ನೀನಿಲ್ಲದೇ ನಿದ್ರೆಗೂ ಬರ ಬಂದುಬಿಟ್ಟಿದೆ. ನೀನಿದ್ದರೆ ತಾನೇ ಈ ಬಾಳಿಗೆ ಬೆಳಕು, ನೆಮ್ಮದಿಯ ಉಸಿರಾಟವೆಲ್ಲ….ನೀನಿಲ್ಲದಿರೆ ಎಲ್ಲವೂ ಶೂನ್ಯ….
ಆಕಾಶಕ್ಕೆ ತೂತು ಬಿದ್ದಂತೆ ಒಂದೇ ಸಮನೆ ಸುರಿಯುತ್ತಿರುವ ಜಿಟಿ-ಜಿಟಿ ಮಳೆ, ಮನದಲ್ಲಿ ಅದೆಷ್ಟೋ ಭಾವನೆಗಳನ್ನು ಗೀಚಲು ಶುರು ಮಾಡಿದೆ. ಮನಸ್ಸಿಗೆ ಮಂದಹಾಸ ನೀಡುವ ಕಾಲ ಸನಿಹಕ್ಕೆ ಬಂದಿರುವಾಗ ನೀನೆಲ್ಲಿಗೆ ಹೋಗಿರುವೆ ಗೆಳೆಯಾ? ಒಮ್ಮೆ ಇತ್ತ ಕಡೆ ನೋಡು! ನೀನು ತಂದು ಕೊಟ್ಟ ಬಣ್ಣದ ಛತ್ರಿಯೂ ನಿನ್ನಾಗಮನವನ್ನೇ ಬಯಸುತ್ತಿದೆ. ಮಳೆಗಾಗಿಯೇ ಕಾಯುತ್ತ ಕುಳಿತಿದ್ದ ಅದೆಷ್ಟೋ ಆಸೆ, ಕನಸುಗಳು ತಿರುತಿರುಗಿ ನನ್ನತ್ತಲೇ ನೋಡುತ್ತಿವೆ. ಅವಕ್ಕೆಲ್ಲ ಏನೆಂದು ಉತ್ತರಿಸಲಿ ಹೇಳು? ಯೋಚಿಸಿದಷ್ಟೂ ಬರಿಯ ಪ್ರಶ್ನಾರ್ಥಕ ಚಿಹ್ನೆಗಳು ಮೂಡುತ್ತಿವೆ ಮನದಲ್ಲಿ.
ನಿನ್ನನ್ನು ಬಿಟ್ಟು ಅರೆಕ್ಷಣವೂ ಇರಲಾರದ ಈ ಜೀವ, ನಿನ್ನನ್ನು ನೋಡಲು ಹಪಹಪಿಸುತ್ತಿದೆ. ಮೊದಲೆಲ್ಲಾ ನಿನ್ನ ನೆನಪು ಬಂದ ಕ್ಷಣ ಮಾತ್ರದಲ್ಲಿಯೇ ಕಣ್ಣೆದುರಿಗೆ ಪ್ರತ್ಯಕ್ಷವಾಗುತ್ತಿದ್ದ ನಿನಗೆ, ಈಗ ನನ್ನ ನೋವು ಅರ್ಥವಾಗುತ್ತಲೇ ಇಲ್ವಾ? ನನ್ನ ಬಾಳ ರಥದ ಗಾಲಿಗಳು ನೀನಿಲ್ಲದೆ ಮುನ್ನಡೆಯುತ್ತಲೇ ಇಲ್ಲ! ಈ ಕಣ್ಣಿಂದ ಕಣ್ಣೀರು ಖಾಲಿಯಾಗಿ, ರಕ್ತ ಸುರಿಯುವ ಮುನ್ನ ನಿನ್ನನ್ನು ನೋಡಬೇಕು ನಾನು. ನೀನಿಲ್ಲದೇ ನಿದ್ರೆಗೂ ಬರ ಬಂದುಬಿಟ್ಟಿದೆ. ನೀನಿದ್ದರೆ ತಾನೇ ಈ ಬಾಳಿಗೆ ಬೆಳಕು, ನೆಮ್ಮದಿಯ ಉಸಿರಾಟವೆಲ್ಲ….ನೀನಿಲ್ಲದಿರೆ ಎಲ್ಲವೂ ಶೂನ್ಯ….
