ಮತ್ತೂಮ್ಮೆ ಬಾ. ನನ್ನ ಪ್ರೀತಿಯನ್ನು ನಿನಗೆ ತಿಳಿಸುತ್ತೇನೆ. ಒಂದೇ ಕೊಡೆಯಡಿಯಲ್ಲಿ ಕನಸುಗಳನ್ನು ನೇಯುತ್ತಾ ನಡೆಯೋಣ. ಆ ತುಂತುರು ಮಳೆಗೆ ನಮ್ಮ ಪ್ರೇಮದ ಕಾಮನಬಿಲ್ಲು ಕಟ್ಟೋಣ.
ಗಗನದಲ್ಲಿ ಮೋಡ ತುಂಬಿದರೆ ನವಿಲು ಗರಿಗೆದರಿ ನರ್ತಿಸುತ್ತದಂತೆ. ಆದರೆ ಮೊದಲ ಮಳೆಯ ತುಂತುರು ಹನಿ ಉದುರಬೇಕಾದರೆ ನನ್ನ ಮನವೂ ಕುಣಿದಾಡುತ್ತಿದೆ. ಅದರ ಹಿಂದೆಯೇ ನಿನ್ನ ನೆನಪು. ಆ ದಿನ ಅನಿರೀಕ್ಷಿತ ಗುಡುಗಿಗೆ ಹೆದರಿ ನಡುಗಿ ಒಬ್ಬಂಟಿಯಾಗಿ ನಡೆಯುತ್ತಿದ್ದೆ. ಬೀಸುಗಾಳಿಗೆ ನನ್ನ ಕೊಡೆ ಹಾರಿಹೋದೀತೆಂದು ಅದನ್ನು ಗಟ್ಟಿಯಾಗಿ ಹಿಡಿದು ನಡೆಯುತ್ತಿರಬೇಕಾದರೆ, ಮಳೆಯಲ್ಲಿ ನೆನೆಯುತ್ತಾ ನೀನು ಓಡಿ ಬರುತ್ತಿದ್ದೆ. ನನ್ನಲ್ಲಿ ಕೊಡೆಯಿರುವುದನ್ನು ಕಂಡು, “ಪ್ಲೀಸ್, ಬಸ್‌ಸ್ಟಾಪ್ ತನಕ ನಿಮ್ಮ ಕೊಡೆಯಲ್ಲಿ ಬರಲಾ?’ ಎಂದು ಕೇಳಿದ್ದೆ. ಮೊದಲೇ ನೀನು ಅಪರಿಚಿತ, ಅದರಲ್ಲೂ ಯುವಕ ಅಂದಾಗ ನನಗೆ ಭಯ,ಆತಂಕಗಳಿಂದ ಏನು ಹೇಳಬೇಕೆಂದೇ ತೋಚಲಿಲ್ಲ. ಈ ಗುಡುಗಿನ ಭಯಕ್ಕೆ ನಿನ್ನ ಜೊತೆಗಾರಿಕೆ ಪರಿಹಾರವಾಗಬಹುದು ಅಂತಲೂ ಅನಿಸಿತ್ತು. ನಿಮಗಿಷ್ಟವಿಲ್ಲದಿದ್ದರೆ ಬೇಡ ಬಿಡಿ, ಸ್ವಲ್ಪ ಒದ್ದೆಯಾದೆ, ಪೂರ್ತಿ ಒದ್ದೆಯಾಗುತ್ತೇನೆ ಎಂದು ಹೇಳಿ ನೀನು ನಡೆದೇ ಬಿಟ್ಟಿದ್ದೆ. ಒಂದು ಕ್ಷಣ ತಳಮಳಗೊಂಡ ನಾನು ಮರುಕ್ಷಣ, ಹಲೋ, ಸರ್ ಪರವಾಗಿಲ್ಲ, ಬನ್ನಿ’ ಎಂದೆ. ಮುಂದೆ ಹೋದವ ಮುಗುಳ್ನಗುತ್ತಾ ನಿಂತೆ. ನಂತರ, ಜೊತೆಯಲ್ಲೇ ಸಾಗಿದೆವು.
