ಪ್ರಪಂಚದಲ್ಲಿ ಸ್ನೇಹಕ್ಕೆ ಬಹಳ ವಿಶಿಷ್ಟವಾದ ಸ್ಥಾನವಿದೆ. ಆತ್ಮೀಯತೆಯ ಪ್ರತೀಕವೇ ಸ್ನೇಹ. ಇಬ್ಬರ ಮನಸ್ಥಿತಿ, ಅಭಿರುಚಿಯ ನಡುವೆ ಸಾಮ್ಯತೆ ಇದ್ದರೆ ಅವರ ನಡುವೆ ಸ್ನೇಹವೆಂಬ ಪವಿತ್ರ ಬಂಧ ಶುರುವಾಗುತ್ತದೆ. ಸ್ನೇಹಕ್ಕೆ ಯಾವುದೇ ಜಾತಿ, ಮತ , ಧರ್ಮ, ವರ್ಣ, ಲಿಂಗ, ವಯಸ್ಸಿನ ಭೇದವಿರುವುದಿಲ್ಲ. ಇದು ಪ್ರೀತಿ, ವಿಶ್ವಾಸ, ನಂಬಿಕೆಯ, ವಾತ್ಸಲ್ಯದ ತಳಹದಿಯ ಮೇಲೆ ಭದ್ರವಾಗಿ ನಿಂತಿರುತ್ತದೆ. ಸ್ನೇಹ ಸಂಬಂಧದಲ್ಲಿ ರಕ್ತ ಸಂಬಂಧಕ್ಕಿಂತಲೂ ಮಿಗಿಲಾದ ಬಂಧ ಅಡಗಿರುತ್ತದೆ.
ಚಿಕ್ಕ ವಯಸ್ಸಿನಲ್ಲಿ ಸ್ನೇಹಿತರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರೊಡನೆ ಮಣ್ಣಿನಲ್ಲಿ ಬಿದ್ದು ಹೊರಳಿ ಆಡುತ್ತಿದ್ದುದು, ಜಾರುಗುಪ್ಪೆ ಆಡುವಾಗ ಸ್ನೇಹಿತರಿಬ್ಬರೂ ಕೈ ಕೈ ಹಿಡಿದುಕೊಂಡು ಜಾರಿ ಪೆಟ್ಟು ಮಾಡಿಕೊಂಡಿದ್ದು.
ತುಂಟಾಟ ಮಾಡಿ ಮನೆಯಲ್ಲಿ ಸಿಕ್ಕಿ ಬಿದ್ದಾಗ ಒಬ್ಬರನ್ನೊಬ್ಬರು ರಕ್ಷಣೆ ಮಾಡುತ್ತಿದ್ದುದು, ಮಳೆಗಾಲದ ಮಳೆಯಲ್ಲಿ ಶಾಲೆ ಮುಗಿಸಿ ಮನೆಗೆ ಬರುವಾಗ ಕೊಡೆ ಇದ್ದರೂ ಮಳೆಯಲ್ಲಿ ನೆನೆಯುತ್ತಾ ನೀರನ್ನು , ಗೊಚ್ಛೆಯನ್ನು, ಒಬ್ಬರಿಗೊಬ್ಬರು ಹಾರಿಸಿಕೊಂಡು ಮೈಯೆಲ್ಲಾ ರಾಡಿ ಮಾಡಿಕೊಂಡು ಅಮ್ಮಂದಿರ ಹತ್ತಿರ ಬೈಸಿಕೊಂಡ ಸಂದರ್ಭಗಳನ್ನು ನೆನೆಸಿಕೊಂಡರೆ ಮನಸ್ಸಿಗೆ ಆಗುವ ಸಂಭ್ರಮ ಸಂತೋಷ ಹೇಳತೀರದು. ಮಕ್ಕಳಿಗೆ ಎಷ್ಟೇ ಆಟದ ಸಾಮಾನು ತಂದುಕೊಟ್ಟರೂ ಅವರಿಗೆ ಸ್ನೇಹಿತರೊಡನೆ ಆಡಿದಷ್ಟು ಖುಷಿ ಸಿಗುವುದಿಲ್ಲ.
