Advertisement

ನಿನಗಾಗಿ ಏನನ್ನೂ ಬೇಕಾದರೆ ಗೆಲ್ಲಬಲ್ಲೆ!

10:40 AM Aug 22, 2017 | |

ನೀನು ನನ್ನ ಪಕ್ಕದಲ್ಲಿದ್ದರೆ, ಚಿಕ್ಕ ಮಗುವಿನಂತಿರುವ ನಿನ್ನ ಮುದ್ದಾದ ಮುಖವನ್ನು ಮನಸಾರೆ ಮುದ್ದಾಡಬೇಕೆನಿಸುತ್ತದೆ. ನೀನು ನನ್ನಿಂದ ಅಡಿಯಷ್ಟು ದೂರದಲ್ಲಿ ನಿಂತರೂ ಅದನ್ನು ನನಗೆ ಸಹಿಸಲಾಗದು… 

Advertisement

ನನ್ನ ಪಾಡಿಗೆ ನಾನು ಹಾಯಾಗಿ, ಜಾಲಿಯಾಗಿ ಜೀವನ ನಡೆಸುತ್ತಿದ್ದೆ. ನಿನ್ನನ್ನು ಅದ್ಯಾರು ನನ್ನ ಬದುಕಿನೊಳಗೆ ಕಳಿಸಿದರೋ ಏನೋ? ನೀ ಬಂದಾಗಿನಿಂದಲೂ ನನ್ನ ಕಣ್ಣಿಗೆ ನಿದ್ದೆಯ ಕೊರತೆ ಉಂಟಾಗಿದೆ! ಪ್ರತಿ ಹುಡುಗನಿಗೂ ಒಬ್ಬಳು ಕನಸಿನ ರಾಣಿ ಇದ್ದೇ ಇರುತ್ತಾಳೆ. ಹಾಗೆಯೇ ನನ್ನ ಕನಸಿನ ರಾಣಿಗೆ ಇರುವ, ಇರಬೇಕಾದ ಎಲ್ಲಾ ಲಕ್ಷಣಗಳನ್ನೂ ನಿನ್ನಲ್ಲಿ ಕಂಡಿದ್ದೇನೆ. ಆದ್ದರಿಂದಲೇ ನನ್ನ ನಿದ್ದೆಯು ನಿನ್ನ ಮೇಲಿನ ಪ್ರೀತಿಯೆಂಬ ಭಾವನೆಗಳ ಸುರಿಮಳೆಗೆ ನಶಿಸಿಹೋಗಿದೆ. 

ಹೆಣ್ಣಿಗಾಗಿ ಏನೆಲ್ಲಾ ತ್ಯಾಗಗಳನ್ನು ಮಾಡುವುದು, ಯುದ್ಧಗಳನ್ನು ಗೆಲ್ಲುವುದು, ಹೆಣ್ಣಿನ ಒಲವು ಗಳಿಸಲಿಕ್ಕಾಗಿಯೇ ಪ್ರಪಂಚಕ್ಕೆ ಎದುರಾಗಿ ನಿಲ್ಲುವುದನ್ನು ಸಿನಿಮಾಗಳಲ್ಲಿ ನೋಡಿ, “ಇವರಿಗೇನಾದರೂ ಹುಚ್ಚು ಹಿಡಿದಿದೆಯಾ?’ ಎಂದು ನಗುತ್ತಿದ್ದೆ. ಹಾಗೆಲ್ಲಾ ಇದ್ದ ನನಗೂ ಈಗ, ನಿನಗಾಗಿ ಏನನ್ನೂ ಬೇಕಾದರೂ ಗೆಲ್ಲಬಲ್ಲೆ ಎಂಬ ಧೈರ್ಯ ತುಂಬಿದ್ದೀಯಾ! ನಿನ್ನ ಜೊತೆಗೂಡಿ ಬದುಕಲು ಎಂಥ ಯುದ್ಧಗಳನ್ನಾದರೂ ಮಾಡಬಲ್ಲೆ ಎಂಥ ಕಷ್ಟಗಳನ್ನಾದರೂ ಎದುರಿಸಬಲ್ಲೆ ಎಂದು ನನಗೆ ಈಗ ಅನ್ನಿಸುತ್ತಿದೆ. ನೀನು ನನ್ನ ಪಕ್ಕದಲ್ಲಿದ್ದರೆ, ಚಿಕ್ಕ ಮಗುವಿನಂತಿರುವ ನಿನ್ನ ಮುದ್ದಾದ ಮುಖವನ್ನು ಮನಸಾರೆ ಮುದ್ದಾಡಬೇಕೆನಿಸುತ್ತದೆ. ನೀನು ನನ್ನಿಂದ ಅಡಿಯಷ್ಟು ದೂರದಲ್ಲಿ ನಿಂತರೂ ಅದನ್ನು ನನಗೆ ಸಹಿಸಲಾಗದು. ಇಂಥ ನೂರಾರು ಭಾವನೆಗಳು ನನ್ನ ಮನದಲ್ಲಿ ತಾಂಡವವಾಡುತ್ತಿವೆ. ಅದಕ್ಕೆ ಕಾರಣ, ನನಗೆ ನಿನ್ನ ಮೇಲಿರುವ ಪ್ರೀತಿ! ಈ ಪ್ರೀತಿಯೆಂಬುದೊಂದು ರೋಗ, ಆ ಪ್ರೀತಿಯ ಬಲೆಗೆ ಸಿಲುಕಿಕೊಂಡವರು ರೋಗಿಗಳು. ಆ ರೋಗಕ್ಕೆ ಟಾನಿಕ್ಕೂ ಪ್ರೀತಿಯೇ! ನನಗೀಗ ಆ ಪ್ರೀತಿಯೆಂಬ ಟಾನಿಕ್‌ನ ಅಗತ್ಯವಿದೆ. ಆ ಟಾನಿಕ್‌ ನೀಡಿ ನನ್ನನ್ನು ರೋಗಮುಕ್ತನನ್ನಾಗಿ ಮಾಡು.

ನಿನ್ನ ಮೇಲೆ ಇಷ್ಟೆಲ್ಲಾ ಭಾವನೆಗಳು ನನ್ನ ಮನಸ್ಸಿನಲ್ಲಿದ್ದರೂ ನೀ ಯಾರೆಂದು ನಾ ಇದುವರೆಗೂ ತಿಳಿದುಕೊಳ್ಳಲೇ ಇಲ್ಲ. ಅದಕ್ಕೆ ನನ್ನನ್ನು ಕ್ಷಮಿಸು! ನಿನ್ನ ಮೇಲಿನ ಪ್ರೀತಿಯ ಭಾವನೆಗಳಿಂದ ತಾನೇ ನನಗೆ ನಿದ್ದೆ ಬರದಂತಾಗಿದ್ದು? ಈಗಲಾದರೂ ಹೇಳು, ನನ್ನ ನಿದ್ದೆಯನ್ನು ಕದಿಯಲು ನಿನಗೆ ಅನುಮತಿ ನೀಡಿದವರು ಯಾರು? ನಿದ್ದೆ ಕದ್ದ ಚೆಲುವೆ ಇಷ್ಟಕ್ಕೂ ನೀ ಯಾರು?

ಗಿರೀಶ್‌ ಚಂದ್ರ ವೈ.ಆರ್‌., ತುಮಕೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next