Advertisement

ಎಲ್ಲೆಲ್ಲಿ ನೋಡಿದರೂ ನೀನೇ

07:17 PM Nov 29, 2019 | Lakshmi GovindaRaj |

ಮಹಾಭಾರತದ ಒಂದು ಪ್ರಸಂಗ. ಅನೌಪಚಾರಿಕ ಸಭೆ. ಶ್ರೀಕೃಷ್ಣ, ಭೀಷ್ಮಾದಿಗಳು, ಕೌರವ- ಪಾಂಡವರು, ಬಂಧುಗಳು ಹಾಗೂ ಅನ್ಯ ಪ್ರಮುಖರು ಅಲ್ಲಿದ್ದರು. ಶ್ರೀಕೃಷ್ಣನು, ಧರ್ಮರಾಜ ಮತ್ತು ದುರ್ಯೋಧನರಿಗೆ ಚಿಕ್ಕ ಸ್ಪರ್ಧೆಯನ್ನು ಮುಂದಿಡುತ್ತಾನೆ. ಪರಸ್ಪರ ಅವಕಾಶವೇ (ಖಾಲಿ ಜಾಗ) ಉಳಿಯದಂತೆ ಯಾವುದಾದರೂ ಒಂದು ವಸ್ತುವಿನಿಂದ ಇಡೀ ಭವನವನ್ನು ತುಂಬಬೇಕು ಎಂಬುದು ಸ್ಪರ್ಧೆಯ ನಿಯಮ.

Advertisement

ದುರ್ಯೋಧನನಿಗೆ ಅತೀವ ಉತ್ಸಾಹ. ರಾಜಸ ಸ್ವಭಾವದವನಾದ ಆತನಿಗೆ ಇದೇ ತನ್ನ ಶ್ರೀಮಂತಿಕೆಯನ್ನು ಎತ್ತಿ ತೋರಿಸಲು ಸದಾವಕಾಶ ಅಂತನ್ನಿಸುತ್ತದೆ. ತನ್ನ ಬಳಿಯಿರುವ ಸಮಸ್ತ ಐಶ್ವರ್ಯವನ್ನೂ ತಂದು ತುಂಬಿಸುತ್ತಾನೆ. ಎರಡು ವಸ್ತುಗಳ ಮಧ್ಯೆ ಸ್ವಲ್ಪವೂ ಅವಕಾಶ ಉಳಿಯಬಾರದು ಎನ್ನುವುದು ಸ್ಪರ್ಧೆಯ ನಿಯಮವಾಗಿತ್ತು. ಎಷ್ಟು ತುಂಬಿದರೂ ಎರಡು ವಸ್ತುಗಳ ನಡುವೆ ಬಿರುಕು ಚಿಕ್ಕದೋ, ದೊಡ್ಡದೋ ಇದ್ದೇ ಇರುತ್ತಿತ್ತು. ಸ್ಪರ್ಧೆಯಲ್ಲಿ ದುರ್ಯೋಧನ ಸೋತ.

ಅಲ್ಲಿಯವರೆಗೂ ಶಾಂತಮಾನಸನಾಗಿ ಕುಳಿತಿದ್ದ ಧರ್ಮರಾಜನು ಎದ್ದು ನಿಂತನು. ಒಳಗೆ ಹೋಗಿ ಮೌನವಾಗಿ ಯಾವ ಆಡಂಬರವೂ ಇಲ್ಲದೆ, ಶ್ರೀಕೃಷ್ಣನ ಮಧುರವಾದ ಸ್ಮರಣೆಯೊಡನೆ, ಸೌಮ್ಯವಾದ ಹೆಜ್ಜೆಯೊಂದಿಗೆ ದೀಪವೊಂದನ್ನು ಆ ಭವನದೊಳಗೆ ತಂದು ಹಚ್ಚಿಟ್ಟನು. ಮರುಕ್ಷಣದಲ್ಲಿ ಇಡೀ ಭವನವನ್ನು ಒಂದು ಬಿಂದುವಿನಷ್ಟು ಜಾಗವನ್ನೂ ಬಿಡದೆ ಬೆಳಕು ವ್ಯಾಪಿಸಿತು. ಯಾವೆರಡು ವಸ್ತುಗಳ ನಡುವೆಯೂ ಬೆಳಕೊಂದೇ ಕಾಣುತ್ತಿತ್ತು. ಎತ್ತ ನೋಡಿದರೂ ಬೆಳಕೇ ಬೆಳಕು.

ನಮ್ಮ ಜೀವನಮೂಲದಲ್ಲಿ ಪರಂಜ್ಯೋತಿಯೊಂದು ಬೆಳಗುತ್ತಿದೆಯಂತೆ. ಸಮಸ್ತ ಪಿಂಡಾಂಡ- ಬ್ರಹ್ಮಾಂಡಕ್ಕೂ ಇದೇ ಮೂಲ. “ಅವನು ಕೋಟಿಕೋಟಿ ಪ್ರಕಾಶವಪ್ಪಾ. ಆದರೂ ಬೆಳದಿಂಗಳಂತೆ ತಂಪಾಗಿದಾನೆ. ಅವನ ತೆಕ್ಕೆಯಲ್ಲಿ ಸಿಕ್ಕಿ ಆನಂದ ತುಂದಿಲರಾಗುತ್ತೇವಪ್ಪಾ’ ಎಂದು ಶ್ರೀರಂಗ ಮಹಾಗುರುಗಳು, ಆ ಮೂಲ ಬೆಳಕಿನ ದರ್ಶನದ ಅನುಭವವನ್ನು ವರ್ಣಿಸುತ್ತಿದ್ದರು. ಅಂಥ ಪರಂಜ್ಯೋತಿಯ ಅವತಾರವಾದ ಶ್ರೀಕೃಷ್ಣ ಪರಮಾತ್ಮನೇ ಉಪಸ್ಥಿತನಾಗಿದ್ದ ಸಭೆ. ಅವನನ್ನು ಪ್ರತಿನಿಧಿಸುವ ದೀಪವೊಂದನ್ನು ಬೆಳಗಿಸಿದ ಧರ್ಮರಾಜ. ವಿಶ್ವವನ್ನೆಲ್ಲಾ ಒಳಗೂ- ಹೊರಗೂ ತುಂಬಿಕೊಂಡಿರುವ ಶಕ್ತಿಯೇ ಅದು.
(ಪಾಕ್ಷಿಕ ಅಂಕಣ)

* ತಾರೋಡಿ ಸುರೇಶ

Advertisement
Advertisement

Udayavani is now on Telegram. Click here to join our channel and stay updated with the latest news.

Next