ಇನ್ನೂ ಹರಯಕ್ಕೆ ಕಾಲಿಟ್ಟಗಲಂತೂ ಸ್ನೇಹಿತರೇ ನಮಗೆ ಎಲ್ಲ ಆಗಿರುತ್ತಾರೆ. ಅವರಿಗೆ ನಾವು ಅಗ್ರಸ್ಥಾನವನ್ನು ಕೊಟ್ಟಿರುತ್ತೇವೆ. ಕೆಲವೊಂದು ವಿಷಯಗಳನ್ನು ಪೋಷಕರ ಬಳಿ ಚರ್ಚಿಸಲು ಸಾಧ್ಯವಾಗುವುದಿಲ್ಲ, ಅಂತಹ ವಿಷಯಗಳನ್ನು ಸ್ನೇಹಿತರೊಡನೆ ಹಂಚಿಕೊಂಡು ಮನಸ್ಸಿನ ಭಾರವನ್ನು ಇಳಿಸಿಕೊಳ್ಳುತ್ತೇವೆ. ನಿಜವಾದ ಸ್ನೇಹಿತರಲ್ಲಿ ಹೊಟ್ಟೆಕಿಚ್ಚು, ಪೈಪೋಟಿ ಇರುವುದಿಲ್ಲ. ಒಬ್ಬರು ಇನ್ನೊಬ್ಬರ ಬೆಳವಣಿಗೆಯನ್ನು ನೋಡಿ ಖುಷಿಪಡುತ್ತಾರೆ ಮತ್ತು ಅವರ ಏಳಿಗೆ ಬಯಸಿ ತಮ್ಮಿಂದಾಗುವ ಸಹಕಾರವನ್ನು ನೀಡುತ್ತಾರೆ.
ಭಗವಾನ್ ಕೃಷ್ಣ ಮತ್ತು ಕುಚೇಲರ ಸ್ನೇಹ ಜಗಕ್ಕೆ ಮಾದರಿ. ಸ್ನೇಹ ಎಂದೊಡನೆ ನೆನಪಿಗೆ ಬರುವುದು ಶ್ರೀ ಕೃಷ್ಣ ಮತ್ತು ಕುಚೇಲರ ಗೆಳೆತನ. ದೇವರ ದಯೆಯಿಂದ ನನ್ನ ಜೀವನದುದ್ದಕ್ಕೂ ನನಗೆ ಒಳ್ಳೆಯ ಸ್ನೇಹಿತರ ಸಾಂಗತ್ಯ ಸಿಕ್ಕಿದೆ. ಬಾಲ್ಯದಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ಶುಭ ಮತ್ತು ಅಮೂಲ್ಯ ನನ್ನ ಆಪ್ತ ಗೆಳತಿಯರ ಸ್ನೇಹ ಈಗಲೂ ನನ್ನೊಡನೆ ಬಾಮದವ್ಯ ಉಳಿದಿದೆ. ಇಷ್ಟು ದಿನ ಬೆಚ್ಚನೆ ಸೂರಿನಲ್ಲಿ ಅಪ್ಪ ಅಮ್ಮನ ಮಡಿಲಿನಲ್ಲಿ ಹಾಯಾಗಿ ಇದ್ದ ನನಗೆ ಸ್ನಾತಕೋತ್ತರ ಪದವಿಗಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೀಟು ಸಿಕ್ಕಾಗ ಕೊಣಾಜೆಯ ಹಾಸ್ಟೆಲ್ ಸೇರಬೇಕಾಯಿತು.
