ಕಾಂತಿ ಸೂಸುವ ನಿನ್ನ ಕಣ್ಣುಗಳ ನೋಟದ ಧಾಟಿ ಈಗಲೂ ಹಾಗೇ ಇದೆ. ಎಲ್ಲ ನೋವುಗಳನ್ನು ಮರೆಸುವ ಚಂದದ ನಗು ಮೊಗದಲ್ಲಿದೆ. ಆದರೆ, ಈಗ ನಮ್ಮಿಬ್ಬರ ಮನಸ್ಸುಗಳ ನಡುವಿನ ಸೇತುವೆ ಮಾತ್ರ ಬದಲಾಗಿದೆ. ಪರಸ್ಪರರ ಭಾವನೆಗಳ ಹರಿವಿಗೆ ನೆರವಾಗಿದ್ದ ಸ್ನೇಹ ಸೇತುವೆ ಈಗ ಪ್ರೀತಿಯ ರಂಗು ಪಡೆದು, ಮತ್ತಷ್ಟು ಗಟ್ಟಿಯಾಗಿದೆ.
ಪದವಿಯಲ್ಲಿ ನಾವಿಬ್ಬರೂ ಅಕ್ಕಪಕ್ಕದ ಬೆಂಚಿನಲ್ಲಿ ಕುಳಿತಿದ್ದರೂ, ಇಬ್ಬರ ನಡುವೆ ಮಾತು ಬೆಳೆಯಲು ತಿಂಗಳುಗಳೇ ಬೇಕಾಯ್ತು. ಮೊದಲಿಗೆ, ಕೇವಲ ಓರೆ ನೋಟ, ಜೊತೆಗೆ ಮುಗುಳುನಗು ಅಷ್ಟೇ. ಮಾತನಾಡಿಸುವ ಹಂಬಲವಿದ್ದರೂ ನಿನ್ನನ್ನು ನೋಡಿದಾಗ ಎಲ್ಲ ಮಾತುಗಳೂ ಎದೆಯಲ್ಲೇ ಉಳಿದುಹೋಗುತ್ತಿದ್ದವು. ಕೊನೆಗೊಂದು ದಿನ ಲೆಕ್ಚರರ್ ಕೊಟ್ಟ ಮನೆಗೆಲಸದಿಂದ ಅನಿವಾರ್ಯವಾಗಿ ನಾವಿಬ್ಬರೂ ಮಾತನಾಡಬೇಕಾಯ್ತು. ಆಮೇಲೆ, ನಮ್ಮ ಮಾತಿಗೆ ಫುಲ್‌ಸ್ಟಾಪ್ ಹಾಕೋಕೆ ಅದೇ ಲೆಕ್ಚರರ್, ನನ್ನನ್ನು ಹಿಂದಿನ ಬೆಂಚ್‌ಗೆ ಕಳಿಸಿದರು!
ನಿನ್ನ ಸ್ನೇಹದ ಬಂಧನದಲ್ಲಿ ಆ ಮೂರು ವರ್ಷಗಳು ಹೇಗೆ ಕಳೆದವೋ ಗೊತ್ತೇ ಆಗಲಿಲ್ಲ. ಪದವಿ ಮುಗಿದ ನಂತರ ಇಬ್ಬರ ದಾರಿ, ಗುರಿ, ಎರಡೂ ಬದಲಾದವು. ನಾನು ಪತ್ರಿಕೋದ್ಯಮವನ್ನು ಆಯ್ದುಕೊಂಡರೆ, ನೀನು ಸಮಾಜಶಾಸ್ತ್ರ ಅಂತ ಹೊರಟುಬಿಟ್ಟೆ. ದೂರವಿದ್ದರೂ ಹಲವು ತಿಂಗಳು ಹತ್ತಿರವಿದ್ದಂತೆಯೇ ಇದ್ದೆವು. ಅಷ್ಟರಲ್ಲಿ ಏನೇನೋ ಘಟನೆಗಳು ನಡೆದು, ಒಂದು ವರ್ಷ ಇಬ್ಬರೂ ಮಾತಾಡಲಿಲ್ಲ.
ನಿನ್ನ ನೆನಪುಗಳು ಕಾಡುತ್ತಿದ್ದರೂ, ನಾನು ಮಾತಾಡುವ ಪ್ರಯತ್ನ ಮಾಡಲಿಲ್ಲ. ಹುಡುಗ ಎಂಬ ಅಹಂ ಕಾಡಿರಬೇಕು. ನೀನೂ ನನ್ನನ್ನು ಮರೆತಿರುತ್ತೀಯಾ ಅಂದುಕೊಂಡಿದ್ದಾಗ, ದಿಢೀರನೆ ಬಂದು ನಿಂತಿದ್ದೆ. ನಿನ್ನ ಒಂದು ಮುಗುಳು ನಗೆ, ಮುರಿದು ಬಿದ್ದ ನಮ್ಮ ಸ್ನೇಹದ ಸೇತುವೆಗೆ ಬೆಸುಗೆ ಹಾಕಿತು. ಅಂದಿನಿಂದ ಮತ್ತೆ ರಾತ್ರಿಯಿಡೀ ಫೋನ್‌ನಲ್ಲಿ ಪುರಾಣ, ಸಣ್ಣ ಸಣ್ಣ ಮುನಿಸು, ಹರಟೆ… ಎಗ್ಗಿಲ್ಲದೆ ಸಾಗಿತ್ತು. ಅದೊಂದು ದಿನ ಅದ್ಯಾರಧ್ದೋ ಲವ್ ಸ್ಟೋರಿ ಬಗ್ಗೆ ಮಾತಾಡುವಾಗ ನಾನು, “ಐ ಲವ್ ಯೂ’ ಅಂದುಬಿಟ್ಟೆ! ಆಗ, ನೀನು ಕೂಡ ನಕ್ಕು ಸುಮ್ಮನಾದೆ. ಆ ನಗುವಿನಲ್ಲಿ ಸಮ್ಮತಿಯ ಸೂಚನೆಯಿತ್ತು. ಅಂದಿನಿಂದ ಕಾಳಜಿ, ಕೋಪ, ಪ್ರೀತಿ, ಗಲಾಟೆ ಹೆಚ್ಚಾದವು. ಕನಸಿನ ಮೂಟೆಗಳು ಹೆಗಲೇರಿದವು. ಈಗ ಕಾಣುವ ಪ್ರತಿ ಕನಸಿನಲ್ಲಿಯೂ ನಾವಿಬ್ಬರೇ ಇದ್ದೇವೆ. ಮುಂಬರುವ ನಾಳೆಗಳಲ್ಲಿ ಎಲ್ಲ ಕನಸನ್ನೂ ನನಸು ಮಾಡುತ್ತೇನೆ. ಕಣ್ಣಲ್ಲಿ ಕಣ್ಣಿಟ್ಟು ನಿನ್ನನ್ನು ಕಾಪಾಡಿಕೊಳ್ಳುತ್ತೇನೆ. ಅಷ್ಟು ಭರವಸೆ ಕೊಡಬಲ್ಲೆ.
ಮಹಾಂತೇಶ ದೊಡವಾಡ