ನಿನ್ನ ಪರಿಸ್ಥಿತಿಯನ್ನು, ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ನೀನು ನನ್ನಿಂದ ದೂರವಾದೆ. ಆದರೂ, ನೀನು ನನ್ನನ್ನು ಮರೆತಿಲ್ಲ ಎಂದು ಭಾವಿಸಿ ಈ ಪತ್ರ ಬರೆಯುತ್ತಿದ್ದೇನೆ.
ನಲ್ಮೆಯ ಗೆಳತಿ… ಹೇಗಿದ್ದೀಯಾ? ನಿನ್ನನ್ನು ನೋಡಿ, ನಿನ್ನ ಜೊತೆ ಮಾತನಾಡಿ ತುಂಬಾ ದಿನಗಳೇ ಆದವು. ನೀನು ಚೆನ್ನಾಗಿದ್ದೀಯ ಎಂದು ನಂಬಿದ್ದೇನೆ. ಯಾಕೆಂದರೆ, ಪ್ರತಿದಿನ ನಿನ್ನ ಆರೋಗ್ಯದ ಬಗ್ಗೆ ಹಾಗೂ ಉತ್ತಮ ಭವಿಷ್ಯದ ಬಗ್ಗೆ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ. ನೀನು ಯಾವಾಗಲೂ ಹೇಳುತ್ತಿದ್ದೆಯಲ್ಲ, ನೀನು ಯಾವಾಗ್ಲೂ ಚೆನ್ನಾಗಿರಬೇಕು ಕಣೋ ಅಂತ. ನಿನ್ನ ಹಾರೈಕೆಯಿಂದಲೇ ನಾನು ಚೆನ್ನಾಗಿದ್ದೇನೆ. ಆದರೆ, ನಿನ್ನ ನೆನಪುಗಳನ್ನು ಮರೆತು ನಾನಿರಲಾರೆ. ನೆನಪಿರಲಿ..
ಆ ದಿನಗಳನ್ನು ನಾನೆಂದಿಗೂ ಮರೆಯೋದಿಲ್ಲ. ನಾನು ಬಹಳ ಮುಗ್ಧನಿದ್ದೆ. ನನ್ನಲ್ಲಿ ಆತ್ಮವಿಶ್ವಾಸ, ಧೈರ್ಯ ತುಂಬಿದವಳೇ ನೀನು. ನೀನು ಜೊತೆಗಿರುವಾಗ ಒಂದು ದಿನವೂ ಒಂಟಿತನ ಕಾಡಲಿಲ್ಲ. ನಿನ್ನ ಬಳಿ, ಸುಖ-ದುಃಖಗಳನ್ನು ಹಂಚಿಕೊಂಡು, ಹಗುರಾಗುತ್ತಿದ್ದೆ. ನಿನ್ನ ಸಾಂತ್ವನದ ಮಾತುಗಳೇ ನನ್ನ ನೋವಿಗೆ ಮುಲಾಮು. ನಿನ್ನಂಥ ಸ್ನೇಹಿತೆಯನ್ನ ಪಡೆದ ನಾನೇ ಧನ್ಯ. ನೀನು ಕೂಡ, ಗೆಳತಿಯರಿಗೆ ನನ್ನನ್ನು ಬೆಸ್ಟ್‌ಫ್ರೆಂಡ್ ಎಂದೇ ಪರಿಚಯಿಸುತ್ತಿದ್ದೆ.
ನೀನು ನನ್ನನ್ನು ಬಿಟ್ಟು ಹೋದ ದಿನ ನನಗಿನ್ನೂ ನೆನಪಿದೆ. ಆ ದಿನ ನನಗೇನಾಗಿತ್ತೋ ಗೊತ್ತಿಲ್ಲ, ಸೀದಾ ಬಂದು, “ಐ ಲವ್ ಯು ರಾಧಾ’
ಎಂದು ಬಿಟ್ಟೆ! ನಿನಗೆಷ್ಟು ಆಘಾತವಾಗಿರಬಹುದು? ನಿಜ, ನಾನು ಹಾಗೆ ಹೇಳಬಾರದಿತ್ತು. ಆದರೆ, ನನಗೇ ಗೊತ್ತಿಲ್ಲದೆ ನಾನು ಪ್ರೀತಿಯಲ್ಲಿ ಬಿದ್ದಿದ್ದೆ. ನೀನೂ ಒಪ್ಪಬಹುದು ಎಂಬ ಹುಂಬತನದಲ್ಲಿ ಬಂದು ಪ್ರಪೋಸ್ ಮಾಡಿದ್ದೆ. ಈೇ, ಆ ಒಂದು ಮಾತಿಂದ ಒಳ್ಳೆಯ ಸ್ನೇಹವನ್ನು ನಾನೇ ಹಾಳು ಮಾಡಿಕೊಂಡುಬಿಟ್ಟೆ.
ಪ್ರೀತಿಗಾಗಿ ನಿನ್ನ ಕಾಡಿದ್ದನ್ನು ನೆನಪಿಸಿಕೊಂಡರೆ ಈಗ, ನನ್ನ ಮೇಲೆ ನನಗೇ ಜಿಗುಪ್ಸೆ ಹುಟ್ಟುತ್ತದೆ. ನಿನ್ನ ಪರಿಸ್ಥಿತಿಯನ್ನು, ಭಾವನೆಗಳನ್ನು ನಾನು ಅರ್ಥ ಮಾಡಿಕೊಳ್ಳಲಿಲ್ಲ. ಅದೇ ಕಾರಣಕ್ಕೆ ನೀನು ನನ್ನಿಂದ ದೂರವಾದೆ. ಆದರೂ, ನೀನು ನನ್ನನ್ನು ಮರೆತಿಲ್ಲ ಎಂದು ಭಾವಿಸಿ ಈ ಪತ್ರ ಬರೆಯುತ್ತಿದ್ದೇನೆ. ನನ್ನೆಲ್ಲ ತಪ್ಪುಗಳನ್ನು ಮನ್ನಿಸಿ ಈ ಪತ್ರಕ್ಕೆ ಉತ್ತರಿಸು. ಮೊದಲಿನಂತೆಯೇ ನಮ್ಮ ಸ್ನೇಹ ಮುಂದುವರಿಸೋಣ ಎಂದು ಬೇಡಿಕೊಳ್ಳುತ್ತೇನೆ.
ನಿನ್ನ ಆತ್ಮೀಯ ಗೆಳೆಯ
ಗೋಪಾಲ್