Advertisement
ಟೋಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎನ್ನುವ ದಾಖಲೆಯನ್ನು19 ವರ್ಷದ ಅವನಿ ಲೇಖರಾ ಬರೆದಿದ್ದಾರೆ. ಆಗಸ್ಟ್ 30 ಭಾರತದ ಪಾಲಿಗೆ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಅಂದು ಎರಡು ಕಾಲುಗಳಿಲ್ಲದ 19 ವರ್ಷದ ಯುವತಿ ಅವನಿ ಮಹಿಳೆಯರ 10 ಮೀ. ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ 249.6 ಅಂಕ ಪಡೆದು ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದು ನೂತನ ಪ್ಯಾರಾಲಿಂಪಿಕ್ ದಾಖಲೆಯೂ ಹೌದು.
ಅವನಿ ಇಂದು ಎಲ್ಲರ ಕಣ್ಣುಗಳ ಮುಂದೆ ಹೀರೋ ಆಗಿದ್ದಾಳೆ. ಈ ಯುವ ಪ್ರತಿಭೆ ಮಾಡಿರುವ ಸಾಧನೆಗೆ ಎಲ್ಲರೂ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಆದರೆ, ಈ ಹುಡುಗಿ ಚಿನ್ನದ ಕನಸು ನನಸು ಮಾಡಲು ಪಟ್ಟ ಶ್ರಮ ಬಹುಶಃ ಬಹುತೇಕರಿಗೆ ತಿಳಿದಿಲ್ಲ ಅನ್ನಿಸುತ್ತೆ. ಅವನಿ ಎಲ್ಲರ ಹಾಗೆ ದೈಹಿಕವಾಗಿ ಗಟ್ಟುಮುಟ್ಟಾಗಿದ್ದ ಹುಡುಗಿಯಾಗಿದ್ದಳು. ಆದರೆ, ಆಕೆಯ ಜೀವನದಲ್ಲಿ ನಡೆದ ದುರ್ಘಟನೆಯೊಂದು ಆಕೆಯ ಕಾಲುಗಳನ್ನು ಕಿತ್ತುಕೊಂಡಿತು. ರಾಜಸ್ಥಾನದ ಜೈಪುರಲ್ಲಿ 2001ರಲ್ಲಿ ಜನಿಸಿದ ಅವನಿ ಲೇಖರ 2012ರಲ್ಲಿ ನಡೆದ ಕಾರು ಅಪಘಾತದಲ್ಲಿ ಬೆನ್ನು ಮೂಳೆಗೆ ತೀವ್ರ ಗಾಯವಾಗಿ ಪಾರ್ಶ್ವವಾಯು ಪೀಡಿತರಾಗಿದ್ದರು. ತನ್ನೆರಡು ಕಾಲುಗಳು ಸ್ವಾಧೀನ ಕಳೆದುಕೊಂಡವು. ಚಿಕ್ಕ ವಯಸ್ಸಿನಲ್ಲಾದ ಈ ದುರ್ಘಟನೆ ಅವಳನ್ನು ಆಘಾತಕ್ಕೆ ದೂಡಿತು. ಇಡೀ ಜೀವನ ವ್ಹೀಲ್ ಚೇರ್ ಮೇಲೆ ಕಳೆಯುವಂತಾಯಿತು ಎನ್ನುವ ನೋವು ಬಾಧಿಸತೊಡಗಿತು. ಆದರೆ, ಇಂತಹ ಸಂದರ್ಭದಲ್ಲಿ ಅವಳಿಗೆ ಆತ್ಮಸ್ಥೈರ್ಯ ತುಂಬಿದವರು ಆಕೆಯ ಪೋಷಕರು. ಕಾಲುಗಳು ಇಲ್ಲದಿದ್ದರೆ ಏನಂತೆ ? ಎರಡು ಕೈಗಳು ಇವೆಯಲ್ಲ. ಅವುಗಳಿಂದ ಏನಾದರೂ ಸಾಧನೆ ಮಾಡು. ನಿನ್ನ ಹಿಂದೆ ನಾವಿದ್ದೇವೆ ಎಂದು ಬೆನ್ನಿಗೆ ನಿಂತು ಮೆಲ್ಲನೆ ಉಸುರಿದ ಅವನಿಯ ತಂದೆ. ಅಪ್ಪನ ಭರವಸೆಯ ಮಾತುಗಳು ಈಕೆಯ ಮೌಂಟ್ ಎವರೆಸ್ಟ್ ಹತ್ತು ಬಾರಿ ಏರುವ ಹುಮ್ಮಸ್ಸು ಮೂಡಿಸಿತು. ಅಂದಿನಿಂದ ಹೊಸ ಕನಸು ಈಕೆಯಲ್ಲಿ ಮೊಳಕೆಯೊಡೆಯಿತು. ಗಾಲಿ ಕುರ್ಚಿ ಮೇಲೆ ಕುಳಿತೇ ಕ್ರೀಡಾ ಕ್ಷೇತ್ರದತ್ತ ಆಸಕ್ತಿ ಬೆಳೆಸಿಕೊಂಡಳು. ಆರ್ಚರಿ ಹಾಗೂ ಶೂಟಿಂಗ್ ಅಭ್ಯಾಸ ಮಾಡಲು ಪ್ರಾರಂಭಿಸಿದಳು. ಕೊನೆಗೆ ಶೂಟಿಂಗ್ ನಲ್ಲಿಯೇ ಮುಂದುವರೆಯಲು ನಿರ್ಧರಿಸಿದಳು. ಜೀವನದಲ್ಲಿ ಗಟ್ಟಿ ನಿರ್ಧಾರಗಳು, ಸಾಧಿಸುವ ಛಲವೊಂದಿದ್ದರೆ ಸಾಕು ಎಂಬುದಕ್ಕೆ ಅವನಿ ಸಾಕ್ಷಿಯಾಗಿದ್ದಾರೆ. ಪ್ರತಿ ದಿನ ಅವಿರತ ಪರಿಶ್ರಮದ ಫಲವಾಗಿ ಇಂದು ಪ್ಯಾರಾಲಿಂಪಿಕ್ ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾಳೆ.
