Advertisement
ಸೋಮವಾರ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, “ನಾನು ನೆಹರೂ ಅವರ ಹೆಸರನ್ನೇ ಉಲ್ಲೇಖೀಸುವುದಿಲ್ಲ ಎಂದು ನೀವು ಯಾವಾಗಲೂ ದೂರುತ್ತಿರುತ್ತೀರಲ್ವಾ…. ಇಂದು ನಾನು ಅದೆಷ್ಟು ಬಾರಿ ನೆಹರೂ ಹೆಸರು ಹೇಳುತ್ತೇನೆ ಎಂದು ನೋಡಿ. ಎಂಜಾಯ್ ಮಾಡಿ…’ ಎನ್ನುತ್ತಲೇ ತಮ್ಮ ಮಾತುಗಳನ್ನು ಆರಂಭಿಸಿದರು.
“ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರು ಈಗ ಆರ್ಥಿಕತೆಯ ಬಗ್ಗೆ ದೀರ್ಘವಾದ ಲೇಖನಗಳನ್ನು ಬರೆಯುತ್ತಾರೆ. ಆದರೆ ಅವರು ಅಧಿಕಾರದಲ್ಲಿದ್ದಾಗ ಹಣದುಬ್ಬರವನ್ನು ಇಳಿಸಲು ಯಾವ ಪ್ರಯತ್ನವನ್ನೂ ಮಾಡಲಿಲ್ಲ’ ಎಂದು ಪ್ರಧಾನಿ ಮೋದಿ ವ್ಯಂಗ್ಯವಾಡಿದ್ದಾರೆ. ಸರಕಾರದ ನೀತಿನಿಯಮಾವಳಿಗಳ ಬಗ್ಗೆ ಪ್ರಸ್ತಾವಿಸಿ ಮಾತನಾಡಿದ ಅವರು, “ದೇಶದ ಗ್ರಾಹಕ ದರ ಸೂಚ್ಯಂಕ ಹಣದುಬ್ಬರದ ಕುರಿತು ಕಾಂಗ್ರೆಸ್‌ನವರು ಅವರ ಪಕ್ಷ ಅಧಿಕಾರದಲ್ಲಿದ್ದಾಗಲೇ ಮಾತನಾಡಬೇಕಿತ್ತು. 2014ರಿಂದ 2020ರ ವರೆಗೆ ಹಣದುಬ್ಬರವು ಶೇ.5ಕ್ಕಿಂತ ಕೆಳಗಿರುವಂತೆ ನಮ್ಮ ಸರಕಾರ ನೋಡಿಕೊಂಡಿದೆ. ಕೊರೊನಾ ಸೋಂಕು ಇದ್ದರೂ ಹಣದುಬ್ಬರ ನಿಯಂತ್ರಣ ತಪ್ಪಿ ಹೋಗದಂತೆ ನಾವು ನೋಡಿಕೊಂಡಿದ್ದೇವೆ. ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಹಣದುಬ್ಬರವು ಎರಡಂಕಿಗೆ ತಲುಪಿತ್ತು. ಅಂದಿನ ವಿತ್ತ ಸಚಿವರಾಗಿದ್ದ ಚಿದಂಬರಂ ಅವರಿಗೆ ಅದನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿರಲಿಲ್ಲ. ಈಗ ಮಾತ್ರ ಅವರು ಪತ್ರಿಕೆಗಳಲ್ಲಿ ಆರ್ಥಿಕತೆಯ ಬಗ್ಗೆ ದೀರ್ಘ ಲೇಖನ ಬರೆಯುತ್ತಾರೆ. ತಾವೇನು ಮಾಡಿದ್ದರು ಎಂಬುದು ಅವರಿಗೆ ನೆನಪಿಲ್ಲ’ ಎಂದು ವಾಗ್ಧಾಳಿ ನಡೆಸಿದ್ದಾರೆ.
