Advertisement

ವಿಮಾನದಲ್ಲೂ ಇನ್ನು ವೈಫೈ

12:00 AM May 03, 2018 | Team Udayavani |

ಹೊಸದಿಲ್ಲಿ: ಭಾರತದಲ್ಲಿನ್ನು ವಿಮಾನದಲ್ಲಿ ಸಂಚರಿಸುವಾಗ ಪ್ರಯಾಣಿಕರು ತಮ್ಮ ಮೊಬೈಲ್‌ ಗ‌ಳನ್ನು ಸುಮ್ಮನೆ ಜೇಬಿನಲ್ಲಿಟ್ಟುಕೊಳ್ಳಬೇಕಿಲ್ಲ. ಇತರ ದೇಶಗಳಲ್ಲಿ ಹಾರಾಡುವಾಗಿನಂತೆಯೇ ವೈಫೈ ಹಾಗೂ ಇಂಟರ್‌ ನೆಟ್‌ ಸೌಲಭ್ಯ ಭಾರತದಲ್ಲೂ ಸಿಗಲಿದೆ. ಇದಕ್ಕೆ ಸಂಬಂಧಿಸಿದ ಪ್ರಸ್ತಾವನೆಗೆ ಕೇಂದ್ರ ಸರಕಾರದ ಟೆಲಿಕಾಂ ಆಯೋಗ ಸಮ್ಮತಿ ನೀಡಿದೆ.

Advertisement

ಮುಂದಿನ 3-4 ತಿಂಗಳಲ್ಲಿ ಈ ಸೇವೆ ಪ್ರಯಾಣಿಕರಿಗೆ ಲಭ್ಯವಾಗಲಿದೆ. ಟೆಲಿಕಾಂ ಕಂಪೆನಿಗಳು, ವಿಮಾನಯಾನ ಸಂಸ್ಥೆಗಳು ಇದಕ್ಕೆ ಸೂಕ್ತ ತಯಾರಿ ಮಾಡಿಕೊಳ್ಳಬೇಕಿರುತ್ತದೆ. ಅಷ್ಟೇ ಅಲ್ಲ, ಪ್ರಯಾಣಿಕರು ವೈಫೈಗಾಗಿ ಹೆಚ್ಚುವರಿ ವೆಚ್ಚವನ್ನೂ ತೆರಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪದೇ ಪದೆ ವಿಮಾನ ಪ್ರಯಾಣ ಮಾಡುವವರಿಗೆ ಟೆಲಿಕಾಂ ಸಂಸ್ಥೆಗಳು ವಿಶೇಷ ಪ್ಯಾಕೇಜ್‌ ಗಳನ್ನೂ ಘೋಷಿಸಬಹುದಾಗಿದೆ.

ಈ ಸೌಲಭ್ಯವನ್ನು ವಿಮಾನಯಾನ ಸಂಸ್ಥೆ ಒದಗಿಸಿದರೆ ವಿಮಾನವು 3 ಸಾವಿರ ಮೀಟರ್‌ ಎತ್ತರಕ್ಕೆ ಏರುತ್ತಿದ್ದಂತೆಯೇ ಪ್ರಯಾಣಿಕರು ವೈಫೈಗೆ ಸಂಪರ್ಕ ಸಾಧಿಸಬಹುದಾಗಿದೆ. ಸಾಮಾನ್ಯವಾಗಿ ವಿಮಾನ 3 ಸಾವಿರ ಮೀಟರ್‌ ಏರಲು 4-5 ನಿಮಿಷ ಬೇಕು. ಅಷ್ಟೇ ಅಲ್ಲ, ವೈಫೈ ಮೂಲಕ ಇಂಟರ್‌ ನೆಟ್‌ ಕರೆಗಳನ್ನೂ ಮಾಡಬಹುದು.

