ವಾಷಿಂಗ್ಟನ್: ಮಾರಣಾಂತಿಕ ಕೋವಿಡ್ -19 ವೈರಸ್ ಗೆ ಚೀನಾದಲ್ಲಿ ಒಟ್ಟಾರೆ ಬಲಿಯಾದವರ ಕುರಿತು ಅಲ್ಲಿನ ಸರ್ಕಾರ ನೀಡಿರುವ ಅಧಿಕೃತ ಅಂಕಿಅಂಶಗಳು ಅನುಮಾನಾಸ್ಪದವಾಗಿದೆ. ಯು ನೋ ಇಟ್, ಐ ನೋ ಇಟ್ (ನಿಮಗೂ ತಿಳಿದಿದೆ, ನನಗೂ ತಿಳಿದಿದೆ) ಎಂದು ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮತ್ತೊಮ್ಮೆ ಆರೋಪಿಸಿದ್ದಾರೆ.
ಮೊದಲು ವೈರಸ್ ಕಂಡುಬಂದ ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹೊಸದಾಗಿ 1300 ಜನರು ಮೃತಪಟ್ಟ ವರದಿ ಬಿಡುಗಡೆ ಮಾಡಿದ ಎರಡೇ ದಿನದಲ್ಲಿ ಟ್ರಂಪ್ ಈ ಆರೋಪ ಮಾಡಿದ್ದಾರೆ. ಇದೀಗ ಚೀನಾದಲ್ಲಿ 4,600 ಒಟ್ಟಾರೆಯಾಗಿ ಸಾವನ್ನಪ್ಪಿದ್ದಾರೆನ್ನುವ ಅಂಕಿಅಂಶಗಳು ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.
ಅಮೆರಿಕದ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಡೋನಾಲ್ಡ್ ಟ್ರಂಪ್, “ಕೋವಿಡ್-19 ಸಾವಿನ ಸಂಖ್ಯೆಯಲ್ಲಿ ಅಮೆರಿಕ ನಂಬರ್-1 ಅಲ್ಲ. ಚೀನಾ ದೇಶವೇ ನಂಬರ್-1. ಸಾವಿನ ಸಂಖ್ಯೆಯಲ್ಲಿ ಅವರು ನಮಗಿಂತ ಮುಂದಿದ್ದಾರೆ” ಎಂದು ತಿಳಿಸಿದ್ದಾರೆ.
ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂ, ಇಟಲಿ ಮತ್ತು ಸ್ಪೇನ್ ಮುಂತಾದವು ಅತ್ಯುತ್ತಮ ಆರೋಗ್ಯ ಪರಿಕರ ವ್ಯವಸ್ಥೆಗಳನ್ನು ಹೊಂದಿರುವ ದೇಶ. ಆದರೆ, ಇಂತಹ ದೇಶಗಳೇ ಹೆಚ್ಚಿನ ಸಾವಿನ ಪ್ರಮಾಣವನ್ನು ಹೊಂದಿರುವಾಗ ಚೀನಾದಲ್ಲಿ ಇನ್ನೂ ಅಧಿಕ ಪ್ರಮಾಣದ ಸಾವು-ನೋವುಗಳು ಸಂಭವಿಸಿರಬೇಕು. ಚೀನಾ ಅಧಿಕೃತ ಸಾವಿನ ಸಂಖ್ಯೆಗಳಿಗಿಂತ ನಿಜವಾದ ಸಂಖ್ಯೆ ಹೆಚ್ಚು. ಅಲ್ಲಿನ ಸರ್ಕಾರ ಅವಾಸ್ತವಿಕ ಅಂಕಿಅಂಶ ನೀಡಿದೆ” ಎಂದು ಟ್ರಂಪ್ ಆರೋಪಿಸಿದ್ದಾರೆ.
“ಕೋವಿಡ್ ಸಾಂಕ್ರಾಮಿಕ ರೋಗವನ್ನು ಉದ್ದೇಶಪೂರ್ವಕವಾಗಿ ಹರಡಿದ್ದೇ ಆಗಿದ್ದರೆ ಮುಂದೊಂದು ದಿನ ಇದರ ಪರಿಣಾಮಗಳನ್ನು ಚೀನಾ ಖಂಡಿತ ಎದುರಿಸಲೇಬೇಕಾಗುತ್ತದೆ” ಇದೇ ಸಂದರ್ಭದಲ್ಲಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.