ಬಹುಶಃ ನಿನ್ನ ಬರುವಿಕೆಯ ಮುನ್ಸೂಚನೆಯಿಂದಲೋ ಏನೋ ಮಳೆ ನಿಲ್ಲದೆ ಸುರಿಯುತ್ತಲೇ ಇದೆ. ಮನಸ್ಸೂ ಕೂಡ ಭರವಸೆಯ ಭಾವನೆಯಲ್ಲಿ ಮುಳುಗಿ ನಿನ್ನ ದಾರಿಯನ್ನೇ ಎದುರು ನೋಡುತ್ತಿದೆ. ವಸುಂಧರೆಯ ಮಡಿಲಿಗೆ ಮುಂಗಾರಿನ ಆಗಮನವಾಗಿರುವ ಈ ಸುಮಧುರ ಘಳಿಗೆಯಲ್ಲಿ, ನೀ ನನ್ನ ಜೊತೆಯಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು? ಮಳೆ ಹನಿಗಳು ಮೈಗಂಟಿಕೊಂಡು ಮುತ್ತಿಡುವಾಗಲೆಲ್ಲ ನೀನು ನನ್ನೊಡನೆ ಇದ್ದರೆ ಲೆಕ್ಕಕ್ಕೆ ಸಿಗದಷ್ಟು ಖುಷಿ ಸಿಗುತ್ತಿತ್ತೇನೋ! ಆದರೆ, ನೀನು ವಿಳಾಸವೂ ಸಿಗದಂತೆ ಕಣ್ಮರೆಯಾಗಿರುವುದರ ಕಾರಣವಾದರೂ ಏನು? ಹೀಗೆ ಹೇಳದೇ ಕೇಳದೇ ಹೊರಟು ಹೋಗಿರುವೆಯಲ್ಲಾ, ನಿನಗೆ ನಮ್ಮ ಪ್ರೀತಿಯ ಆಳ-ಅಗಲ ತಿಳಿದಿದೆಯಾ? ನಿನ್ನ ನೆನಪುಗಳು ಮನದಲ್ಲಿ ಲೆಕ್ಕವಿಲ್ಲದಷ್ಟು ವೇಗದಲ್ಲಿ ಚಲಿಸುತ್ತಿವೆ ಗೊತ್ತಾ? ಅವನ್ನೆಲ್ಲಾ ಹೇಗೆ ಸಾಯಿಸಲಿ ಹೇಳು? ಈ ಪ್ರೀತಿಯ ಕಾರ್ಮೋಡ ಕವಿದದ್ದು ಕಣ್ಣೀರಿನ ಮಳೆ ಸುರಿಯಲೆಂದೇ ಅಥವಾ ನೋವಿನಾಗಸದಲ್ಲಿ ನಾನು ತೇಲಾಡಲೆಂದೇ?
ಮನದಲ್ಲಿ ಉದ್ಭವಿಸುತ್ತಿರುವ ಈ ಆಲೋಚನೆಗಳಿಗೆಲ್ಲಾ ನನಗೀಗ ಉತ್ತರ ಬೇಕಾಗಿದೆ. ಆ ಕಾರಣಕ್ಕಾದರೂ ನೀನು ಬ ರಲೇಬೇಕು.. ಹೇಗಿದ್ದೀಯೋ, ಎಲ್ಲಿದ್ದೀಯೋ, ಯಾವ ಸನ್ನಿವೇಶದ ಮಧ್ಯೆ ಸಿಲುಕಿದ್ದೀಯೋ ನನಗಂತೂ ಗೊತ್ತಿಲ್ಲ…. ಆದರೆ, ಮನಸ್ಸು ಮಾತ್ರ ನಿನ್ನ ನೋಡಬೇಕೆಂಬ ಹಂಬಲದಿ ಕಾತುರತೆಯಿಂದ ಕಾಯುತ್ತಿದೆ. ತಡಮಾಡದೇ ಆದಷ್ಟು ಬೇಗ ಬಂದು ಬಿಡು ಗೆಳೆಯಾ….
ಇಂತಿ,
ನಿನಗಾಗಿಯೇ ಕಾಯುತ್ತಿರುವವಳು
ಜಯಶ್ರೀ ಎಸ್ ಕಾನಸೂರ್