Advertisement

ನೀನು ಎಲ್ಲಿರುವೇ, ಮನವ ಕಾಡುವ…

03:50 AM Mar 14, 2017 | |

ಬೇಗ ಬಾ, ಇನ್ನೂ ನನ್ನ ಜೊತೆ ಕಣ್ಣಾ ಮುಚ್ಚಾಲೆ ಆಡಬೇಡ ನೀನು. ನನ್ನ ಜಾಣ ಅಲ್ವ, ನನ್‌ ಚಿನ್ನ ಅಲ್ವ, ನನ್ನ ಮುದ್ದಿನ ಫ್ರೆಂಡ್‌ ಅಲ್ವ, ನಿನಗೆ ನನ್ನನ್ನು ನೋಡ್ಬೇಕು ಅಂತ ಅನ್ಸೇ ಇಲ್ವ? ನಾನು ನೆನಪಿಗೆ ಬಂದೇ ಇಲ್ವ? ಇನ್ನು ನನ್ನನ್ನು ಕಾಯಿಸಬೇಡ. ಬೇಗ ಬಂದು ಬಿಡು.

Advertisement

ಅಂದು ನಾನು ಪ್ರೈಮರಿ ಸ್ಕೂಲ್‌ನಲ್ಲಿ ಓದುತ್ತಿರುವಾಗ ನೀನು ನಮ್ಮ ಮನೆಗೆ ಬರುತ್ತಿದ್ದೆ. ಅಮ್ಮ ಬಂದ್ರೆ ನಿನ್ನನ್ನು ಹೊಡಿತಾರೆ ಅಂತ ನಾನು ಹೋಗಲ್ಲ, ಹೋಗಲ್ಲ ಅಂತ ಬಚ್ಚಿಟ್ಟುಕೊಂಡು ನನ್ನ ಜೊತೆ ಕಣ್ಣಾ ಮುಚ್ಚಾಲೆ ಆಟ ಆಡಿದರೂ ಏನೋ ಒಂದು ಸುಳ್ಳು ಹೇಳಿ ನಿನ್ನನ್ನು ಹೊರಗೆ ಕಳುಹಿಸಿ ಬಿಡುತ್ತಿದ್ದೆ. ಆಗ ನೀನೇನು ಸುಮ್ನೆ ಇರುತ್ತಿದ್ಯಾ? ನೀನು ಬಹಳ ತುಂಟ ಅಲ್ವ? ತುಂಬಾ ಚೇಷ್ಟೆ ಮಾಡ್ತಿದ್ದೆ. ಮತ್ತೆ ಕದ್ದುಮುಚ್ಚಿ ಮನೆಯೊಳಗೆ ಎಂಟ್ರಿ ಕೊಡ್ತಿದ್ದೆ. ನೀನು ಬಂದಿರುವುದು ನನಗೆ ಖುಷಿಯಾದರೂ ಸಹ, ಅಮ್ಮನಿಗೋಸ್ಕರ ಅಯ್ಯೋ ಪಾಪ ಅಂತ ಹೇಳಿ ಹೊರ ದಬ್ಬುತಾ ಇದ್ದೆ. ನೀನು ಅಲ್ಲೇ ಹೊರಗೆ ನಿನ್‌ ಫ್ರೆಂಡ್ಸ್‌ ಜೊತೆ ಆಟ ಆಡುತ್ತ ನನ್ನ ಕಡೆ ಹಾಗೇ ಸುಮ್ಮನೆ ನೋಡುತ್ತಾ ಕುಳಿತಿರುತ್ತಿದ್ದೆ. ಆ ಕ್ಷಣದಲ್ಲಿ ನೀನಲ್ಲಿ ನಾನಿಲ್ಲಿ, ಇಬ್ಬರೂ ಜೊತೆಗೂಡುವುದು ಯಾವಾಗ? ಎನ್ನುವ ಯೋಚನೆ ಕಾಡುತ್ತಿತ್ತು. 

