ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್xಸ್ ಬಿಐಎಸ್
ವಿದ್ಯುತ್ ಉಪಕರಣಗಳು, ಸಿಮೆಂಟ್, ಬಾಟಲ್ ನೀರು, ಕಾಗದ, ಪೇಂಟ್,ಶಿಶು ಆಹಾರ ಹಾಲಿನ ಪುಡಿ, ಅಡುಗೆ ಅನಿಲ, ಇತ್ಯಾದಿ ಖರೀದಿಸುವ ಮುನ್ನ, ಅದಕ್ಕೆ ಐಎಸ್‌ಐ ಗುರುತು ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಈ ಚಿಹ್ನೆ ಇರುವ ವಸ್ತುಗಳನ್ನು ಖರೀದಿಸಿದಾಗ ಗುಣಮಟ್ಟದ ಖಾತರಿ ಇರುತ್ತದೆ. ಈ ಚಿಹ್ನೆಯನ್ನು ಭಾರತೀಯ ಮಾನಕ
ಬ್ಯೂರೋ ಬಿಐಎಸ್ ನೀಡುತ್ತದೆ. ಇದನ್ನು ಹಿಂದೆ ಇಂಡಿಯನ್ ಸ್ಟಾಂಡರ್ಡ್ಸ್ ಇನ್‌ಸ್ಟಿಟ್ಯೂಟ್ ಎಂದು ಕರೆಯಲಾಗಿತ್ತು. ಆದ್ದರಿಂದ ಐಎಸ್‌ಐ ಚಿಹ್ನೆಯನ್ನು ಉಳಿಸಿಕೊಳ್ಳಲಾಗಿದೆ. ಐಎಸ್‌ಐ ಚಿಹ್ನೆ ಇರುವ ವಸ್ತುವಿನ ಗುಣಮಟ್ಟದಲ್ಲಿ ಏರುಪೇರಿದ್ದರೆ ನೇರವಾಗಿ ಕೆಲವೊಂದು ನಿಬಂಧನೆಗೆ ಒಳಪಟ್ಟು ಐಎಸ್‌ಐನಿಂದ ಪರಿಹಾರ ಪಡೆಯುವ ಸಾಧ್ಯತೆ ಇದೆ. ಬಳಕೆದಾರರು ಖರೀದಿಸುವ ಸರಕುಗಳು ಮತ್ತು ಸೇವೆಗಳಿಗೆ ಅಂತರರಾಷ್ಟ್ರೀಯ ಮಾನಕ ನೀಡುವ ಸಲುವಾಗಿ ಇಂಟರ್‌ನ್ಯಾಷನಲ್ ಆರ್ಗನೈಸೇಷನ್ ಫಾರ್ ಸ್ಟಾಂಡಡೈìಸೇಷನ್ ಐಎಸ್‌ಒ ಸ್ಥಾಪನೆಗೊಂಡಿದೆ.
Advertisement
ಆಹಾರ ಪದಾರ್ಥಗಳುಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಕನಕದಾಸರ ಪದವನ್ನು ನೀವು ಕೇಳಿರಬಹುದು. ಶುದ್ಧ ಹಾಗೂ ಸುರಕ್ಷಿತ ಆಹಾರ ನಮ್ಮೆಲ್ಲರ ಹಕ್ಕು. ಆದ್ದರಿಂದ ಆಹಾರ ಪದಾರ್ಥವನ್ನು ಖರೀದಿಸುವಾಗ ಅಥವಾ ಅದನ್ನು ಸೇವಿಸುವಾಗ ಹೆಚ್ಚು ಕಾಳಜಿ ವಹಿಸುವುದು ಅಗತ್ಯ. ನಮ್ಮೆಲ್ಲರ ಆರೋಗ್ಯ ನಾವು ಸೇವಿಸುವ ಆಹಾರ ಪದಾರ್ಥದ
ಗುಣಮಟ್ಟವನ್ನು ಅವಲಂಬಿಸಿದೆ. ಸರ್ಕಾರವು ಆಹಾರದ ಗುಣಮಟ್ಟವನ್ನು ಸೂಚಿಸುವ ಕೆಲವೊಂದು ಗುರುತು ಜಾರಿಗೊಳಿಸಿದೆ. ಜೊತೆಗೆ ಆಹಾರದ ಬಗ್ಗೆ ಮಾಹಿತಿ ನೀಡುವ ಜವಾಬ್ದಾರಿಯನ್ನೂ ಮಾರಾಟಗಾರರಿಗೆ ವಹಿಸಿದೆ. ನೀವು ಆಹಾರ ಪದಾರ್ಥ ಖರೀದಿಸುವಾಗ ಚಿಹ್ನೆಗೆ ಆದ್ಯತೆ ನೀಡಿ.
