ಅಕ್ಕ, ನೀನೇಕೆ ಹೀಗೆ? ಯಾರ ಜೊತೆಗೂ ಬೆರೆಯುವುದಿಲ್ಲ. ಬೆರೆತೆಯೆಂದರೂ ಕ್ಷಣಮಾತ್ರದಲ್ಲಿಯೇ ಮತ್ತೆ ಸಿಡಿಮಿಡಿಗೊಳ್ಳುವೆ. ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳುವುದಿಲ್ಲ. ಯಾವಾಗಲೂ ಏಕಾಂಗಿಯಾಗಿರುವುದಕ್ಕೆ ಇಷ್ಟಪಡುವವಳು ನೀನು. ನಿನಗೆ ಒಂದು ದಿನವೂ ಬೋರಾಗಲಿಲ್ಲವೇ? ಎಲ್ಲರ ಜೊತೆ ಕಲೆತು ಆಡಿ ನಲಿಯಬೇಕೆಂದು ನಿನಗೆ ಅನಿಸಲಿಲ್ಲವೇ?
ಆ ದಿನ ನೆನಪಿದೆಯಾ? ನಾವು ಮನೆಮಂದಿಯೆಲ್ಲಾ ಹರಟೆಯಲ್ಲಿ ಮಗ್ನರಾಗಿದ್ದೆವು. ಆದರೆ ನೀನು ಯಾವುದೋ ಲಕ್ಷ್ಯದಲ್ಲಿದ್ದೆ. ನಾವೆಲ್ಲಾ ಸಂತೋಷದಲ್ಲಿ ಕಾಲ ಕಳೆಯುತ್ತಿದ್ದರೆ, ನೀನು ಮಾತ್ರ ಭೂಮಿಯೇ ತಲೆಯ ಮೇಲೆ ಕಳಚಿ ಬಿದ್ದ ಹಾಗೆ ಕೂತಿದ್ದೆ. ನಾವೆಲ್ಲಾ ಒಂದು ಕ್ಷಣ ನಿನಗೇನಾಯಿತೋ ಎಂದು ಚಿಂತಿಸತೊಡಗಿದೆವು. ಅಮ್ಮನಂತೂ ತುಂಬಾ ಹೆದರಿಬಿಟ್ಟಿದ್ದಳು. ನಂತರ, ಅವಳು ಯಾವಾಗಲೂ ಇರುವುದೇ ಹಾಗೆ ಗಾಬರಿಯಾಗಬೇಡಿ ಎಂದು ಹೇಳಿ ನಾನೇ ಎಲ್ಲರನ್ನು ಸುಮ್ಮನಾಗಿಸಿದ್ದೆ.
ಒಂದು ದಿನ ನನ್ನ ಫ್ರೆಂಡ್ಸ್‌ನೆಲ್ಲಾ ಮನೆಗೆ ಕರೆದಿದ್ದೆ. ಅವರು ಮನೆಗೆ ಬರುವುದಕ್ಕೆ ಒಂದು ಗಂಟೆ ಮುಂಚೆ ನನ್ನ ಮೇಲೆ ಕೋಪ ಮಾಡಿಕೊಂಡಿದ್ದೆ ನೀನು. ನನ್ನ ಫ್ರೆಂಡ್ಸ್ ಮನೆಗೆ ಬಂದವರೇ, ಮೊದಲು ಕೇಳಿದ್ದು ನಿನ್ನನ್ನ. ಆದರೆ ನೀನು ನನ್ನ ಮೇಲಿನ ಕೋಪದಿಂದ ಅವರನ್ನು ಸರಿಯಾಗಿ ಮಾತನಾಡಿಸಲೇ ಇಲ್ಲ. ಪಾಪ, ಅವರೆಷ್ಟು ಬೇಜಾರಾದರು ಎಂಬುದರ ಪರಿವೆಯೇ ಇರಲಿಲ್ಲ ನಿನಗೆ. ಈಗಲೂ ನೀನು ಏಕೆ ಹಾಗೆ ಮಾಡಿದೆ? ಎಂದು ಅವರು ಕೇಳುತ್ತಾರೆ. ನಾನು ಏನೋ ಒಂದು ಉತ್ತರ ನೀಡಿ ಸುಮ್ಮನಾಗುತ್ತೇನೆ.
