Advertisement

ಶಾಲೆಯಿದ್ದು ಸೀಟು ಸಿಕ್ಕರೆ ನಿಮ್ಮ ಅದೃಷ್ಟ

12:57 PM Apr 21, 2017 | Team Udayavani |

ದಾವಣಗೆರೆ: ಪ್ರತಿಷ್ಠಿತ ಹಾಗೂ ಶಾಶ್ವತ ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಮಕ್ಕಳಿಗೂ ಅವಕಾಶ ಕಲ್ಪಿಸಲು ಸರ್ಕಾರ ಜಾರಿಮಾಡಿರುವ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ 2017-18ನೇ ಸಾಲಿನಲ್ಲಿ ಲಭ್ಯವಿರುವ ಒಟ್ಟಾರೆ 4,276 (ಎಲ್‌ ಕೆಜಿ ಮತ್ತು ಒಂದನೇ ತರಗತಿ) ಸೀಟುಗಳಿಗೆ 6,796 ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ಸಾಲಿಗೆ ಹೋಲಿಸಿದರೆ ಈ ಬಾರಿ 900ಕ್ಕೂ ಹೆಚ್ಚು ಅರ್ಜಿ ಬಂದಿವೆ. 

Advertisement

ಪ್ರಸಕ್ತ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯಡಿ ಎಲ್‌ ಕೆಜಿಗೆ 3,604 ಹಾಗೂ ಒಂದನೇ ತರಗತಿಗೆ 672 ಸೀಟುಗಳು ಲಭ್ಯ ಇವೆ. ಮೊದಲ ಹಂತದಲ್ಲಿ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಮಾ.31 ಕೊನೆಯ ದಿನವಾಗಿತ್ತು. ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ಉಂಟಾದ ಕೆಲ ತಾಂತ್ರಿಕ, ನಿಗದಿತ ಸಮುಯದಲ್ಲಿ ಪ್ರಮಾಣಪತ್ರ ದೊರೆಯುವಲ್ಲಿನ ವಿಳಂಬ ಮತ್ತಿತರ ಕಾರಣಕ್ಕಾಗಿ ಏ. 15ರ ವರೆಗೆ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ಮಾಡಿಕೊಡಲಾಯಿತು. 

ಸೀಟು 4,276-ಅರ್ಜಿ 6,796… ದಾವಣಗೆರೆ ಉತ್ತರದಲ್ಲಿ ಎಲ್‌ಕೆಜಿ ಮತ್ತು ಒಂದನೇ ತರಗತಿ ಸೇರಿ ಒಟ್ಟು 945 ಸೀಟು ಇವೆ. ಅಂತೆಯೇ ದಾವಣಗೆರೆ ದಕ್ಷಿಣ ವಲಯದಲ್ಲಿ 1,514 ಚನ್ನಗಿರಿ 425, ಹರಪನಹಳ್ಳಿ 396, ಹರಿಹರ 454, ಹೊನ್ನಾಳಿ 299, ಜಗಳೂರಿನಲ್ಲಿ 243 ಸೀಟುಗಳಿವೆ. ಚನ್ನಗಿರಿಯಲ್ಲಿ 425 ಸೀಟಿಗೆ 496, ದಾವಣಗೆರೆ ಉತ್ತರದಲ್ಲಿ 945ಕ್ಕೆ 1,740, ದಾವಣಗೆರೆ ದಕ್ಷಿಣದಲ್ಲಿ 1,514ಕ್ಕೆ 2,350, ಹರಪನಹಳ್ಳಿಯಲ್ಲಿ 396ಕ್ಕೆ 611,

