾರ ಮಲ್ಪೆ ಸಮುದ್ರ ತೀರಕ್ಕೆ ಆಗಮಿಸಿದ್ದಾರೆ. ಯಾತ್ರೆಯು ಮಂಗಳೂರಿನಲ್ಲಿ ಮುಕ್ತಾಯಗೊಳ್ಳಲಿದೆ.
ಮಲ್ಪೆ ಸಮದ್ರ ತೀರದಲ್ಲಿ ಜಿಲ್ಲಾಡಳಿತದ ಪರವಾಗಿ ಪ್ರಭಾರ ಜಿಲ್ಲಾಧಿ ಕಾರಿಯಾಗಿರುವ ಜಿ.ಪಂ. ಸಿಇಒ ಡಾ| ನವೀನ್ ಭಟ್ ಸ್ವಾಗತಿಸಿದರು. ಯುವತಿಯರು ಸಾಹಸ ಕ್ರೀಡೆಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸುವ ಜತೆಗೆ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತು ¤ಒಲಿಂಪಿಕ್‌ನಲ್ಲಿ ಉತ್ತಮ ಸಾಧನೆ ಮಾಡುವ ದಿಟ್ಟ ನಿರ್ಧಾರ ಮಾಡಬೇಕು ಎಂದು ತಿಳಿಸಿದರು.
ಅನುಭವ ಹಂಚಿಕೊಂಡ ಯುವತಿಯರು:
ಶಿಖರವೇರುವ ಸಂದರ್ಭ 25 ಕೆ.ಜಿ.ಗೂ ಅಧಿಕ ಭಾರದ ಬ್ಯಾಗ್‌ಗಳನ್ನು ಹೊತ್ತುಕೊಂಡು, ಜೀವವನ್ನು ಪಣಕ್ಕಿಟ್ಟು ಸಾಹಸ ಮಾಡಿದ್ದೇವೆ. ಯಾನದ ವೇಳೆ ಟೆಂಟ್ ಹಾಕುವುದು, ಅಡುಗೆ ಸೇರಿದಂತೆ ನಮ್ಮ ಎಲ್ಲ ಅಗತ್ಯಗಳನ್ನು ಯಾರನ್ನೂ ಅವಲಂಬಿಸದೇ ಶಿಖರವನ್ನು ನಿಗದಿತ ಅವಧಿಗಿಂತ ಮುಂಚಿತವಾಗಿಯೇ ಏರಿ ಸಾಧನೆ ಮಾಡಿದ್ದೇವೆ. ಸೈಕ್ಲಿಂಗ್ ವೇಳೆ ವಿವಿಧ ಪ್ರದೇಶಗಳಲ್ಲಿನ ಯುವತಿಯರು ಮತ್ತು ಮಹಿಳೆಯರ ಸಮಸ್ಯೆಗಳನ್ನು ಕಂಡಿದ್ದು, ಮಹಿಳೆ ಯರು ಮನೆಯಿಂದ ಹೊರಬಂದು ಸಾಹಸಿಗಳಾಗಬೇಕು ಎನ್ನುವ ಉದ್ದೇಶ ದಿಂದ ಮುಂದಿನ ದಿನದಲ್ಲಿ ಅರಿವು ಕಾರ್ಯಕ್ರಮಗಳನ್ನು ಮಾಡುವ ಉದ್ದೇಶ ಇದೆ ಎಂದು ಐತಿಹಾಸಿಕ ಯಾನದ ತಂಡದಲ್ಲಿರುವ ಶಿವಮೊಗ್ಗದ ಐಶ್ವರ್ಯಾ ಮತ್ತು ಧನಲಕ್ಷ್ಮೀ, ಬೆಂಗಳೂರಿನ ಆಶಾ, ಮಡಿಕೇರಿಯ ಪುಷ್ಪಾ ಮತ್ತು ಮೈಸೂರಿನ ಬಿಂದು ಅವರು ಯಾತ್ರೆಯ ಅನುಭವ ಹಂಚಿಕೊಂಡರು.
ಉಡುಪಿ ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕ್ಲಿಫರ್ಡ್ ಲೋಬೋ ಮತ್ತು ಸಾಹಸ ಯಾತ್ರೆಯ ಮಾರ್ಗದರ್ಶಕರಾಗಿ ಕೆಲಸ ಮಾಡಿದ ಶಬ್ಬೀರ್ ಉಪಸ್ಥಿತರಿದ್ದರು. ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ| ರೋಶನ್ ಕುಮಾರ್ ಶೆಟ್ಟಿ ಅವರು ಸ್ವಾಗತಿಸಿ, ವಂದಿಸಿದರು.
ಪಡುಕರೆಯಲ್ಲಿ ಸಾಹಸ ತರಬೇತಿ ಕೇಂದ್ರ:
ಉಡುಪಿ ಜಿಲ್ಲೆಯಲ್ಲಿಯೂ ಸಾಹಸ ಕಾರ್ಯ ಕ್ರಮಗಳ ತರಬೇತಿಗೆ ಈಗಾಗಲೇ ಪಡುಕರೆಯಲ್ಲಿ ಸ್ಥಳ ಗುರು ತಿಸ ಲಾಗಿದ್ದು, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಮೂಲಕ ಇಲ್ಲೂ ಸಹ ಸಾಹಸ ಕ್ರೀಡೆಗಳ ತರಬೇತಿ ಕೇಂದ್ರ ಆರಂಭವಾಗಲಿದ್ದು, ಜಿಲ್ಲೆಯ ಯುವ ಜನತೆಯ ಈ ಕೇಂದ್ರದ ಪ್ರಯೋಜನ ಪಡೆಯಬೇಕು ಎಂದು ನವೀನ್ ಭಟ್ ಹೇಳಿದರು.