Advertisement
ನಾವು ಚೆನ್ನಾಗಿದ್ದರೆ, ಬೆಚ್ಚಗಿದ್ದರೆ ಸಾಕು ಅನ್ನುವವರ ಸಂಖ್ಯೆಯೇ ಜಾಸ್ತಿ. ಅಂಥವರಿಗೆ ಅಪವಾದ ಎನ್ನುವಂತೆ ಬೆಂಗಳೂರಿನಲ್ಲೊಂದು ತಂಡ ಕೆಲಸ ಮಾಡುತ್ತಿದೆ. ಚಳಿಗಾಲದ ರಾತ್ರಿ, ಬೀದಿ ಬೀದಿ ತಿರುಗಿ, ನಿರ್ಗತಿಕರಿಗೆ ಹೊದಿಕೆ ಹಂಚುತ್ತಿದೆ. ಆ ತಂಡದ ಹೆಸರು “ಮಾನವ ಸೇವಾ ಫ್ರೆಂಡ್ಸ್’! ಹೆಸರಿಗೆ ತಕ್ಕಂತೆ ಪರೋಪಕಾರವನ್ನೇ ಧ್ಯೇಯವಾಗಿರಿಸಿಕೊಂಡಿರುವ ಈ ತಂಡದಲ್ಲಿ 10 ಜನರಿದ್ದಾರೆ.
Related Articles
Advertisement
ಸುಮ್ಮನೆ ಹೋಟೆಲ್‌ನಲ್ಲಿ 2-3 ಸಾವಿರ ಖರ್ಚು ಮಾಡಿ ಪಾರ್ಟಿ ಮಾಡುವುದಕ್ಕಿಂತ, ನಿರ್ಗತಿಕರಿಗೆ ಸಹಾಯ ಮಾಡೋಣ ಎಂಬ ಅವರ ಮಾತಿಗೆ ಎಲ್ಲರೂ ಓಕೆ ಅಂದರು. ನಿಲೇಶ್‌ರ 27ನೇ ಹುಟ್ಟುಹಬ್ಬದ ನಿಮಿತ್ತ 27 ಜನರಿಗೆ ಉಣ್ಣೆಯ ಹೊದಿಕೆ ಹಂಚಿದರು. ಹಾಗೆ ಶುರುವಾದ ಪರೋಪಕಾರದ ಕಾಯಕ ಈ ಚಳಿಗಾಲದಲ್ಲಿಯೂ ಮುಂದುವರಿಯಿತು. ಮೊದಲು ಗುಂಪಿನಲ್ಲಿ ಏಳು ಜನರಿದ್ದರು.
ಪ್ರತಿಯೊಬ್ಬರೂ 2 ಸಾವಿರ ಹಾಕಿ 140 ರೂ.ನ 100 ಹೊದಿಕೆಗಳನ್ನು ಖರೀದಿಸಿದರು. ಅಕ್ಟೋಬರ್ 22ರಂದು 50 ಜನರಿಗೆ ಹೊದಿಕೆ ನೀಡಿದರು. ಅದರ ಮುಂದಿನ ವಾರ ಅದು 120ಕ್ಕೇರಿತು. ಶನಿವಾರ ರಾತ್ರಿ 5 ಬೈಕ್‌ನಲ್ಲಿ ಹೊದಿಕೆಗಳನ್ನು ಹಾಕಿಕೊಂಡು 100-120 ಕಿ.ಮೀ. ತಿರುಗಾಡಿ ಬೆಳಗಿನವರೆಗೆ ಹೊದಿಕೆ ಹಂಚಿ ಬರುತ್ತಿದ್ದಾರೆ. 3 ಬೈಕ್ ಹೊದಿಕೆ ಹಂಚಿದರೆ, ಇನ್ನೆರಡು ಬೈಕ್‌ನಲ್ಲಿದ್ದವರು ಎಲ್ಲೆಲ್ಲಿ ನಿರ್ಗತಿಕರಿದ್ದಾರೆ ಎಂದು ಹುಡುಕುತ್ತಾರೆ.