ನೀನು ಏನೇನೋ ಮಾತಾಡುತ್ತಿದ್ದೆ. ನಾನು ಎಲ್ಲವನ್ನೂ ಕೇಳಿಸಿಕೊಳ್ಳಲಿಲ್ಲ. ಯಾರಾದರೂ ನೋಡಿದರೆ ಏನು ತಿಳಿದುಕೊಂಡಾರು ಎಂಬ ಭಯ ನನ್ನನ್ನು ಕಾಡುತ್ತಿತ್ತು. ನೀನು ಮಾತಿನ ಮಧ್ಯೆ ಒಮ್ಮೊಮ್ಮೆ ನನ್ನ ಮುಖವನ್ನೇ ದಿಟ್ಟಿಸುತ್ತಿದ್ದೆ. ನನ್ನ ಹೃದಯ ಬಡಿತ ಆಗ ನನಗೇ ಕೇಳಿಸುವಷ್ಟು ಜೋರಾಗಿತ್ತು. ಒಂದೇ ಕೊಡೆಯಡಿಯಲ್ಲಿ ನಡೆಯುವಾಗ ನಿನಗೆ ನನ್ನ ಮೈ ಸೋಕದಿರಲು ಬಹಳಷ್ಟು ಎಚ್ಚರಿಕೆ ವಹಿಸಿದ್ದೆ. ಆದರೂ ಒಂದೆರಡು ಬಾರಿ ನಿನ್ನ ಕೈ ನನ್ನ ಕೈಯನ್ನು ಸೋಕಿತು. ನಾನು ಸಂಕೋಚದಿಂದ ಮುದ್ದೆಯಾಗಿದ್ದೆ. ನೀನೊಮ್ಮೆ ಕೊಡೆಯಡಿಯಿಂದ ಹೊರಹೋದರೆ ಸಾಕೆಂದು ಪ್ರಾರ್ಥಿಸತೊಡಗಿದೆ. ಅಂತೂ ಬಸ್ ಸ್ಟಾಪ್ ಬಂತು. ನೀನು “ಥ್ಯಾಂಕ್ಸ್’ ಎಂದು ಹೇಳಿ ಹೊರಟೆ. ಹೋಗುವ ಮುನ್ನ, “ನೋಡಿ, ಹುಡುಗರನ್ನು ಕಂಡಾಗ ಇಷ್ಟೊಂದು ಭಯಪಡುವ ಅಗತ್ಯವಿಲ್ಲ’ ಎಂದು ನಕ್ಕೆ. ನಿನ್ನ ನಗು, ನನ್ನ ಹೃದಯವನ್ನು ಅಲ್ಲಾಡಿಸಿದಂತೆನಿಸಿತು. ಅಬ್ಟಾ, ಪಾರಾದೆ! ಎಂದು ನಿರಾಳವಾಗಿ ಮನೆಕಡೆ ಹೆಜ್ಜೆ ಹಾಕಿದೆ.