ಹಣ್ಣುಗಳನ್ನು ಬಳಸಿ ತಯಾರಾದ ಪದಾರ್ಥಗಳನ್ನು ನೀವು ಬಳಸುತ್ತಿರಬಹುದು. ಉದಾಹರಣೆಗೆ ಜಾಮ್, ಜೆಲ್ಲಿ, ಉಪ್ಪಿನಕಾಯಿ, ಹಣ್ಣಿನ ಜ್ಯೂಸ್, ಸಾಫ್ಟ್ ಡ್ರಿಂಕ್ಸ್ ಇತ್ಯಾದಿ. ಈ ಪದಾರ್ಥಗಳ ಪೊಟ್ಟಣ ಅಥವಾ ಬಾಟಲ್ ಮೇಲೆ ಎಫ್ಪಿಓ ಚಿಹ್ನೆ ಇರುವುದನ್ನು ನೀವು ಗಮನಿಸಬೇಕು. ಈ ರೀತಿ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುವವರೆಲ್ಲರೂ
ಭಾರತ ಸರ್ಕಾರ ನೀಡುವ ಪರವಾನಗಿ ಪಡೆದಿರಬೇಕು. ಹಾಗೆ ಪರವಾನಗಿ ಪಡೆದು ತಯಾರಾದ ಪದಾರ್ಥಗಳಿಗೆ ಈ ಗುರುತು ನೀಡಲಾಗುವುದು. ಇನ್ನು ಮುಂದೆ ನೀವು ಜಾಮ್, ಜೆಲ್ಲಿ, ಉಪ್ಪಿನಕಾಯಿ, ಹಣ್ಣಿನ ಜ್ಯೂಸ್ ಇತ್ಯಾದಿ ಖರೀದಿಸುವಾಗ ಎಫ್ಪಿಓಗುರುತು ಇರುವ ಬ್ರಾಂಡ್ ಖರೀದಿಸಿ. ಆಗ್‌ಮಾರ್ಕ್
ಭಾರತ ಸರ್ಕಾರದ ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಯು ನೀಡುವ ಈ ಆಗ್‌ಮಾರ್ಕ್ ಚಿಹ್ನೆಯನ್ನು ಕೃಷಿ, ತೋಟಗಾರಿಕೆ ಇತ್ಯಾದಿ ಉತ್ಪನ್ನಗಳಿಗೆ ಉಪಯೋಗಿಸಲಾಗುತ್ತದೆ. ಉದಾಹರಣೆಗೆ ಖಾದ್ಯ ತೈಲ, ಜೇನುತುಪ್ಪ, ಬೇಳೆ ಇತ್ಯಾದಿಗೆ ನೀಡಲಾಗಿದೆ. ಈ ಚಿಹ್ನೆ ಇದ್ದ ಪದಾರ್ಥ ಗುಣಮಟ್ಟ ಹೊಂದಿದ್ದು ಸೇವನೆಗೆ ಅರ್ಹ ಎಂದು ಸೂಚಿಸುತ್ತದೆ.
ನಾವು ಸೇವಿಸುವ ಆಹಾರ ಶಾಖಾಹಾರಿಯೋ ಅಥವಾ ಮಾಂಸಾಹಾರಿಯೋ ಎಂಬ ಅನುಮಾನ ಬರುವುದು ಸಹಜ. ಕಾರಣ ಅದರಲ್ಲಿ ಬಳಸಿರುವ ಪದಾರ್ಥಗಳು ಯಾವುದು ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಉದಾಹರಣೆಗೆ ಐಸ್‌ಕ್ರೀಂ. ಇದು ಶಾಖಾಹಾರಿಯೋ ಅಥವಾ ಮಾಂಸಾಹಾರಿಯೋ. ಅದರಲ್ಲಿ ಮೊಟ್ಟೆ ಬಳಸಲಾಗಿದೆಯೋ ಇಲ್ಲವೋ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಕಾರಣ ಇದಕ್ಕೊಂದು ಚಿಹ್ನೆ ಕಡ್ಡಾಯಗೊಳಿಸಲಾಗಿದೆ. ಪದಾರ್ಥದ ಪ್ಯಾಕೆಟ್ ಮೇಲೆ ಹಸಿರು ಬಣ್ಣದ ವೃತ್ತವಿದ್ದರೆ ಅದು ಶಾಖಾಹಾರಿ ಹಾಗೂ ಕೆಂಪು ಬಣ್ಣದ ವೃತ್ತವಿದ್ದರೆ ಅದು ಮಾಂಸಾಹಾರಿ.
