ಬೆಂಗಳೂರು: ನೀವು ಬಿಬಿಎಂಪಿ ವ್ಯಾಪ್ತಿಯಲ್ಲಿ ವಾಸವಿದ್ದರೆ ನಗರದ ಯಾವುದಾದರೂ ರಸ್ತೆಯನ್ನು ದತ್ತು ಪಡೆದುಕೊಳ್ಳಬಹುದು! ನಗರವನ್ನು ಸ್ವಚ್ಛವಾಗಿರಿಸಲು ಹಾಗೂ ಸಾರ್ವಜನಿಕರಲ್ಲಿ ಜವಾಬ್ದಾರಿ ಮೂಡಿಸುವ ಉದ್ದೇಶದಿಂದ ರಸ್ತೆ ದತ್ತು ಪಡೆಯುವ ವಿನೂತನ ಯೋಜನೆಗೆ ಬಿಬಿಎಂಪಿ ಚಾಲನೆ ನೀಡಿದೆ. ರಸ್ತೆಯನ್ನು ದತ್ತು ಪಡೆದವರಿಗೆ ಆಯಾ ರಸ್ತೆಗಳಲ್ಲಿನ ಸಮಸ್ಯೆ ಪರಿಹಾರಕ್ಕೆ ಬಿಬಿಎಂಪಿ ಸಲಕರಣೆ ನೀಡಲಿದ್ದು, ಆಯಾ ರಸ್ತೆಯ ಸಾರ್ವಜನಿಕರು ಖುದ್ದು ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದು.
ನಗರದ ಯಾವುದಾರೂ ರಸ್ತೆಯನ್ನು “ಅಡಾಪ್ಟ್-ಎ ಸ್ಟ್ರೀಟ್’ ಹೆಸರಿನಲ್ಲಿ ದತ್ತು ಪಡೆಯಬಹುದಾಗಿದೆ. ದತ್ತು ಪಡೆದ ಸಂಸ್ಥೆ ಆ ರಸ್ತೆಯ ತ್ಯಾಜ್ಯವಿಲೇವಾರಿ, ಗಿಡ, ಬೀದಿದೀಪ ನಿರ್ವಹಣೆಯ ಮೇಲೆ ಉಸ್ತುವಾರಿ ಮಾಡುವುದರ ಜತೆಗೆ ರಸ್ತೆಯನ್ನು ಸcಚ್ಛವಾಗಿ ಇರಿಸಿಕೊಳ್ಳುವುದಕ್ಕೆ ಕ್ರಮವಹಿಸಬಹುದಾಗಿದೆ. ಈ ಯೋಜನೆಯಡಿ ಬಿಬಿಎಂಪಿ ಯಾವುದೇ ರೀತಿ ಅನುದಾನ ನೀಡುವುದಿಲ್ಲ. ಜತೆಗೆ ರಸ್ತೆಯ ನಿರ್ವಹಣೆ ಮಾಡುವುದರಲ್ಲಿ ವಿಫಲವಾದೆ, ಬಿಬಿಎಂಪಿ ದತ್ತು ನೀಡಿರುವ ರಸ್ತೆಯನ್ನು ವಾಪಸ್ ಪಡೆಯಲಿದೆ.
ಯೋಜನೆ ಬಗ್ಗೆ ಮಾಹಿತಿ ನೀಡಿದ ಬಿಬಿಎಂಪಿಯ ವಿಶೇಷ ಆಯುಕ್ತ ಡಿ.ರಂದೀಪ್, ನಗರ ಸ್ವಚ್ಛತೆ ಕಾಪಾಡುವುದಕ್ಕೆ ಸಾರ್ವಜನಿಕರು ಬಿಬಿಎಂಪಿಯೊಂದಿಗೆ ಕೈಜೋಡಿಸುವ ಕಾರ್ಯಕ್ರಮ ಇದಾಗಿದೆ. ಬಿಬಿಎಂಪಿ ವ್ಯಾಪ್ತಿಯ ಯಾವುದೇ ರಸ್ತೆಯನ್ನು ದತ್ತು ಪಡೆಯಬಹುದು. ಸಮರ್ಪಕ ನಿರ್ವಹಣೆ ಉದ್ದೇಶದಿಂದ ಸಂಘ ಸಂಸ್ಥೆಗಳಿಗೆ ಆದ್ಯತೆ ನೀಡಲಾಗಿದೆ. ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಅಡಾಪ್ಟ್ ಎ ಸ್ಟ್ರೀಟ್‌ಗೆ ಸಂಬಂಧಿಸಿದಂತೆ ಸರಳವಾದ ಅರ್ಜಿ ಸಿದ್ಧಪಡಿಸಲಾಗಿದೆ.