ಹರಿಹರದಲ್ಲಿ 454ಕ್ಕೆ 997, ಹೊನ್ನಾಳಿಯಲ್ಲಿ 299ಕ್ಕೆ 333, ಜಗಳೂರಿನಲ್ಲಿ 243 ಸೀಟುಗಳಿಗೆ 269 ಅರ್ಜಿ ಸಲ್ಲಿಕೆಯಾಗಿವೆ. ಅರ್ಜಿಗಳ ಪರಿಶೀಲನಾ ಕಾರ್ಯ ಪ್ರಗತಿಯಲ್ಲಿದೆ. ಪ್ರತಿಯೊಂದು ಅರ್ಜಿಯಲ್ಲಿನ ಪ್ರತಿ ಅಂಶದ ಬಗ್ಗೆ ಕೂಲಂಕುಷ ಪರಿಶೀಲನೆಯ ಜೊತೆಗೆ ಅರ್ಜಿಯೊಂದಿಗೆ ಅಡಕವಾಗಿರುವ ಪ್ರಮಾಣಪತ್ರ, ದಾಖಲೆ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ. ಮುಂದಿನ ವಾರದಲ್ಲಿ ಬಹುಶಃ ಲಾಟರಿ ಎತ್ತುವ ಪ್ರಕ್ರಿಯೆ ಪ್ರಾರಂಭವಾಗಬಹುದು ಎನ್ನುತ್ತವೆ ಶಿಕ್ಷಣ ಮೂಲಗಳು. 

ಅರ್ಜಿ ಸಲ್ಲಿಕೆಯಲ್ಲಿನ ಪ್ರಮಾದ… ಆರ್‌ಟಿಇ ಅರ್ಜಿಗಳನ್ನು ಆನ್‌ ಲೈನ್‌ನಲ್ಲಿ ಭರ್ತಿ ಮಾಡುವಾಗ ಉಂಟಾಗಿರುವ ಕೆಲವಾರು ಪ್ರಮಾದ ನಡೆದಿವೆ. ಉದಾಹರಣೆಗೆ ವಿಶೇಷ ಅಗತ್ಯತೆ (ವಿಕಲಚೇತನರು) ಅರ್ಜಿ ಸಲ್ಲಿಸುವಾಗ ಪ್ರತ್ಯೇಕ ಮಾಹಿತಿ ನೀಡಬೇಕು. ಸಾಮಾನ್ಯರು ಸಾಮಾನ್ಯ ಎಂಬುದಾಗಿ ನಮೂದಿಸಬೇಕಾಗುತ್ತದೆ. ಆದರೆ, ಕೆಲವಾರು ಇಂಟರ್‌ನೆಟ್‌ ಸೆಂಟರ್‌ಗಳಲ್ಲಿ ಆನ್‌ಲೈನ್‌ ನಲ್ಲಿ ಅರ್ಜಿ ತುಂಬುವಾಗ ವಿಶೇಷ ಅಗತ್ಯತೆ (ವಿಕಲಚೇತನರು) ಕೋಟಾವನ್ನು ಭರ್ತಿ ಮಾಡಿದ್ದಾರೆ.

Advertisement

ದಾಖಲೆ ಪರಿಶೀಲನೆ ವೇಳೆ ಸಂಬಂಧಿತ ಪೋಷಕರಿಗೆ ದಾಖಲೆ ಕೇಳಿದಾಗ ತಮ್ಮ ಮಕ್ಕಳು ವಿಕಲಚೇತನರಲ್ಲ ಎಂದು ಹೇಳಿರುವ ಉದಾಹರಣೆಯೂ ಉಂಟು. ಪರಿಶಿಷ್ಟ ಜಾತಿ, ಪಂಗಡ ಕೋಟಾ ವಿಚಾರದಲ್ಲೂ ಅದೇ ರೀತಿ ಆಗಿದೆ. ಅನೇಕರ ಪೋಷಕರು ತಾವು ಪಡೆದುಕೊಂಡಿರುವ ದಾಖಲೆ, ಪ್ರಮಾಣಪತ್ರದ ಆಧಾರದಲ್ಲಿ ಅರ್ಜಿ ಭರ್ತಿ ಮಾಡಿದಾಗ ಕಂಪ್ಯೂಟರ್‌ ಸೀÌಕರಿಸದ ಉದಾಹರಣೆಗಳು ಸಾಕಷ್ಟಿವೆ.