ನಾನು ಸ್ಕೂಲಿಗೆ ಹೋಗುವಾಗ, ಅಕಸ್ಮಾತ್‌ ಅನ್ನುವಂತೆ ನೀನು ಕಾಣಿಸಿಕೊಳ್ಳುತ್ತಿದ್ದೆ. ನೀನು ದಾರಿಯಲ್ಲಿ ಕಂಡಾಗ ನಿನ್ನ ಜೊತೆ ಮಾತನಾಡಬೇಕು, ಆಟ ಆಡಬೇಕು ಅಂತ ಉಲ್ಲಾಸದಿಂದ, ಉತ್ಸಾಹದಿಂದ ನಿನ್ನ ಬೆನ್ನ ಹಿಂದೆಲೇ ಓಡೋಡಿ ಬಂದಾಗ ಕ್ಷಣ ಕಾಲವೂ ನಿಲ್ಲದೆ ಮಾಯವಾಗುತ್ತಿದ್ದೆ ಏಕೆ? ನಿನ್ನನ್ನು ಮನೆಯೊಳಗೆ ಕರೆದುಕೊಂಡಿಲ್ಲ ಅಂತ ಕೋಪ ಬರುತ್ತಿತ್ತಾ ನನ್ಮೆàಲೆ? ಮತ್ತೆ ನಾನು ಏನು ಮಾಡ್ಲಿ? ನೀನು ಮನೆಗೆ ಬಂದ್ರೆ ಅಮ್ಮ ಬೈತಾರೆ ಅಂತ ಹಾಗೆ ಮಾಡ್ತಿದ್ದೆ ಅಷ್ಟೇ… ನೀನು ಅದನ್ನೆಲ್ಲಾ ಸೀರಿಯಸ್ಸಾಗಿ ತಗೊಂಡು 
ನನ್‌ ಕಣ್ಣಿಗೆ ಕಾಣಲಾರದಷ್ಟು ದೂರ ಹೋಗಬೇಕಾ? ಹೇಳು. ಈಗ ಅದು ಏನೇ ಇರಲಿ, ಅಂದು ನಿನ್ನನ್ನು ಮನೆಯಿಂದ ಹೊರ ತಳ್ಳಿದ ನಾನೇ ಇಂದು ನಿನ್ನ ಬರುವಿಕೆಗಾಗಿ ತಹತಹಿಸುತ್ತಿರುವೆ. ನಿನ್ನ ಆ ಧ್ವನಿಯನ್ನು ಕೇಳಬೇಕೆಂಬ ಆಸೆ ನನ್ನ ಹೃದಯದಲ್ಲಿ ಮನೆ ಮಾಡಿದೆ. 

ನಿನ್ನನ್ನು ನೋಡಬೇಕೆಂಬ ಕುತೂಹಲ ಹೆಚ್ಚಾಗಿ ಇಂದಲ್ಲ ನಾಳೆ ಬಂದೇ ಬರುತ್ತಿಯಾ ಎಂದು ಚಾತಕ ಪಕ್ಷಿಯಂತೆ ಕಾದು ಕುಳಿತಿರುವ ನನ್ನನ್ನು ನೋಡಲು ಒಮ್ಮೆ ಬರಬಾರದೇಕೆ? ನನ್ನ ಮೇಲೆ ಮುನಿಸಿದೆಯೇ, ಬೇಕಾದರೆ ನಾನು ಕ್ಷಮೆಯಾಚಿಸುವೆ? ಬೇಗ ಬಾ, ಇನ್ನೂ ನನ್ನ ಜೊತೆ ಕಣ್ಣಾ ಮುಚ್ಚಾಲೆ ಆಡಬೇಡ ನೀನು.  ನನ್ನ ಜಾಣ ಅಲ್ವ, ನನ್‌ ಚಿನ್ನ ಅಲ್ವ,  ನನ್ನ ಮುದ್ದಿನ ಫ್ರೆಂಡ್‌ ಅಲ್ವ,  ನಿನಗೆ ನನ್ನನ್ನು ನೋಡ್ಬೇಕು ಅಂತ ಅನ್ಸೇ ಇಲ್ವ? ನಾನು ನೆನಪಿಗೆ ಬಂದೇ ಇಲ್ವ? ಇನ್ನು ನನ್ನ ಕಾಯಿಸಬೇಡ. ಬೇಗ ಬಂದು ಬಿಡು. 

ಇಷ್ಟಕ್ಕೂ ಈ ಹುಡುಗಿಯ ಮನಸ್ಸನ್ನು ಈ ಮಟ್ಟಿಗೆ ಆವರಿಸಿಕೊಂಡದ್ದು ಯಾರು ಅಂತ ಥಿಂಕ್‌ ಮಾಡ್ತಿದ್ದೀರಾ? ಅದೇ ಕಣ್ರೀ ಚಿಂವ್‌-ಚಿಂವ್‌ ಎಂಬ ಚಿಕ್ಕ ಧ್ವನಿಯಿಂದ ಕಲರವವನ್ನೇ ಎಬ್ಬಿಸುತ್ತಿದ್ದ ಗುಬ್ಬಚ್ಚಿ, ನಮ್ಮ ಪುಟ್ಟ ಗುಬ್ಬಚ್ಚಿ ಇಂದು ನಮ್ಮ ಸ್ವಾರ್ಥದ ಗುಂಗಿನಲ್ಲಿ (ಮೊಬೈಲ್‌ಗ‌ಳ ಬಳಕೆಯಿಂದ) ಕಣ್ಮರೆಯಾಗುತ್ತಿವೆ.  ಏಕೋ ಏನೋ ನನಗೆ ತಿಳಿಯದು, ಅದನ್ನು ನೋಡಬೇಕು ಎಂದು ನನ್ನ ಹೃದಯ ಮಿಡಿಯುತ್ತಿದೆ. 

Advertisement

ಗುಬ್ಬಚ್ಚಿ ಕಮ್‌ ಸೂನ್‌, ನಿನಗಾಗಿ ಕಾದಿರುವೆ.

ಲತಾ ವಿ., ಬಳ್ಳಾರಿ

Advertisement

Udayavani is now on Telegram. Click here to join our channel and stay updated with the latest news.

Next