Advertisement
ಮೊಸರು ಉಷ್ಣವೋ ಶೀತವೋ?ಆಯುರ್ವೇದದ ಪ್ರಕಾರ ಮೊಸರು ಉಷ್ಣ! ಅದರೊಂದಿಗೆ ಅಮ್ಲ ರಸ(ಹುಳಿ ರಸ)ವೂ ಸೇರಿ ದೇಹದಲ್ಲಿ ಪಿತ್ತ ದೋಷದ ವೃದ್ಧಿಯಾಗುತ್ತದೆ. ಈ ಪಿತ್ತವು ನಮ್ಮಲ್ಲಿ ದಾಹ, ಬಾಯಾರಿಕೆ, ಹುಳಿತೇಗು, ಎದೆಯುರಿ, ಅಜೀರ್ಣ, ಮುಂತಾದ ತೊಂದರೆಗಳನ್ನು ಉಂಟುಮಾಡಬಹುದು.
ಆಯುರ್ವೇದದ ಪ್ರಕಾರ ಹಾಲಿಗೆ ಹೆಪ್ಪು ಹಾಕಿ ಒಂದು ರಾತ್ರಿ ಕಾಲ ಇಟ್ಟರೆ ದಧಿ, ಅಥವಾ ನಾವು ಮೊಸರೆಂದು ಕರೆಯುವ ದ್ರವ್ಯ ಸಿದ್ಧವಾಗುತ್ತದೆ. ಈ ಮೊಸರನ್ನು ಮಂಥನ ಮಾಡಿ, ಅದರಿಂದ ಬಂದಂತಹ ನವನೀತವನ್ನು ಬೇರ್ಪಡಿಸಿದಾಗ ಉಳಿಯುವ ದ್ರವ್ಯವೇ ತಕ್ರ. ಅದನ್ನು ನಾವು ಆಡುಭಾಷೆಯಲ್ಲಿ ಮಜ್ಜಿಗೆ ಎಂದೇ ಕರೆದರೂ, ಇದಕ್ಕೂ, ಮೊಸರಿಗೆ ನೀರು ಸೇರಿಸಿದಾಗ ಸಿಗುವ ಮಜ್ಜಿಗೆಗೂ ವ್ಯತ್ಯಾಸವಂತೂ ಇದೆ. ಅದೇನೇ ಇರಲಿ, ನೆನಪಿಡಬೇಕಾದ ವಿಷಯವೆಂದರೆ ಈ ಎರಡೂ ಮಜ್ಜಿಗೆಗಳೂ ಉಷ್ಣ ಕಾಲದಲ್ಲಿ (ಬೇಸಿಗೆಯಲ್ಲಿ) ನಿಷಿದ್ಧ. ಅಂದರೆ, ಬಿಸಿಲಿನಲ್ಲಿ ಸುಸ್ತಾಗಿ ಬಂದವರಿಗೆ ಮಜ್ಜಿಗೆ ಕೊಡುವ ನಮ್ಮ ಪದ್ಧತಿ ನಿಜವಾಗಿ ಅವೈಜ್ಞಾನಿಕ.