ಆ ರಾತ್ರಿ ಕನಸಲ್ಲಿ ನೀನು ಬಂದೆ. ನಿನ್ನ ಹೆಸರು, ಪರಿಚಯ ಕೇಳಬೇಕಿತ್ತೆಂದು ನನಗನಿಸಿತು. ಇಂತಹ ಯೋಚನೆ ಬಂದುದಕ್ಕೆ ನನ್ನನ್ನೇ ಬೈದುಕೊಂಡೆ. ನಿಧಾನಕ್ಕೆ ನಿನ್ನನ್ನು ಮರೆತುಬಿಟ್ಟೆ. ಆದರೆ ಆ ದಿನ ಪುನಃ ನಿನ್ನನ್ನು ಅಕಸ್ಮಾತ್ ನೋಡಿದೆ. ನೋಡಿಯೂ ನೋಡದಂತೆ ಮುಂದಕ್ಕೆ ನಡೆದರೆ ನೀನು ಕರೆದೆ, “ಹಲೋ, ಒಮ್ಮೆ ನಿಲ್ಲಿ’ ಎಂದೆ. ನಾನು ನಿಂತೆ. “ನೀವಲ್ವಾ ಆ ದಿನ ನನ್ನನ್ನು ಕೊಡೆಯಡಿಯಲ್ಲಿ ಜೊತೆಗೆ ಕರೆದುಕೊಂಡು ಹೋಗಿದ್ದು?ಆ ದಿನ ನಿಮ್ಮ ಹೆಸರು ಕೇಳಲು ಮರೆತೆ. ನಿಮ್ಮ ಹೆಸರೇನು?’ ಎಂದು ನೀನಾಗಿಯೇ ಕೇಳಿಬಿಟ್ಟೆ. ನಾನು ಹೆಸರು ಹೇಳಿದೆ. ಸ್ವಲ್ಪ ಹೊತ್ತು ನೀನು ನನ್ನಲ್ಲಿ ಮಾತನಾಡಿದೆ. ನಾನು ಮನೆಗೆ ಹೋಗಲು ಅವಸರಿಸಿದಾಗ ಮಾತು ನಿಲ್ಲಿಸಿ, ಹೋಗಲನುವು ಮಾಡಿದೆ. ಸ್ವಲ್ಪ ಮುಂದೆ ಹೋಗಿ ಸುಮ್ಮನೆ ಹಿಂದೆ ತಿರುಗಿದೆ. ನೀನು ನನ್ನನ್ನೇ ನೋಡುತ್ತಾ ಅಲ್ಲೇ ನಿಂತಿದ್ದೆ. ನಂತರ ಹಲವು ಸಲ ನಿನ್ನನ್ನು ಆ ದಾರಿಯಲ್ಲಿ ನೋಡಿದೆ. ನೀನು ನನಗೋಸ್ಕರ ಅಲ್ಲಿ ಬರುತ್ತಿರುವುದು ಖಚಿತವಾಯಿತು. ಯಾವುದೋ ಗಳಿಗೆಯಲ್ಲಿ ನನ್ನ ಮನಸ್ಸು ನಿನ್ನಲ್ಲಿ ಕಳೆದುಹೋಯಿತು.
ಈಗ ನಿನ್ನನ್ನು ನೋಡದೇ ನನಗೆ ಒಂದು ದಿನವೂ ಇರಲು ಸಾಧ್ಯವಾಗ್ತಿಲ್ಲ. ಮಳೆ ಹನಿದರೆ ನೀನು ನೆನಪಾಗುತ್ತೀ. ನಿನ್ನನ್ನು ನನಗೆ ಪರಿಚಯಿಸಿದ ಮಳೆಗೆ ನೂರು ವಂದನೆ ಹೇಳುತ್ತೇನೆ. ಈ ಮಳೆಗಾಲದಲ್ಲೂ ಹಿಂದಿನಂತೆ ಮತ್ತೂಮ್ಮೆ ಬಾ. ನನ್ನ ಪ್ರೀತಿಯನ್ನು ನಿನಗೆ ತಿಳಿಸುತ್ತೇನೆ. ಒಂದೇ ಕೊಡೆಯಡಿಯಲ್ಲಿ ಕನಸುಗಳನ್ನು ನೇಯುತ್ತಾ ನಡೆಯೋಣ . ಆ ತುಂತುರು ಮಳೆಗೆ ನಮ್ಮ ಪ್ರೇಮದ ಕಾಮನಬಿಲ್ಲು ಕಟ್ಟೋಣ.
ಮಳೆಗಾಗಿಯೂ, ನಿನಗಾಗಿಯೂ ಹಂಬಲಿಸುತ್ತಾ ಕೊಡೆಯೊಂದಿಗೆ ಕಾಯುತ್ತಿರುವ,
ನಿನ್ನ ಗೆಳತಿ..
ಜೆಸ್ಸಿ ಪಿ.ವಿ