ಆಸಕ್ತರು ಅರ್ಜಿ ಭರ್ತಿ ಮಾಡಿ
adoptastreetbbmp@gmail.comಗೆ ಕಳುಹಿಸಬಹುದು ಎಂದು ಮಾಹಿತಿ ನೀಡಿದರು. ಇದಕ್ಕೆ ಸಂಘ ಸಂಸ್ಥೆಗಳು ತಮ್ಮ ವೈಯಕ್ತಿಕ ಹಣ ಬಳಸಬಹುದು. ದತ್ತು ಪಡೆದ ಸಂಘ ಸಂಸ್ಥೆಗಳೇ ರಸ್ತೆಯ ನಿರ್ವಹಣೆ ಮೇಲುಸ್ತುವಾರಿ ಮಾಡಬೇಕು. ದತ್ತುಪಡೆದ ಸಂಸ್ಥೆಗಳು ಆಯಾ ಸಂಘ ಸಂಸ್ಥೆಗಳ ಹೆಸರು ಹೊರತು ಪಡಿಸಿ ವಾಣಿಜ್ಯ ಜಾಹೀರಾತು ನೀಡುವಂತಿಲ್ಲ ಎಂದು ಮಾಹಿತಿ ನೀಡಿದರು.
ಎಲ್ಲರಿಗೂ ನೀಡುವುದಿಲ್ಲ: ದತ್ತು ನೀಡುವ ಮುನ್ನ ಸಂಘ ಸಂಸ್ಥೆಗೆ ಪ್ರಾಯೋಗಿಕವಾಗಿ ರಸ್ತೆ ಸ್ವಚ್ಛತೆ ಮಾಡುವಂತೆ ಸೂಚನೆ ನೀಡಲಾಗುತ್ತಿದ್ದು, ಪರೀಕ್ಷೆಯಲ್ಲಿ ಉತ್ತೀರ್ಣರಾದರೆ ಮಾತ್ರ ಬಿಬಿಎಂಪಿ ದತ್ತು ನೀಡಲಿದೆ. ಇದರ ಮೊದಲ ಭಾಗವಾಗಿ ಭಾನುವಾರ ಕೋರಮಂಗಲ ಮತ್ತು ಸದಾಶಿವನಗರದಲ್ಲಿ ದತ್ತು ಪಡೆಯುವುದಕ್ಕೆ ಆಸಕ್ತಿ ವ್ಯಕ್ತಪಡಿಸಿದ ಸಂಸ್ಥೆಗಳು ಪ್ರಾಯೋಗಿಕವಾಗಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.
ರಸ್ತೆ ದತ್ತು ಪಡೆದವರ ಪ್ರಮುಖ ಜವಾಬ್ದಾರಿ
-ಕಸದ ತೊಟ್ಟಿ, ಸಾರ್ವಜನಿಕರು ಕುಳಿತುಕೊಳ್ಳುವುದಕ್ಕೆ ಆಸನದ ವ್ಯವಸ್ಥೆ, ಅದಕ್ಕೆ ಸಂಬಂಧ ಪಟ್ಟ ಇಲಾಖೆಯಿಂದ ಪೂರ್ವ ಅನುಮತಿ ಪಡೆಯಬೇಕು.
-ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ತಂಡಕ್ಕೆ ಸಹಕಾರ ನೀಡುವುದು. ಕನಿಷ್ಠ ತಿಂಗಳಿಗೆ ಒಂದು ಬಾರಿ ಸ್ವಚ್ಛಗೊಳಿಸಬೇಕು.
-ರಸ್ತೆಯಲ್ಲಿ ಬ್ಯಾನರ್, ಫ್ಲೆಕ್ಸ್, ಒಎಫ್ಸಿ ಕೇಬಲ್ ಅಳವಡಿಸದಂತೆ ನಿಗಾ ವಹಿಸುವುದು. ತೆರವು ಮಾಡುವುದು ಅಥವಾ ಬಿಬಿಎಂಪಿಗೆ ಮಾಹಿತಿ ನೀಡುವುದು.
-ರಸ್ತೆ ಸ್ವಚ್ಛತೆ ಮಾಡುವುದು, ಪಾದಚಾರಿ ಮಾರ್ಗದ ಅಡೆತಡೆ ಸರಿಪಡಿಸುವುದು.
-ನೀರಿನ ಸೋರಿಕೆ ತಡೆಗಟ್ಟುವುದು ಮತ್ತು ನೀರು ರಾಜಕಾಲುವೆಗೆ ಹರಿದು ಹೋಗುವಂತೆ ಕ್ರಮ.
-ಬೀದಿ ದೀಪ ರಿಪೇರಿ ಬಗ್ಗೆ ಪಾಲಿಕೆಗೆ ಮಾಹಿತಿ ನೀಡಿ ರಿಪೇರಿ ಮಾಡಿಸುವುದು.
-ಹೊಸದಾಗಿ ಗಿಡ ನೆಡುವುದು, ಆಗಲೇ ನೆಟ್ಟಿರುವ ಗಿಡಗಳ ನಿರ್ವಹಣೆ ಮತ್ತು ಸಂರಕ್ಷಣೆ.
-ಒಣಗಿದ ಮರ ಮತ್ತು ಮರದ ಕೊಂಬೆ ತೆರವು ಮತ್ತು ಬಿಬಿಎಂಪಿಗೆ ಮಾಹಿತಿ ನೀಡುವುದು.