Related Articles
Advertisement
ಹಾಗಾದರೆ ಮೊಸರು ಮಜ್ಜಿಗೆ ಸೇವನೆ ತಪ್ಪೇ?ಖಂಡಿತ ಅಲ್ಲ. ಆಯುರ್ವೇದವು ಮೊಸರನ್ನು ಮಂಗಳಕರವೆಂದು ಕರೆದಿದೆ. ಎಂದರೆ, ಸರಿಯಾದ ಕ್ರಮದಲ್ಲಿ, ಸಹಜವಾಗಿ ತಯಾರಿಸಿದ ತಾಜಾ ಮೊಸರು ದೇಹಕ್ಕೆ ಬಲವನ್ನು, ಪುಷ್ಟಿಯನ್ನು ಕೊಡುತ್ತದೆ; ಬಾಯಿರುಚಿಯನ್ನು ಹೆಚ್ಚಿಸುತ್ತದೆ; ಜೀರ್ಣ ಶಕ್ತಿಯನ್ನು ವೃದ್ಧಿ ಮಾಡುತ್ತದೆ; ವಾತ ದೋಷವನ್ನು ಸಮಸ್ಥಿತಿಗೆ ತರುತ್ತದೆ. ಇನ್ನು ಮಜ್ಜಿಗೆಯನ್ನಂತೂ (ಮೇಲೆ ಹೇಳಿದ ತಕ್ರ) ಹಲವು ಕಡೆಗಳಲ್ಲಿ ಅಮೃತವೆಂದು ಕರೆಯಲಾಗಿದೆ. ಕಷಾಯರಸ ಪ್ರಧಾನವಿರುವ, ಉಷ್ಣವೀರ್ಯದ ಆದರೆ ಮಧುರ ವಿಪಾಕದ ಮಜ್ಜಿಗೆಯು ಉತ್ತಮ ಅಗ್ನಿ ದೀಪಕ. (ಇದನ್ನು ನಾವು ಇಂದಿನ ಭಾಷೆಯಲ್ಲಿ gut bacteria ದ ವೃದ್ದಿ ಎಂದು ಅರ್ಥೈಸಬಹುದು). ವಾತ-ಕಫದ ರೋಗಗಳಲ್ಲಿ ಮಜ್ಜಿಗೆಗಿಂತ ಉತ್ತಮ ಔಷಧಿ ಮತ್ತೊಂದಿಲ್ಲ ಎಂದು ಹೇಳಲಾಗಿದೆ. ವಿಜ್ಞಾನವು ಭೋಜನದ ಕೊನೆಯಲ್ಲಿ ಕಷಾಯರಸವನ್ನು ಸೇವಿಸಬೇಕು ಎನ್ನುತ್ತದೆ. ಹಾಗಾಗಿ ಊಟದ ಕೊನೆಗೆ ಮಜ್ಜಿಗೆ ಕುಡಿಯುವ, ಮಜ್ಜಿಗೆ ಕಲಸಿದ ಅನ್ನ ಉಣ್ಣುವ ಅಭ್ಯಾಸ ಬಹಳ ಒಳ್ಳೆಯದು . ಕೆಲವೊಂದು ಟಿಪ್ಸ್
-ಮೊಸರನ್ನು ಕುದಿಸಿ ತಯಾರಿಸಿದ ಆಹಾರ ಸೇವನೆ ಆದಷ್ಟು ಕಡಿಮೆ ಇರಲಿ.
-ಮೊಸರಿಗೆ ನೀರು ಸೇರಿಸಿ ಮಾಡುವ ಮಜ್ಜಿಗೆಯು ಮೊಸರಿನ ಗುಣಗಳನ್ನೇ ಕಡಿಮೆ ಬಲದಲ್ಲಿ ಹೊಂದಿರುತ್ತದೆ. ಗಟ್ಟಿ ಮೊಸರಿನಿಂದ ತೊಂದರೆ ಇರುವವರು ಈ ಮಜ್ಜಿಗೆಯನ್ನು ಉಪಯೋಗಿಸಿ ನೋಡಬಹುದು.
-ಮೊಸರಿಗೆ ಸಕ್ಕರೆ ಸೇರಿಸಿ ಮಾಡುವ ಲಸ್ಸಿ ಅದರ ಉಷ್ಣ ಗುಣವನ್ನು ಕಡಿಮೆ ಮಾಡುತ್ತದೆ. ದಾಹ, ಉರಿಯಂತಹ ತೊಂದರೆಗಳಲ್ಲಿ ಬಳಸಬಹುದು.
-ಕೊತ್ತಂಬರಿ, ಜೀರಿಗೆ, ಉಪ್ಪು ಹಾಕಿ ಮಾಡಿದ ಮಸಾಲ ಮಜ್ಜಿಗೆ ಜೀರ್ಣಶಕ್ತಿಯ ವೃದ್ಧಿಗೆ ಅತ್ಯುತ್ತಮ.
-ಮೊಸರು ಮಜ್ಜಿಗೆ – ಫ್ರಿಡ್ಜ್ ನಿಂದ ತೆಗೆದ ಕೂಡಲೇ ಸೇವಿಸದೇ, ರೂಮ್ ಟೆಂಪರೇಚರ್ ಬರುವವರೆಗೂ ಕಾದು ಸೇವಿಸುವುದು ಒಳ್ಳೆಯದು. ಸಿರಿ, ಮರವಂತೆ