ಅವರ ತಂಡಕ್ಕೆ ಮತ್ತೆ ಮೂವರು ಸೇರಿದ್ದಾರೆ. ಇಲ್ಲಿಯವರೆಗೆ 648 ಹೊದಿಕೆಗಳನ್ನು ಹಂಚಿದ್ದು, ಕನಿಷ್ಠ ಸಾವಿರ ಜನರಿಗೆ ಹೊದಿಕೆ ನೀಡಬೇಕು ಎಂಬ ಆಶಯ ಹೊಂದಿದ್ದಾರೆ. ಯಾರೂ ಇವರ ಸೇವೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ ಎಂಬುದನ್ನೂ ಗಮನಿಸಿದ್ದಾರೆ. ಡಿಸೆಂಬರ್ ಕೊನೆ ಅಥವಾ ಜನವರಿಯ ಮೊದಲೆರಡು ವಾರ, ಅಂದರೆ ಚಳಿಗಾಲ ಮುಗಿಯುವವರೆಗೆ ಈ ಸೇವೆ ಮುಂದುವರಿಯುತ್ತದೆ.
ಫಂಡ್ ಬೇಕಿಲ್ಲ…: “ಮಾನವ ಸೇವಾ ಫ್ರೆಂಡ್ಸ್’ ಯಾರಿಂದಲೂ ಹಣಸಹಾಯ ಪಡೆಯುವುದಿಲ್ಲ. ತಂಡದ ಸದಸ್ಯರ ಗೆಳೆಯರು ಮತ್ತು ಕುಟುಂಬದವರ ಸಹಾಯದಿಂದ ಈ ಕೆಲಸ ನಡೆಯುತ್ತಿದೆ. ಡಿಸೆಂಬರ್ ತನಕ ಹೊದಿಕೆ ಹಂಚಲು ಬೇಕಾಗುವಷ್ಟು ಹಣ ಸಂಗ್ರಹವಾಗಿದೆ. ನಮ್ಮ ಕೈಯಲ್ಲಿ ಎಷ್ಟಾಗುತ್ತದೋ ಅಷ್ಟು ಕೆಲಸವನ್ನು ಮಾಡುತ್ತೇವೆ ಅನ್ನುತ್ತಾರೆ ಅವರು.
ಹೊದಿಕೆ ಹಂಚುವ ವಿಡಿಯೊ ಫೇಸ್‌ಬುಕ್‌ನಲ್ಲಿ 21,000 ಸಾವಿರ ವ್ಯೂ ಗಳಿಸಿದೆ. ಅದೂ ಪ್ರಚಾರದ ಉದ್ದೇಶಕ್ಕೆ ಅಪ್ಲೋಡ್ ಮಾಡಿದ್ದಲ್ಲ, ತಮ್ಮ ಕೆಲಸ ಇನ್ನೊಬ್ಬರಿಗೆ ಪ್ರೇರಣೆಯಾಗಲಿ ಎಂಬುದಷ್ಟೇ ತಂಡದ ಉದ್ದೇಶ. ನಿಲೇಶ್ ಮೆಹ್ತಾ, ಸಂದೀಪ್ ಚಾಜ್ಜೀದ್, ಮನೋಜ್ ಬೋಹ್ರಾ, ರಕ್ಷಿತ ಬೋಹ್ರಾ, ಕಮಲ್ ಕಟಾರಿಯಾ, ಸಿದ್ಧಾರ್ಥ ಭವಿಶಿ, ಯಶ್ ಭಂಡಾರಿ, ಭರತ್ ಶರ್ಮಾ ಮತ್ತು ವಿಶಾಲ್ ಗಡ್ವಾನಿ ಎನ್ನುವವರು ಈ ತಂಡದಲ್ಲಿದ್ದಾರೆ.
ಇವರೆಲ್ಲ ಯಾವುದೋ ದೊಡ್ಡ ಎಂಎನ್‌ಸಿಯಲ್ಲಿ ಕುಳಿತು ಲಕ್ಷಾಂತರ ಹಣ ಗಳಿಸುತ್ತಿಲ್ಲ. ಮಾಲ್‌ನಲ್ಲಿ ಬಟ್ಟೆ ಅಂಗಡಿ, ಮೆಡಿಕಲ್ ಶಾಪ್, ಇನುರೆನ್ಸ್ ಕಂಪನಿ, ಜ್ಯುವೆಲರಿಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೆ, ತಾವು ಗಳಿಸಿದ್ದರಲ್ಲಿಯೇ ಸ್ವಲ್ಪ ಉಳಿಸಿ ಇತರರಿಗೆ ನೆರವಾಗುತ್ತಿದ್ದಾರೆ.