ಅಂದರೆ ವಾಟ್ಸ್‌ಆ್ಯಪ್‌, ಸ್ಕೈಪ್‌ ಮೂಲಕ ಮೊಬೈಲ್‌ಗ‌ಳಿಗೆ ಕರೆ ಮಾಡಬಹುದಾಗಿದೆ. ಈ ವೇಳೆ ಮೊಬೈಲ್‌ನ ಏರ್‌ಪ್ಲೇನ್‌ ಮೋಡ್‌ ಆಫ್ ಮಾಡಬೇಕು. ಸಾಮಾನ್ಯವಾಗಿ ವಿಮಾನ ಪ್ರಯಾಣದಲ್ಲಿ ಮೊಬೈಲ್‌ ನ ಏರ್‌ ಪ್ಲೇನ್‌ ಮೋಡ್‌ ಆನ್‌ ಮಾಡಬೇಕಾಗುತ್ತದೆ. ಈ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸಲು ವಿಮಾನಯಾನ ಸಂಸ್ಥೆಗಳು ಭಾರೀ ವೆಚ್ಚ ಮಾಡಬೇಕಿದೆ ಎಂದು ಹೇಳಲಾಗಿದೆ. ಆದರೆ ಈ ಸೇವೆ ಅತ್ಯಂತ ಮಹತ್ವದ್ದಾಗಿದ್ದು, ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ಭಾರತೀಯ ಸಂಸ್ಥೆಗಳು ಪೈಪೋಟಿ ನೀಡಬಹುದಾಗಿದೆ. ವಿಶ್ವದ 30ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳು ಸದ್ಯ ಇಂಟರ್‌ನೆಟ್‌ ಹಾಗೂ ಕರೆಗಳ ಸೌಲಭ್ಯವನ್ನು ಪ್ರಯಾಣಿಕರಿಗೆ ಒದಗಿಸುತ್ತಿವೆ.

ಟೆಲಿಕಾಂ ಒಂಬುಡ್ಸ್‌ ಮನ್‌ ರಚನೆ
ಟೆಲಿಕಾಂ ಕಂಪೆನಿಗಳಿಗೆ ಸಂಬಂಧಿಸಿದ ದೂರುಗಳನ್ನು ನಿರ್ವಹಿಸಲು ಟೆಲಿಕಾಂ ಒಂಬುಡ್ಸ್‌ ಮನ್‌ ರಚನೆಗೂ ಟೆಲಿಕಾಂ ಆಯೋಗ ನಿರ್ಧರಿಸಿದೆ. ಇಲಾಖೆಗೆ ಪ್ರತಿ 3 ತಿಂಗಳಿಗೆ 1 ಕೋಟಿ ದೂರುಗಳು ಬರುತ್ತವೆ. ಹೀಗಾಗಿ ದೂರು ನಿರ್ವಹಣೆಗೆ ಹೆಚ್ಚುವರಿ ಅಧಿಕಾರ ಅಗತ್ಯವಿದೆ ಎಂದು ಟ್ರಾಯ್‌ ಆಗ್ರಹಿಸಿತ್ತು. ಶೀಘ್ರದಲ್ಲೇ ಟ್ರಾಯ್‌ ಕಾಯ್ದೆಗೆ ತಿದ್ದುಪಡಿ ತಂದು, ಒಂಬುಡ್ಸ್‌ ಮನ್‌ ಕಾರ್ಯನಿರ್ವಹಣೆಯ ರೂಪುರೇಷೆ ಸಿದ್ಧಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಪ್ರತ್ಯೇಕ ಲೈಸೆನ್ಸ್‌ ನೀಡಲು ಕೇಂದ್ರ ನಿರ್ಧಾರ
ವಿಮಾನದಲ್ಲಿ ವೈಫೈ ಸೇವೆ ಒದಗಿಸುವುದಕ್ಕಾಗಿಯೇ ಸಂಸ್ಥೆಗಳಿಗೆ ಪ್ರತ್ಯೇಕ ಲೈಸೆನ್ಸನ್ನು ಸರಕಾರ ಒದಗಿಸಲಿದೆ. ಈ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಟೆಲಿಕಾಂ ಇಲಾಖೆ ಹೇಳಿದೆ. ಈ ಸೇವಾ ಪೂರೈಕೆದಾರರಿಗೆ ವಾರ್ಷಿಕ 1 ರೂ. ಶುಲ್ಕ ವಿಧಿಸಲಾಗುತ್ತದೆ. ಇಂಟರ್ನೆಟ್‌ ದರವನ್ನು ಸರಕಾರ ನಿಯಂತ್ರಿಸುವುದಿಲ್ಲ.

ಈ ಸೌಲಭ್ಯ ದೇಶೀಯ ಪ್ರಯಾಣದಲ್ಲಿ ಬಳಕೆಯಾಗುವುದಕ್ಕಿಂತ ಹೆಚ್ಚಾಗಿ, ವಿದೇಶಕ್ಕೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. 2-3 ಗಂಟೆಗಳ ಪ್ರಯಾಣದಲ್ಲಿ ವೈಫೈಗಾಗಿ 200 ರಿಂದ 300 ರೂ. ವೆಚ್ಚ ಮಾಡಲು ಜನರು ಇಷ್ಟಪಡುವುದಿಲ್ಲ.
– ಅಂಬರ್‌ ದುಬೆ, ಕೆಪಿಎಂಜಿ ಇಂಡಿಯಾ ಮುಖ್ಯಸ್ಥ

Advertisement

Udayavani is now on Telegram. Click here to join our channel and stay updated with the latest news.

Next