ಅಲ್ಲಿ ಸ್ನೇಹಿತರಾಗಿಯೂ ಹಾಸ್ಟೆಲ್ ಜತೆಗಾರರಾಗಿಯೂ ನನ್ನ ಜೊತೆಯಾದ ಮಧುರ ಮತ್ತು ಜ್ಯೋತಿ ಇಂದಿಗೂ ನನ್ನ ಆತ್ಮೀಯ ಸ್ನೇಹಿತ ಬಳಗ. ಸ್ನೇಹ ಜೀವಗಳನ್ನು ಬೆಸೆಯುವ ಸಂಬಂಧವಾಗಿದೆ. ಪರಸ್ಪರರಿಗಾಗಿ ಮಿಡಿಯುವ ತುಡಿಯುವ ಸ್ಪಂದಿಸುವ ಹಾಗೂ ಸಾಂತ್ವಾನ ಪೋ›ತ್ಸಾಹ ನೀಡುತ್ತಾ ಇಬ್ಬರಿಗೂ ಆಪ್ತತೆ ತಂದುಕೊಡುತ್ತದೆ.
ಸಾಹಿತ್ಯ ಸೃಷ್ಟಿ ಗೆಳೆಯತಿಯರ ಬಳಗದ ಬರವಣಿಗೆಯ ಮೂಲಕ ಪರಿಚಿತರಾದ ಗೆಳತಿ ಆಶ್ರಿತಾ ಕಿರಣ್. ಮೊದಲ ಬಾರಿ ನನ್ನ ಕೈ ಬರಹಗಳು ಪತ್ರಿಕೆಯ ಪ್ರಿಂಟಿನಲ್ಲಿ ಪ್ರಿಂಟಾಗಿ ಬಂದಾಗ ಆದ ಸಂತೋಷವನ್ನು ನಾನು ಅವರೊಂದಿಗೆ ಹಂಚಿಕೊಂಡಾಗ ನನಗಿಂತ ಖುಷಿಪಟ್ಟಿದ್ದು ಅವರೇ. ಭೇಟಿಯೇ ಆಗದಿದ್ದರೂ ನಿಸ್ವಾರ್ಥವಾಗಿ ಪ್ರೀತಿಪೂರ್ವಕವಾಗಿ ಪ್ರೋತ್ಸಾಹಿಸುವ ಗೆಳತಿ ಆಶ್ರಿತ ಕಿರಣ…. ಸ್ನೇಹವು ಜೀವನದ ಜಂಜಾಟವನ್ನು ಮರೆಸುವ ಸಂಜೀವಿನಿ ಇದ್ದಂತೆ ಸ್ನೇಹಿತರ ಬಳಗ ದೊಡ್ಡದಿದ್ದಷ್ಟು ಈ ಸಂಜೀವಿನಿಯ ಹನಿಗಳು ಜಾಸ್ತಿ. ಸ್ನೇಹವು ಎಂದಿಗೂ ಚಿರಂಜೀವಿ. ಒಬ್ಬ ನಿಜವಾದ ಸ್ನೇಹಿತೆಯಲ್ಲಿ ಅಪ್ಪನ ಕಾಳಜಿ, ಅಮ್ಮನ ಮಮತೆ , ಅಣ್ಣನ ಬೆಂಬಲ, ರಕ್ಷಣೆ, ಅಕ್ಕನ ಪ್ರೀತಿ, ತಮ್ಮನ ತುಂಟಾಟ , ತಂಗಿಯ ಮುಗ್ಧತೆ , ಕುಚೇಷ್ಟೆ ಎಲ್ಲ ಸಂಬಂಧಗಳೂ ಹದವಾಗಿ ಮಿಳಿತವಾಗಿದೆ. ಎಲ್ಲ ಸಂಬಂಧಗಳನ್ನು ಮೀರಿಸುವ ಬಂಧವೆ ಸ್ನೇಹ.
- ಚೇತನ ಭಾರ್ಗವ
ಬೆಂಗಳೂರು