Advertisement
ಅಭಿನವ್ ಬಿಂದ್ರಾರ ಜೀವನಚರಿತ್ರೆ ಸ್ಫೂರ್ತಿ :ಅಪಘಾತದಲ್ಲಿ ಕಾಲು ಕಳೆದುಕೊಂಡು ಮಾನಸಿಕವಾಗಿ ಕುಗ್ಗಿಹೋಗಿದ್ದ ಅವನಿಗೆ ಒಲಿಂಪಿಕ್ಸ್ ಚಿನ್ನ ವಿಜೇತ ಅಭಿನವ್ ಬಿಂದ್ರಾರ ಜೀವನಚರಿತ್ರೆ ಸ್ಫೂರ್ತಿಯಾಯಿತು. ಈ ಪುಸ್ತಕ ಓದಿ ಕ್ರೀಡೆಯತ್ತ ಮುಖ ಮಾಡಿದರು. ಸಾಧನೆಯ ಗೊಂಚಲು :
ಶೂಟಿಂಗ್ ನಲ್ಲಿ ಸಾಧನೆ ಮಾಡಲು ಹೊರಟ ಅವನಿಗೆ ಸಾಲು-ಸಾಲು ಜಯಗಳು ದೊರೆತವು. 2017ರಲ್ಲಿ ಯುಎಇಯಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಅವನಿ ಬೆಳ್ಳಿ ಗೆದ್ದುಕೊಂಡರು. 2019ರಲ್ಲಿ ಕ್ರೊವೇಷಿಯಾದಲ್ಲಿ ಹಾಗೂ 2021ರಲ್ಲಿ ಯುಎಇಯಲ್ಲಿ ನಡೆದ ಪ್ಯಾರಾ ಶೂಟಿಂಗ್ ವಿಶ್ವಕಪ್‌ನಲ್ಲಿ ಬೆಳ್ಳಿಗೆ ಮುತ್ತಿಟ್ಟರು. ಅವನಿ ವಿಶ್ವ ರ‍್ಯಾಂಕಿಂಗ್‌ನಲ್ಲಿ 5ನೇ ಸ್ಥಾನದಲ್ಲಿದ್ದಾರೆ. ಭಾರತದ ಮಾಜಿ ಶೂಟರ್ ಸುಮಾ ಶಿರೂರ್ ಅವನಿಗೆ ತರಬೇತುದಾರರಾಗಿದ್ದಾರೆ. ರಾಷ್ಟ್ರೀಯ ಪ್ಯಾರಾ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸುವ ಮೂಲಕ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು ಅವನಿ. 2018 ರಲ್ಲಿ ಪ್ಯಾರಾ ವರ್ಲ್ಡ್ ಚಾಂಪಿಯನ್‌ಶಿಪ್‌ನಲ್ಲಿ 9 ನೇ ಸ್ಥಾನದಲ್ಲಿ ಪಡೆದುಕೊಂಡಿದ್ದರು. ಆದರೆ ನಂತರ ಅದೇ ವರ್ಷದಲ್ಲಿ ಪ್ಯಾರಾ ವಿಶ್ವಕಪ್‌ನಲ್ಲಿ ಬೆಳ್ಳಿ ಗೆದ್ದರು. ಈಗ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ,. ಅವನಿ ಅವರ ಈ ಸಾಧನೆಯಿಂದಾಗಿ ಇಡೀ ದೇಶ ಸಂಭ್ರಮಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸಹಿತ ಸಾಕಷ್ಟು ಗಣ್ಯರು ಈ ಸಾಧನೆಗೆ ಪ್ರಶಂಸೆಯನ್ನು ಪ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ಒಂದೇ ಪ್ಯಾರಾಲಂಪಿಕ್ಸ್ ನಲ್ಲಿ ಎರಡು ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಅವನಿ ಪಾತ್ರರಾಗಿದ್ದಾಳೆ. *ಗಣೇಶ್ ಹಿರೇಮಠ