ಕಾಲಿಗೆ ಬೀಳ್ತಾರೆ…: ಯಶವಂತಪುರ ರೈಲ್ವೆ ಸ್ಟೇಶನ್ ಬಳಿ ಒಂದು ಕುಟುಂಬ ಚಳಿಯಲ್ಲಿ ನಡುಗುತ್ತಾ ಮಲಗಿತ್ತು. 3 ವರ್ಷದ ಮಗುವನ್ನು ಲುಂಗಿಯಲ್ಲಿ ಸುತ್ತಿ ಮಲಗಿಸಲಾಗಿತ್ತು. ಇವರು ಹೊದಿಕೆ ನೀಡಿದಾಗ, ಮಗುವಿನ ತಂದೆ ಕಣ್ಣೀರಿಡುತ್ತಾ, “ನೀವೆಲ್ಲಾ ದೇವರು ಕಣಪ್ಪಾ…’ ಎಂದು ಕಾಲಿಗೇ ಬಿದ್ದುಬಿಟ್ಟರು.
ಇನ್ನೊಮ್ಮೆ ಕೈಲಿದ್ದ ಎಲ್ಲ ಹೊದಿಕೆಗಳೂ ಮುಗಿದು, ಕೊನೆಯಲ್ಲಿ 1 ಹೊದಿಕೆ ಉಳಿದಿತ್ತು. ರೈಲ್ವೆ ಸ್ಟೇಶನ್ ಬಳಿ ಇಬ್ಬರು ನಡುಗುತ್ತಾ ಮಲಗಿದ್ದರು. ಒಬ್ಬ ಜ್ವರದಿಂದ ನರಳುತ್ತಿದ್ದ, ಇನ್ನೊಬ್ಬನಿಗೆ ಮೈ ತುಂಬಾ ಗಾಯಗಳಾಗಿದ್ದವು. ಆಗ ಒಬ್ಬನಿಗೆ ಹೊದಿಕೆ, ಇನ್ನೊಬ್ಬನಿಗೆ ತಾವು ಧರಿಸಿದ್ದ ಜಾಕೆಟ್ ಅನ್ನೇ ಬಿಚ್ಚಿಕೊಟ್ಟಿದ್ದರು.
* ನಮ್ಮ ಕೆಲಸ ಇನ್ನಷ್ಟು ಜನರಿಗೆ ಮಾದರಿಯಾಗಲಿ ಎಂಬ ಉದ್ದೇಶದಿಂದ ವಿಡಿಯೊ, ಫೋಟೊ ಅಪ್ಲೋಡ್ ಮಾಡುತ್ತಿದ್ದೇವೆ. ನಮಗೆ ಇಡೀ ಕರ್ನಾಟಕಕ್ಕೆ ಹೊದಿಕೆ ಹೊಂದಿಸೋಕೆ ಆಗಲ್ಲ. ನಮ್ಮದು ಸೀಮಿತ ವ್ಯಾಪ್ತಿ. ಆದರೆ, ವಿಡಿಯೋ ದೇಶಾದ್ಯಂತ ತಲುಪಿದರೆ, ನಮ್ಮಂತೆ ಬೇರೆಯವರೂ ಯೋಚಿಸಿದರೆ ಅಷ್ಟೇ ಸಾಕು. ನೀವು ಎಲ್ಲೇ ಇರಿ, ಏನೇ ಮಾಡುತ್ತಿರಿ. ನಿಮ್ಮಿಂದ ಸಮಾಜಕ್ಕೆ ಕಿಂಚಿತ್ತಾದರೂ ಒಳ್ಳೆಯದಾಗಲಿ. ಸದ್ಯಕ್ಕೆ 1000 ಕಂಬಳಿ ಕೊಡುವ ಯೋಚನೆ ಇದೆ ಎನ್ನುತ್ತಾರೆ ರಾಕೇಶ್ ಚಂಡಾಲಿಯಾ ಜೈನ್.
* ಪ್ರಿಯಾಂಕಾ ಎನ್.