ಬಟ್ಟೆ ಹಾಗೂ ವಸ್ತ್ರಗಳು
ಆಹಾರದ ನಂತರ ಮಾನವರಿಗೆ ಅಗತ್ಯವಾದ ವಸ್ತು ಬಟ್ಟೆ ಮತ್ತು ಸಿದ್ಧಪಡಿಸಿದ ಉಡುಪುಗಳು. ಇವುಗಳನ್ನು ಖರೀದಿಸುವಾಗಲೂ ಬಳಕೆದಾರರು ಜಾಗರೂಕರಾಗಿರಬೇಕು. ಕೇಂದ್ರ ಸರ್ಕಾರದ ಜವಳಿ ಇಲಾಖೆ ಬಳಕೆದಾರರ ರಕ್ಷಣೆಗೆಂದೇ ಕೆಲವೊಂದು ನಿಯಮಗಳನ್ನು ಜಾರಿಗೊಳಿಸಿದೆ. ಅವುಗಳಲ್ಲಿ ಮುಖ್ಯವಾದವು ಹ್ಯಾಂಡ್‌ಲೂಮ್ – ಕೈಮಗ್ಗದ ಉಡುಪುಗಳು. ಇತ್ತೀಚಿನ ದಿನಗಳಲ್ಲಿ ಕೈಮಗ್ಗದ ಬಟ್ಟೆಮತ್ತು ಉಡುಪುಗಳಿಗೆ ಬೇಡಿಕೆ ಇದೆ. ಇದನ್ನು ದುರುಪಯೋಗಿಸಿಕೊಳ್ಳುವ ಪ್ರವೃತ್ತಿಯೂ ಹೆಚ್ಚಾಗುತ್ತಿದೆ. ಕೈಮಗ್ಗದಿಂದ
ತಯಾರಿಸಿದ್ದು ಎಂದು ಸುಳ್ಳು ಹೇಳಿ ಇನ್ಯಾವುದೋ ವಸ್ತ್ರವನ್ನು ಮಾರಾಟಮಾಡುವುದು ಕಂಡುಬರುತ್ತಿದೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರವು ಮನಕ ಗೊತ್ತುಪಡಿಸಿದೆ. ಹೆಚ್ಚಿನ ವಿವರಗಳಿಗೆ ಡಿಡಿಡಿ.ಜಚnಛlಟಟಞs.nಜಿc.ಜಿn ನೋಡಬಹುದು.
ರೇಷ್ಮೆ ಸೀರೆ, ಪಂಚೆ ಮತ್ತು ವಸ್ತ್ರಗಳೆಂದರೆ ಭಾರತೀಯ ಬಳಕೆದಾರರಿಗೆ ಎಲ್ಲಿಲ್ಲದ ಮೋಹ. ಮಾರುಕಟ್ಟೆಯಲ್ಲಿ ಅನೇಕ ಮಾದರಿ ಸಿಲ್ಕ್ ವಸ್ತ್ರಗಳು ದೊರೆಯುತ್ತಿದೆ. ಆದರೆ ಅವೆಲ್ಲವೂ ನಿಜವಾದ ಸಿಲ್ಕ್ ಎಂದು ಹೇಳಲು ಸಾಧ್ಯವಿಲ್ಲ. ಅನೇಕ ಬಳಕೆದಾರರು, ವಿಶೇಷವಾಗಿ ಮಹಿಳೆಯರು ರೇಷ್ಮೆ ಎಂದು ಭಾವಿಸಿ ಇನ್ಯಾವುದೋ ಕಳಪೆ ಗುಣಮಟ್ಟದ ವಸ್ತ್ರ ಖರೀದಿಸಿ ವಂಚನೆಗೆ ಒಳಗಾಗಿರುವುದು ಕಂಡುಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರ ಸಿಲ್ಕ್ಮಾರ್ಕ್ ಚಿಹ್ನೆ ಜಾರಿಗೊಳಿಸಿದೆ. ವಸ್ತ್ರ ಖರೀದಿಸುವಾಗ ಈ ಚಿಹ್ನೆ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಸಿಲ್ಕ್ಮಾರ್ಕ್ ಇರುವ ವಸ್ತ್ರ ಪರಿಶುದ್ಧ ಎಂಬುದನ್ನು ಮಂಡಳಿ ಆಶ್ವಾಸನೆ ಕೊಡುತ್ತದೆ.