ನೀನು ಹೀಗೆ ಇರುವುದಕ್ಕೂ ಇದೂ ಒಂದು ಕಾರಣ ಇರಬಹುದು ಅಲ್ವಾ? ಮೊದಲಿನಿಂದಲೂ ನೀನು ಮನೆಯಿಂದ ದೂರವಿದ್ದೇ ಬೆಳೆದೆ. ಮೂರನೇ ತರಗತಿಯಿದ್ದಾಗಿನಿಂದಲೂ ಚಿಕ್ಕಪ್ಪನ ಮನೆಯಲ್ಲಿಯೇ ಬೆಳೆದಿದ್ದರಿಂದ ನಮ್ಮ ನಿನ್ನ ನಡುವೆ ಸರಿಯಾಗಿ ಬಾಂಧವ್ಯವೇ ಬೆಳೆಯಲಿಲ್ಲ. ಹೈಸ್ಕೂಲಿಗೆ ಬಂದ ನಂತರ ಮನೆಗೆ ಬಂದೆಯಾದರೂ ಮತ್ತೆ ಹಾಸ್ಟೆಲ್‌ಗೆ ಸೇರಿದೆ. ಪರಿಣಾಮ, ಮತ್ತೆ ಮನೆಯಿಂದ ದೂರವಾದೆ. ಅಮ್ಮನಂತೂ ನಿನ್ನ ನೆನೆಸಿಕೊಂಡು ಕಣ್ಣೀರಿಡದ ದಿನವೇ ಇರಲಿಲ್ಲ.
ನಾನಾದರೂ ಮನೆಯವರ ಜೊತೆ ತುಂಬಾ ದಿನ ಕಳೆದಿದ್ದೇನೆ. ಆದರೆ ಅಕ್ಕ, ನೀನು ಸರಿಯಾಗಿ ಒಂದು ದಿನವು ಮನೆಯಲ್ಲಿ ಇರಲಿಲ್ಲ. ಆಫೀಸ್, ಕೆಲಸ ಅಂತ ಮನೆಯಿಂದ ಈಗಲೂ ದೂರಾನೆ ಇದ್ದೀಯಾ. ನೀನು ಹೆಚ್ಚು ಮದುವೆ, ಸಮಾರಂಭಗಳಿಗೆ ಹೋಗಲೇ ಇಲ್ಲ. ಹಬ್ಬಹರಿದಿನಗಳಲ್ಲಂತೂ ಮನೆಯಲ್ಲಿ ಇದ್ದಿದ್ದೇ ಇಲ್ಲ. ಚಿಕ್ಕ ವಯಸ್ಸಿನಿಂದಲೇ ಒಂಟಿಯಾಗಿ ಬೆಳೆದ ನೀನು, ಇಂದಿಗೂ ಒಂಟಿಯಾಗಿಯೇ ಜೀವನವನ್ನು ನಡೆಸುತ್ತಿರುವೆ. ಏಕಾಂಗಿಯಾಗಿಯೇ ಯಶಸ್ಸನ್ನು ಸಾಧಿಸಬೇಕೆಂಬ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿರುವ ಹಾಗಿದೆ. ಆದರೂ ಒಂದೊಂದು ಸಲ ನಿನ್ನನ್ನು ಅರ್ಥ ಮಾಡಿಕೊಳ್ಳಲಿಕ್ಕೆ ಆಗುವುದಿಲ್ಲವೇನೋ ಎಂದೆನಿಸುತ್ತದೆ.
ಆದರೂ ನೀನೆಂದರೆ ಇಷ್ಟ. ಒಂದೊಂದು ಸಲ ಕಷ್ಟ. ನೀನು ಏಕೆ ಹೀಗೆ? ಎಂದು ಇಂದಿಗೂ ಆರ್ಥವಾಗಿಲ್ಲ…
– ಮಮತ ಕೆ. ಕೆ., ಸೊರಬ