Advertisement
ಪ್ರೀತಿಯ ಮಾಧವ,ನೀ ನಡೆವ ಹಾದಿಯಲಿ ನಗೆ ಹೂ ಬಾಡದಿರಲಿ
ಈ ಬಾಳ ಬುತ್ತಿಯಲಿ ಸಿಹಿ ಪಾಲು ನಿನಗಿರಲಿ
ಕಹಿ ಎಲ್ಲ ನನಗಿರಲಿ…
Related Articles
Advertisement
ಯಾರನ್ನೂ ಮಾತಾಡಿಸದ ಮಹಾಮೌನಿ, ಮುಗ್ಧ, ಒಳ್ಳೆ ಹುಡುಗ, ಅಷ್ಟೇ ಬುದ್ಧಿವಂತ… ಅವಳು ಹೇಳುತ್ತಿದ್ದ ಒಂದೊಂದು ಪದವೂ ನನ್ನ ಮನಸಿನ ಅಗೋಚರ ಅಸಂಖ್ಯಾತ ಪದರುಗಳ ನಡುವೆಯೆಲ್ಲೋ ನನಗೆ ಅರಿವಿಲ್ಲದಂತೆಯೇ ದಾಖಲಾಗತೊಡಗಿತ್ತು. ಬದುಕಿನ ರಹದಾರಿಯಲ್ಲಿ ನೀನು ಪ್ರೇಮದ ಮೈಲುಗಲ್ಲುಗಳನ್ನು ನೆಡುತ್ತಿದ್ದೆ, ನಿನಗೆ ಅರಿವಿಲ್ಲದಂತೆಯೇ!
ನೀನು ಮೌನವಾಗಿ ಜುಳು ಜುಳು ಹರಿಯುವ ನೀರ ತೊರೆ. ನಾನು ಧುಮ್ಮಿಕ್ಕಿ ಭೋರ್ಗೆರೆಯುವ ಜಲಪಾತ. “ಹಾಯ್’ ಎಂಬ ನುಡಿಯೊಂದಿಗೆ ಮಾತು ಆರಂಭವಾಗಿ, ಪರಿಚಯವಾಗಿ, ಆತ್ಮೀಯತೆಯೆಡೆಗೆ ಸ್ನೇಹ ಹೊರಳಿತ್ತು. ಏನೋ ಉಲ್ಲಾಸ! ಏನೋ ಉತ್ಸಾಹ! ಹೊಸ ಚೈತನ್ಯವೊಂದು ನನ್ನೊಳಗೆ ಆವಿರ್ಭವಿಸಿದಂಥ ಅನುಭವ. ನನ್ನಲ್ಲಾದ ಬದಲಾವಣೆ ನನ್ನನ್ನೇ ಮರೆಸಿತ್ತು. ನಮ್ಮಿಬ್ಬರ ಪರಿಚಯ, ಗೆಳೆತನ ಅದಕ್ಕಿಂತ ಸದ್ದಿಲ್ಲದೇ ಶುರುವಾದ ಕಾಳಜಿ, ಪ್ರೀತಿಯ ಒಡನಾಟ… ಇವೆಲ್ಲಾ ನಮ್ಮಿಬ್ಬರಲ್ಲಿ ಒಲವಿನ ಮೊಳಕೆ ಚಿಗುರಿ ಹೆಮ್ಮರವಾಗಿರಲಿಕ್ಕೆ ಸಾಕು. ಪರಸ್ಪರ ನಾವು ಪ್ರೀತಿ ಬಗ್ಗೆ ಹೇಳಿಕೊಂಡಾಗ ಜಗತ್ತನ್ನೇ ಗೆದ್ದ ಸಂಭ್ರಮವಿತ್ತು.