ರೇಷ್ಮೆ ವಸ್ತ್ರಗಳಲ್ಲಿ ಆಗುತ್ತಿರುವಂತೆ ಉಣ್ಣೆ ಅಥವಾ ವುಲ್ ವಸ್ತ್ರಗಳ ಮಾರಾಟದಲ್ಲೂ ವಂಚನೆ ನಡೆಯುತ್ತಿದೆ. ಅದನ್ನು ತಪ್ಪಿಸಲು ಅಂತರರಾಷ್ಟ್ರೀಯ ವುಲ್ ಸಚಿವಾಲಯ ಈ ಚಿಹ್ನೆಯನ್ನು ಜಾರಿಗೊಳಿಸಿದೆ. ಉಣ್ಣೆ ವಸ್ತ್ರಗಳನ್ನು ಖರೀದಿಸುವ ಮುನ್ನ ಆ ವಸ್ತ್ರಕ್ಕೆ ವುಲ್‌ಮಾರ್ಕ್ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಹೊಳೆಯುವುದೆಲ್ಲಾ ಬಂಗಾರವಲ್ಲ
ಭಾರತೀಯರಿಗೆ ಚಿನ್ನದ ಮೇಲೆ ಎಲ್ಲಿಲ್ಲದ ಮೋಹ. ನಾವು ವಿಶ್ವದಲ್ಲೇ ಅತ್ಯಂತ ಹೆಚ್ಚು ಚಿನ್ನ ಖರೀದಿ ಹಾಗೂ ಬಳಕೆದಾರರು. ಆದ್ದರಿಂದ ಅತ್ಯಂತ ಹೆಚ್ಚು ವಂಚನೆಗೆ ಒಳಗಾಗುವವರೂ ನಾವುಗಳೇ. ಬಳಕೆದಾರರು 22 ಕ್ಯಾರೆಟ್ ಚಿನ್ನ ಖರೀದಿಸಿದ್ದೇವೆಂದು ನಂಬಿದ್ದರೂ ಅದು 18 ಕ್ಯಾರೆಟ್ ಗುಣಮಟ್ಟದ್ದಾಗಿರುತ್ತದೆ. ಅದು ಬೆಳಕಿಗೆ ಬರುವುದು ಚಿನ್ನದ ಆಭರಣವನ್ನು ಮರುಮಾರಾಟ ಮಾಡುವಾಗ ಇಲ್ಲವೇ ಅದನ್ನು ಬದಲಿಸುವಾಗ. ಚಿನ್ನಾಭರಣದ ಪರಿಶುದ್ಧತೆಯನ್ನು ಖಾತ್ರಿಪಡಿಸಿಕೊಂಡು ಅನಂತರ ಅದನ್ನು ಖರೀದಿಸಿ. ಆದರೆ ಪರಿಶುದ್ಧತೆಯನ್ನು ಹೇಗೆ ಪತ್ತೆಹಚ್ಚುವುದು? ಚಿನ್ನಾಭರಣವನ್ನು ಕರಗಿಸಬೇಕಿಲ್ಲ. ಭಾರತೀಯ ಮಾನಕ ಬ್ಯೂರೊ ಹಾಲ್‌ಮಾರ್ಕ್ ಚಿಹ್ನೆಯನ್ನು ಜಾರಿಗೊಳಿಸಿದೆ. ಮಾರಾಟಗಾರರನ್ನು ಕೇಳಿ ಆಭರಣಕ್ಕೆ ಹಾಲ್‌ಮಾರ್ಕ್ ಚಿಹ್ನೆ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ. ಹೆಚ್ಚಿನ ವಿವರಗಳಿಗೆ ಭಾರತೀಯ ಮಾನಕ ಬ್ಯೂರೋ ಕಚೇರಿಯನ್ನು ಸಂಪರ್ಕಿಸಿ ಅಥವಾ ವೆಬ್‌ಸೈಟ್ ನೋಡಿ.
ವೈ.ಜಿ.ಮುರಳೀಧರನ್