ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮಂಗಳವಾರ ರಾತ್ರಿ ಉಗ್ರರು ಅಟ್ಟಹಾಸ ಮೆರೆದಿದ್ದು, ಇಬ್ಬರು ನಾಗರಿಕರನ್ನು ಗುಂಡಿಕ್ಕಿ ಕೊಲೆ ಮಾಡಿದ್ದಾರೆ.
ಈ ದಾಳಿಯಲ್ಲಿ ನಗರದ ಪ್ರಸಿದ್ಧ ಮೆಡಿಕಲ್ ಸ್ಟೋರ್ ಮಾಲೀಕ ಮಖನ್ ಲಾಲ್ ಬಿಂದ್ರೂ ಕೂಡ ಮೃತಪಟ್ಟಿದ್ದು, ಅವರ ಮಗಳು ಡಾ. ಸಮೃದ್ಧಿ ಬಿಂದ್ರೂ ಬುಧವಾರ ಉಗ್ರರಿಗೆ ಸವಾಲೆಸೆದೆದಿದ್ದಾರೆ. ತಾಕತ್ತಿದ್ದರೆ ನನ್ನೆದುರು ನಿಂತು ವಾದ ಮಾಡಿ ಎಂದು ಆಕ್ರೋಶಭರಿತರಾಗಿ ನುಡಿದಿದ್ದಾರೆ.
“ನೀವು ಒಬ್ಬ ವ್ಯಕ್ತಿಯನ್ನು ಕೊಲ್ಲಬಹುದು. ಆದರೆ ಅವರ ಚೈತನ್ಯವನ್ನಲ್ಲ. ನನ್ನ ತಂದೆಯನ್ನು ಕೊಂದವರು ನನ್ನೆದುರು ಬರಲಿ. ನಿಮಗೆ ರಾಜಕಾರಣಿಗಳು ಬಂದೂಕು, ಕಲ್ಲು ಕೊಟ್ಟಿರಬಹುದು, ಆದರೆ ನನಗೆ ನನ್ನ ತಂದೆ ಶಿಕ್ಷಣ ನೀಡಿದ್ದಾರೆ. ನಿಮ್ಮ ರೀತಿ ಕಲ್ಲು, ಬಂದೂಕಿನೊಂದಿಗೆ ಹೋರಾಡುವುದು ಹೇಡಿತನ. ಎಲ್ಲ ರಾಜಕಾರಣಿಗಳು ನಿಮ್ಮನ್ನ ಬಳಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:11.5 ಲಕ್ಷ ಬಾಡಿಗೆಕೊಡುವ ವಾಲ್ಟ್ ಡಿಸ್ನಿ ಇಂಡಿಯಾ
ಬನ್ನಿ, ನನ್ನೆದುರು ನಿಂತು ಶಿಕ್ಷಣದೊಂದಿಗೆ ಹೋರಾಡಿ’ ಎಂದು ಸಮೃದ್ಧಿ ಹೇಳಿದ್ದಾರೆ. “ನಾನು ಸಹಾಯಕ ಪ್ರಾಧ್ಯಾಪಕಿ, ನನ್ನ ಸಹೋದರ ಮಧುಮೇಹಶಾಸ್ತ್ರಜ್ಞ. ನನ್ನಮ್ಮ ಅಂಗಡಿ ನೋಡಿಕೊಳ್ಳುತ್ತಾರೆ. ಇದು ನನ್ನ ತಂದೆ ನಮ್ಮನ್ನು ಬೆಳೆಸಿದ ರೀತಿ. ಕಾಶ್ಮೀರಿ ಪಂಡಿತರಿಗೆ ಎಂದಿಗೂ ಸಾವಿಲ್ಲ’ ಎಂದು ಆಕೆ ಧೈರ್ಯದಿಂದ ಮಾಧ್ಯಮಗಳೆದುರು ಹೇಳಿಕೊಂಡಿದ್ದಾರೆ.
ನಾನು ಅಳುವುದಿಲ್ಲ:
ತಂದೆಯ ಸಾವಿನ ವಿಚಾರದಲ್ಲಿ ನಾನು ಯಾವುದೇ ಕಾರಣಕ್ಕೂ ಕಣ್ಣೀರು ಹಾಕುವುದಿಲ್ಲ. ಹಾಗೆ ಕಣ್ಣೀರು ಹಾಕಿದರೆ ಅದು ಆ ಉಗ್ರರಿಗೆ ಗೌರವಿಸಿದಂತಾಗುತ್ತದೆ. ನಾನು ನಗುತ್ತೇನೆ, ಏಕೆಂದರೆ ನನ್ನಪ್ಪ ನಿಜವಾದ ಹೋರಾಟಗಾರ. ಅವರು ವಿನ್ನರ್ ಎಂದೂ ಆಕೆ ಹೇಳಿದ್ದಾರೆ.