Related Articles
Advertisement
ರಾಹುಲ್‌ರಿಂದ “ಒಡೆದು ಆಳು ನೀತಿ’ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳು ಮಾಡಿದ್ದ ಭಾಷಣಕ್ಕೆ ವಂದನಾರ್ಪಣೆ ನಿಮಿತ್ತ ಲೋಕಸಭೆಯಲ್ಲಿ ನಡೆಸಲಾದ ಕಲಾಪದ ವೇಳೆ, ಕೇಂದ್ರ ಸರಕಾರ ತಮಿಳುನಾಡನ್ನು ನಿರ್ಲಕ್ಷಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾಡಿದ್ದ ಆರೋಪಕ್ಕೆ, ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ತಮಿಳುನಾಡಿನ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕವಿ ಸುಬ್ರಹ್ಮಣ್ಯ ಭಾರತಿಯವರ ಕವಿತೆಯ ಸಾಲೊಂದನ್ನೂ ಹೇಳಿದರು. ರಾಹುಲ್ ವಿರುದ್ಧ ಕಿಡಿಕಾರಿದ ಅವರು, “ತಮಿಳರ ಭಾವನೆಗಳನ್ನು ಕೆಣಕುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಅದಕ್ಕಾಗಿ ಅದು ಬ್ರಿಟಿಷರು ಅನುಸರಿಸಿದ್ದ ಒಡೆದು ಆಳುವ ನೀತಿಯನ್ನೇ ಅನುಕರಿಸುತ್ತಿದೆ. ಇತ್ತೀಚೆಗೆ, ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ನಿಧನರಾದಾಗ, ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯುವ ಸಂದರ್ಭ ಅಲ್ಲಿ ನಿಂತಿದ್ದ ತಮಿಳುನಾಡಿನ ಸಹೋದರ, ಸಹೋದರಿಯರು ರಾವತ್ ಅವರಿಗೆ “ವೀರ ವಣಕ್ಕಂ’ (ವೀರ ನಮನ) ಸಲ್ಲಿಸಿದರು. ವಿಷ್ಣು ಪುರಾಣದಲ್ಲಿ ಉತ್ತರದ ಹಿಮಾಲಯದಿಂದ, ದಕ್ಷಿಣದ ಹಿಂದೂ ಮಹಾಸಾಗರದವರೆಗೆ ಇರುವ ಭೂಭಾಗವೆಲ್ಲ ಭಾರತವೇ ಎಂದು ಹೇಳಲಾಗಿದೆ. ಆದರೂ ಕಾಂಗ್ರೆಸ್, ದೇಶದಲ್ಲಿ ತಮಿಳರ ಭಾವನೆಗಳನ್ನು ಕೆಣಕುವ ಮೂಲಕ ಒಡೆದು ಆಳುವ ಅಸ್ತ್ರ ಪ್ರಯೋಗಿಸುತ್ತಿದ್ದಾರೆ’ ಎಂದು ಆರೋಪಿಸಿದರು. ಮೋದಿ ಮಾತಿಗೆ ವಿಪಕ್ಷಗಳು ಕೆಂಡ
ಪ್ರಧಾನಿ ಮೋದಿ ಅವರು ಲೋಕಸಭೆಯಲ್ಲಿ ಆಡಿರುವ ಮಾತುಗಳಿಗೆ ವಿಪಕ್ಷಗಳಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. “ಮುಂಬಯಿ ನಿಲ್ದಾಣಗಳಲ್ಲಿ ನಿಂತಿದ್ದ ಕಾಂಗ್ರೆಸ್, ವಲಸೆ ಕಾರ್ಮಿಕರನ್ನು ರಾಜ್ಯ ಬಿಟ್ಟು ತೆರಳುವಂತೆ ಬೆದರಿಸುತ್ತಿತ್ತು’ ಎಂಬ ಪ್ರಧಾನಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಕಾಂಗ್ರೆಸ್, “ಕೊರೊನಾ ಸೋಂಕಿನ ಕಾಲದಲ್ಲಿ ಕೇಂದ್ರ ಸರಕಾರವು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸಿತ್ತು. ಆದರೆ ಆ ಸಮಯದಲ್ಲಿ ವಲಸೆ ಕಾರ್ಮಿಕರ ನೆರವಿಗೆ ಬಂದಿದ್ದು ಕಾಂಗ್ರೆಸ್’ ಎಂದು ಹೇಳಿದೆ. ಕಾಂಗ್ರೆಸ್ ಅನ್ನು ಟೀಕಿಸುವ ಮೂಲಕ ಮೋದಿ ಅವರು ತಮ್ಮ ಕ್ಷುಲ್ಲಕ ಮನಸ್ಥಿತಿ ಪ್ರದರ್ಶಿಸಿದ್ದಾರೆ ಎಂದೂ ಕಿಡಿಕಾರಿದೆ. ಇದೇ ವೇಳೆ, ಕೊರೊನಾ ವೈರಸ್ ಸೋಂಕಿನ ಸಂದರ್ಭದಲ್ಲಿ ದಿಲ್ಲಿ ಸರಕಾರವೇ ಬಸ್ಸುಗಳನ್ನು ಮಾಡಿ ಜನರನ್ನು ರಾಜಧಾನಿ ಬಿಟ್ಟು ತೆರಳುವಂತೆ ಕಳುಹಿಸಿತು ಎಂಬ ಮೋದಿ ಅವರ ಮಾತು ಶುದ್ಧ ಸುಳ್ಳು ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. “ದೇಶದ ಪ್ರಧಾನಿಯವರ ಹೇಳಿಕೆ ಸಂಪೂರ್ಣ ಸುಳ್ಳು. ಜನರ ನೋವಿನಲ್ಲೂ ರಾಜಕೀಯ ಮಾಡುವುದು ಪ್ರಧಾನಿ ಹುದ್ದೆಯಲ್ಲಿರುವವರಿಗೆ ಸರಿಹೊಂದುವ ನಡವಳಿಕೆಯಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.