ಏಕೆಂದರೆ ಆಧಾರ್‌ ಕಾಡ್‌ ìನಲ್ಲಿರುವಂತೆ ಮಾತ್ರವೇ ಮಗು, ತಂದೆ, ತಾಯಿ, ವಯಸ್ಸು, ವಾರ್ಡ್‌, ವಾಸಸ್ಥಳದ ವಿಳಾಸ… ಇತರೆ ಸಂಬಂಧಿತ ಮಾಹಿತಿ ನೀಡಬೇಕು. ಅನೇಕ ಪೋಷಕರು ಇದು ಗೊತ್ತಿಲ್ಲದೆ ಕೊನೆಯವರೆಗೆ ಅರ್ಜಿ ಸಲ್ಲಿಸಲಿಕ್ಕಾಗಲಿಲ್ಲ. ನಗರ ಪ್ರದೇಶದಲ್ಲಿ ಹೆಚ್ಚಿನ ಮಾಹಿತಿ ಇದ್ದವರಿಗೆ ಅಂತಹ ಸಮಸ್ಯೆ ಆಗಿಲ್ಲ. ಆದರೆ, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಸಮಸ್ಯೆ ಉಂಟಾದ ಪರಿಣಾಮ ಅರ್ಜಿ ಸಲ್ಲಿಸಲಿಕ್ಕಾಗದವರು ಅನೇಕರು. 

ಸಮಸ್ಯೆ ತಪ್ಪಿಯೇ ಇಲ್ಲ… ಕಾಯ್ದೆ ಜಾರಿಗೆ ಬಂದ ಪ್ರಾರಂಭಿಕ ಕೆಲ ವರ್ಷಗಳಲ್ಲಿ ಆಯಾಯ ವಾರ್ಡ್‌ನಲ್ಲಿನ ಖಾಸಗಿ ಶಾಲೆಗಳಿಗೆ ಮಾತ್ರವೇ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿತ್ತು. ಕೆಲವಾರು ವಾರ್ಡ್‌ನಲ್ಲಿ ಖಾಸಗಿ ಶಾಲೆಯೇ ಇಲ್ಲ. ಇದ್ದರೂ ಸೀಟುಗಳ ಸಂಖ್ಯೆ ಕಡಿಮೆ. ಹಾಗಾಗಿ ನಂತರದ ವರ್ಷದಲ್ಲಿ ಅಕ್ಕಪಕ್ಕದ ವಾರ್ಡ್‌ ಶಾಲೆಗೂ ಅರ್ಜಿ ಸಲ್ಲಿಸುವ ಅವಕಾಶ ನೀಡಲಾಗಿತ್ತು.

ಆದರೆ, ಆಗಲೂ ಆ ಸಮಸ್ಯೆ ತಪ್ಪಿರಲಿಲ್ಲ. ಏಕೆಂದರೆ ಅಕ್ಕಪಕ್ಕದ ವಾರ್ಡ್‌ನಲ್ಲಿ ಶಾಲೆಗಳೇ ಇಲ್ಲ. ಜಿಲ್ಲಾ ಕೇಂದ್ರ ದಾವಣಗೆರೆ ದಕ್ಷಿಣ ಭಾಗದ 17 ವಾರ್ಡ್‌ಗಳಲ್ಲಿ ಹುಡುಕಿದರೂ ಪ್ರತಿಷ್ಠಿತ ಖಾಸಗಿ ಶಾಲೆಗಳೇ ಇಲ್ಲ. ಹಾಗಾಗಿ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಓದಿಸಲು ಅವಕಾಶ ಮಾಡಿಕೊಡುತ್ತಿರುವ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ) ಅನೇಕ ಮಕ್ಕಳು, ಪೋಷಕರಿಗೆ ಗಗನಕುಸುಮದಂತಾಗಿದೆ. 

* ರಾ.ರವಿಬಾಬು 

Advertisement

Udayavani is now on Telegram. Click here to join our channel and stay updated with the latest news.

Next