ಮೈಸೂರು: ಮೂರು ತಿಂಗಳ ಹಿಂದಷ್ಟೇ ಬೃಹತ್ ಯೋಗಾ ಚೈನ್‌ಗೆ ಸಾಕ್ಷಿಯಾಗಿದ್ದ ಮೈಸೂರು ಅರಮನೆ ಅಂಗಳದಲ್ಲಿ ಭಾನುವಾರ ಸಾವಿರಾರು ಯೋಗಾಸಕ್ತರು ಏಕಕಾಲದಲ್ಲಿ ಸಾಮೂಹಿಕ ಯೋಗಪ್ರದರ್ಶನ ಮಾಡಿ ಸದೃಢ ಆರೋಗ್ಯದ ವಿಶ್ವಾಸ ಮೂಡಿಸಿದರು.
ನಾಡಹಬ್ಬ ದಸರಾ ಅಂಗವಾಗಿ ಜಿಲ್ಲಾಡಳಿತ ಹಾಗೂ ಯೋಗದಸರಾ ಉಪಸಮಿತಿ ಆಯೋಜಿಸಿದ್ದ ಯೋಗೋತ್ಸವಕ್ಕೆ ಯೋಗಪಟುಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಕೊರೆಯುವ ಚಳಿಯನ್ನು ಲೆಕ್ಕಿಸದೆ ವಿವಿಧ ವಯಸ್ಸಿನ ಸಾವಿರಾರು ಯೋಗಪಟುಗಳು ಮುಂಜಾನೆ 5.45ಕ್ಕೆ ಅರಮನೆ ಆವರಣದಲ್ಲಿ ಸಾಮೂಹಿಕ ಯೋಗಪ್ರದರ್ಶನ ನೀಡಿದರು.
ಪ್ರದರ್ಶನದಲ್ಲಿ ಸೂರ್ಯನಮಸ್ಕಾರದ ಜತೆಗೆ ವೀರಭದ್ರಾಸನ, ವಜಾಸನ, ಪಶ್ಚಿಮೋತ್ತಾನಾಸನ, ಉಷ್ಟ್ರಾಸನ, ವಕ್ರಾಸನ, ಮಕರಾಸನ, ಏಕಪಾದ ಶಲಬಾಸನ, ಧನುರಾಸನ ಅರ್ಧ ಹಲಾಸನ, ಸೇತು ಬಂದಾಸನ ಇತರ ಆಸನದೊಂದಿಗೆ ಪ್ರದರ್ಶನ ಅಂತ್ಯವಾಯಿತು.
ದಸರಾ ಯೋಗಾಸನ ಸ್ಪರ್ಧೆ: ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ರಾಜ್ಯ ಮಟ್ಟದ ದಸರಾ ಯೋಗಾಸನ ಸ್ಪರ್ಧೆ ನಡೆಯಿತು.ವಿವಿಧ ರಾಜ್ಯದ ಯೋಗ ಪಟುಗಳು ಸ್ಪರ್ಧೆಯಲ್ಲಿ ಬಾಗವಹಿಸಿ ವಿವಿಧ ವಯೋಮಾನಕ್ಕೆ ಅನುಗುಣವಾಗಿ 300ಕ್ಕೂ ಹೆಚ್ಚು ಪಟುಗಳನ್ನು 8 ವಿಭಾಗ ಮಾಡಿ ಸ್ಪರ್ಧೆ ನಡೆಸಲಾಯಿತು. ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದವರಿಗೆ ನಗದು ಬಹುಮಾನ ವಿತರಿಸಲಾಯಿತು.
ಗಮನ ಸೆಳೆದ ವಿದೇಶಿಗರು: 30ಕ್ಕೂ ಹೆಚ್ಚು ಮಂದಿ ವಿದೇಶಿಗರ ಯೋಗ ಪ್ರದರ್ಶನ ನೆರೆದವರ ಗಮನ ಸೆಳೆಯಿತು. ಇವರೊಂದಿಗೆ ನಗರದ ಪಂತಜಲಿ ಯೋಗ ಶಿಕ್ಷಣ ಸಮಿತಿ, ಮೈಸೂರು ಜಿಲ್ಲಾ ಯೋಗ ನ್ಪೋರ್ಟ್ಸ್ ಫೌಂಡೇಷನ್, ಜಿಎಸ್‌ಎಸ್ ಯೋಗಿಕ್ ರಿಸರ್ಚ್ ಪೌಂಡೇಷನ್, ಮೈಸೂರು ಯೋಗ ಒಕ್ಕೂಟ,
-ಭಾರತ ಸ್ವಾಭಿಮಾನ ಟ್ರಸ್ಟ್ ಸೇರಿದಂತೆ ಅನೇಕ ಯೋಗ ಶಿಬಿರಗಳ ಪಟ್ಟುಗಳು ಭಾಗವಹಿಸಿದ್ದರು. ಇದಕ್ಕೂ ಮುನ್ನ ಯೋಗ ಕಾರ್ಯಕ್ರಮವನ್ನು ಎಂ.ಕೆ.ಸೋಮಶೇಖರ್‌ಉದ್ಘಾಟಿಸಿದರು.ಯೋಗ ಉಪಸಮಿತಿ ವಿಶೇಷಾಧಿಕಾರಿ ಜೆ.ಜಗದೀಶ್, ಕಾರ್ಯಾಧ್ಯಕ್ಷರಾದ ಕೆ.ರಮ್ಯಾ ಇತರರು ಇದ್ದರು.