ಆನಂತರದಲ್ಲಿ ನಾವಿಬ್ಬರೂ ಪ್ರೀತಿಯ ಸಂಜೆಗಳನ್ನು ಎಣಿಸುತ್ತಾ ಕಾಲ ಕಳೆದೆವು. ನಾಲ್ಕು ವರ್ಷದ ಪದವಿ ಮುಗಿದಿದ್ದು ಗೊತ್ತೇ ಆಗಲಿಲ್ಲ. ಪದವಿ ಮುಗಿದ ದಿನ ಸದ್ದಿಲ್ಲದೇ ಕಣ್ಣೀರನ್ನು ತುಳುಕಿಸಿದೆ. ಅದೇ ಕೊನೆಯ ಭೇಟಿ ಎಂಬುದು ನನ್ನ ಒಳಮನಸ್ಸಿಗೆ ಗೊತ್ತಿತ್ತೋ ಏನೋ? ಮನದಲ್ಲಿ ಏನೋ ಕಳೆದುಕೊಳ್ಳುವ ಭಯ ಶುರುವಾಗಿತ್ತು. ತಾಯಿಯನ್ನು ಹುಡುಕಿಕೊಡು ಹಂಬಲಿಸಿ ಬರುವ ಕರುವಿನಂತೆ ಓಡಿಬಂದೆ. ನಿನ್ನ ಅಪ್ಪುಗೆಗಾಗಿ ದಾರಿ ಕಾದು ಕುಳಿತೆ. ತುಟಿಯ ಮೇಲೆ ಒತ್ತಾಯದ ಕಿರುನಗೆಯೊಂದನ್ನು ವ್ಯರ್ಥ ಪ್ರಯತ್ನದೊಂದಿಗೆ ಮೂಡಿಸಿಕೊಂಡು ಬಂದವನನ್ನು ಮೊದಲಬಾರಿಗೆ ನೋಡಿದೆ. ಬಲಗಣ್ಣು ಪಟಪಟನೇ ಹೊಡೆದುಕೊಂಡಿದ್ದು ಕಾಕತಾಳಿಯವಾ? ಗೊತ್ತಿಲ್ಲ. ಆದರೆ ಪಕ್ಕದಲ್ಲಿ ಕುಳಿತ ನಿನ್ನ ಎದೆ ಹೊಡೆದುಕೊಳ್ಳುವುದು ಮಾತ್ರ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ನೀನೇ ನನ್ನ ಎದೆ ಬಡಿತದ ಸದ್ದು ಎಂದಿದ್ದನ್ನು ಮರೆತು ಬಿಟ್ಟೆಯಾ? ನಿನ್ನ ಧ್ವನಿ ಸಣ್ಣಗೆ ಕಂಪಿಸುತ್ತಿತ್ತು. ನಮ್ಮ ಪ್ರೀತಿಯ ವಿಷಯ ಹೇಳಲಿಕ್ಕಾಗದೇ ಮನೆಯವರ ಒತ್ತಾಯಕ್ಕೆ ಮಣಿದು ಅವರು ನೋಡಿದ ಹುಡುಗಿಯನ್ನು ಒಪ್ಪಿಕೊಂಡಿದ್ದೆ. ಎಷ್ಟಾದರೂ ಮಹಾನ್ ಮೌನಿಯಲ್ಲವೇ ನೀನು?
ನಿನ್ನಿಂದಲೇ ಆ ವಿಷಯ ತಿಳಿದಾಗ ನಾನು ಮೌನಿಯಾದೆ. ನೋವು ಗಂಟಲಲ್ಲಿ ಸಿಕ್ಕು ಒಂದು ಸಣ್ಣ ಚೀತ್ಕಾರ; ಅಷ್ಟೇ. ಸುಮ್ಮನಾದೆ. ಕೊನೆಗೆ ನೀನೇ ಮಾತು ಮುಂದುವರಿಸಿದೆ. ಇದೆಲ್ಲಾ ನನ್ನ ತಾಯಿಗಾಗಿ ಅಂದೆ. ತಾಯಿಯನ್ನು ಅಗಾಧವಾಗಿ ಪ್ರೀತಿಸುವ ನಾನು ನಿನ್ನ ನಿರ್ಧಾರದ ಹಿಂದಿನ ಅಸಹಾಯಕತೆಯನ್ನು ಊಹಿಸಿದೆ. ಆದರೆ ಮಾಧವ, ನೀನು ಹಾಗೆ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋಗಬಾರದಿತ್ತಲ್ಲವೇ? ಬಿಟ್ಟು ಹೋದವರಿಗಿಂತ ಉಳಿದವರಿಗೆ ನೋವು ಅತಿಯಾಗಿ ಕಾಡುತ್ತೆ. ಅಂಗಾಲಿನಲ್ಲಿ ಚುಚ್ಚಿಕೊಂಡ ಮುಳ್ಳು, ಒಳಗೆ ಮುರಿದುಕೊಂಡಂತೆ ಸದಾ ಯಾತನೆಯನ್ನು ನೀಡುತ್ತೆ. ಕೊನೆಗೆ ನೀನು ಹೋಗುವಾಗ ಒಂದು ಮಾತು ಹೇಳಿಹೋದೆಯಲ್ಲಾ, ಏನದು? ನಿನಗೆ ಬಂಗಾರದಂಥ ಹುಡುಗ ಸಿಗಲಿ ಅಂತ ಅಲ್ವಾ? ಆದರೆ ನಿನಗೆ ಗೊತ್ತಿಲ್ಲ… ಬಂಗಾರವನ್ನೇ ಬಯಸದ ನಾನು ಬಂಗಾರದಂಥ ಹುಡುಗನಿಗಾಗಿ ಕಾಯುತ್ತೀನಾ?
ಪ್ರಿಯ ಮಾಧವ, ನೀನೀಗ ನನ್ನವನಲ್ಲ. ಆದರೆ ನಿನ್ನ ನೆನಪುಗಳು ನನ್ನವೇ ಅಲ್ಲವೇ? ಆ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವುದರಲ್ಲೇ ಖುಷಿಯಿದೆ.
ಇಂತಿ,ನಿನ್ನವಳಲ್ಲದ ನಿನ್ನವಳು
– ಮೀರಾ