ಮಡಿಕೇರಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಕೆಎಫ್ಡಿ ಸಂಘಟನೆಗಳನ್ನು ನಿಷೇಧಿಸ ಬೇಕು ಮತ್ತು ಸಚಿವ ರಮಾನಾಥ ರೈ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಯುವ ಮೋರ್ಚಾದ ಜಿಲ್ಲಾಧ್ಯಕ್ಷ ಕಾಳನ ರವಿ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಕಾರ್ಯಕರ್ತರು ರಾಜ್ಯ ಸರಕಾರ ಹಾಗೂ ಸಚಿವ ರಮಾನಾಥ ರೈ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಂಟ್ವಾಳ ದಲ್ಲಿ ನಡೆದ ಆರ್‌ಎಸ್‌ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಹತ್ಯೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರು ಭಾಗಿಯಾಗಿರುವುದು ದೃಢಪಟ್ಟಿರುವುದರಿಂದ ಪಿಎಫ್ಐ ಹಾಗೂ ಕೆಎಫ್ಡಿ ಸಂಘಟನೆಗಳನ್ನು ರಾಜ್ಯದಲ್ಲಿ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂಘಟನೆಗಳ ಬ್ಯಾಂಕ್ ಖಾತೆಗಳನ್ನು ಹಾಗೂ ಸ್ಥಿರ ಮತ್ತು ಚರಾಸ್ತಿಗಳನ್ನು ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು. 2008ರ ರಾಷ್ಟ್ರೀಯ ತನಿಖಾದಳ ಕಾಯ್ದೆಯ ಸೆಕ್ಷನ್ 6ರ ಅನ್ವಯ ರಾಜ್ಯದಲ್ಲಿ ಹಿಂದೂಗಳ ಮೇಲೆ ಆಗಿರುವ ಎಲ್ಲ ಹತ್ಯೆ ಮತ್ತು ಹಲ್ಲೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕು ಎಂದು ಆಗ್ರಹಿಸಿದರು.
ಸಮಾಜಘಾತಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಸಚಿವ ರಮಾನಾಥ್ ರೈ ಅವರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಕಾರರು, ಸಚಿವ ಸಂಪುಟದಿಂದ ವಜಾಗೊಳಿಸಬೇಕಲ್ಲದೆ, ಅವರು ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.ಕರ್ನಾಟಕದಲ್ಲಿ ಹಿಂದೂಗಳ ಕೊಲೆ ಮತ್ತು ಹಲ್ಲೆ, ಕೋಮು ದಳ್ಳುರಿಗೆ ಕುಮ್ಮಕ್ಕು ನೀಡುವುದರೊಂದಿಗೆ ಶಾಂತಿ ಸೌಹಾರ್ದಕ್ಕೆ ಭಂಗ ತರುವ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿರುವ ಸಂಘಟನೆಗಳ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಕಾರರು ಅಪರ ಜಿಲ್ಲಾಧಿಕಾರಿ ಸತೀಶ್‌ಕುಮಾರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು. ಬಿಜೆಪಿ ನಗರಾಧ್ಯಕ್ಷ ಮಹೇಶ್‌ಜೈನಿ, ಪ್ರಧಾನ ಕಾರ್ಯದರ್ಶಿ ಉಮೇಶ್ ಸುಬ್ರಮಣಿ, ಪ್ರಮುಖರಾದ ಬಿ.ಕೆ. ಜಗದೀಶ್, ಬಿ.ಕೆ. ಅರುಣ್‌ಕುಮಾರ್, ಕೆ.ಕೆ.ಅಯ್ಯಪ್ಪ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.