ಅಬುಧಾಬಿ : ಯು.ಎ.ಇ. ಯಲ್ಲಿರುವ ಇಂಡಿಯಾ ಸೋಶ್ಯಲ್ ಏನ್ಡ್ ಕಲ್ಚರಲ್ ಸೆಂಟರ್ ನ (ಐ.ಎಸ್.ಸಿ) ಅಧ್ಯಕ್ಷರಾಗಿ ಕಾರ್ಕಳ ಮೂಲದ ಯೋಗೀಶ ಪ್ರಭು ಅವರು ಆಯ್ಕೆಯಾಗಿದ್ದಾರೆ.
ಪ್ರಭು ಅವರು, 2020-21 ನೇ ಸಾಲಿನಲ್ಲಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವರು.
ಅವರು ಕಾರ್ಕಳದ ಕೃಷ್ಣ ಪ್ರಭು ಮತ್ತು ಭಾರತಿ ಪ್ರಭು ಅವರ ಹಿರಿಯ ಮಗ. ಕೆ.ವಿ ಪ್ರಭು ಆಯಿಲ್ ಮಿಲ್ಸ್‌ನ ಕುಟುಂಬದವರು. ಸುಮಾರು 36 ವರ್ಷಗಳಿಂದ ಅಬುದಾಭಿಯಲ್ಲಿ ನೆಲೆಸಿರುವ ಅವರು ವೃತ್ತಿಯಲ್ಲಿ ಬ್ಯಾಂಕರ್.
ಫಸ್ಟ್ ಅಬುಧಾಬಿ ಬ್ಯಾಂಕಿನ (FAB) ಗ್ರೂಪ್ ಫೈನಾನ್ಸ್ ಮತ್ತು ಖಜಾನೆಯ ಉಪ-ಅಧ್ಯಕ್ಷರಾಗಿ ಉನ್ನತ ಹುದ್ದೆಯನ್ನು ನಿರ್ವಹಿಸಿದ್ದಾರೆ. ಇವರ ಪತ್ನಿ ಚೇತನಾ ಪ್ರಭು ಅವರೂ ಐ.ಎಸ್.ಸಿ ಸಂಸ್ಥೆಯ ಸದಸ್ಯೆ.
ಈಗಾಗಲೇ ಕಾರ್ಯಾರಂಭ ಮಾಡಿದ್ದು, ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲಾಗಿದೆ. “ವಂದೇ ಭಾರತ್ ಮಿಶನ್” ಅಭಿಯಾನದಡಿ ಭಾರತಕ್ಕೆ ವಾಪಸಾಗಲು ಬಯಸಿದವರಿಗೆ ಸಹಾಯ ಶಿಬಿರ, ಮಾಹಿತಿ ವಿನಿಮಯ, ಹಾಗೆಯೇ ಸಂಸ್ಥೆಯ ಸದಸ್ಯರಿಗೆ ಕೋವಿಡ್ ಕುರಿತ ಮಾಹಿತಿ ಶಿಬಿರ, ಕಾರ್ಯಾಗಾರವನ್ನು ಸಂಘಟಿಸಲಾಗಿದೆ.
ಸದಸ್ಯರ ಮನೋಸ್ಥೈರ್ಯ ಹೆಚ್ಚಿಸಲು, ಯೋಗ, ಏರೋಬಿಕ್ಸ್, ಮನೋವೈದ್ಯರ ವಿಶೇಷ ಉಪನ್ಯಾಸ, ಮನೋರಂಜನಾ ಕಾರ್ಯಕ್ರಮಗಳನ್ನು ವರ್ಚುವಲ್ ಮಾಧ್ಯಮದಲ್ಲಿ ಆಯೋಜಿಸಲಾಗಿದೆ.
ಐ.ಎಸ್.ಸಿ ಭಾರತೀಯರಿಗೆ ಒಂದು ಚಿರಪರಿಚಿತ ಸಂಸ್ಥೆ. 1967ರಲ್ಲಿ ಸ್ಥಾಪಿತವಾದ ಈ ಸಂಸ್ಥೆ ಎರಡ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡಿದೆ. ಸಾಮಾಜಿಕ, ಸಾಂಸ್ಕ್ರತಿಕ ಕಾರ್ಯಕ್ರಮದಿಂದ ಹಿಡಿದು, ಸದಸ್ಯರ ಹಿತಾಸಕ್ತಿಯನ್ನು ಕಾಪಾಡಲು ಶ್ರಮಿಸುತ್ತಿರುವ ಸಂಸ್ಥೆ. ಐ.ಎಸ್.ಸಿ.ಗೆ 2017ರಲ್ಲಿ ಭಾರತ ಸರಕಾರವು “ಪ್ರವಾಸಿ ಭಾರತೀಯ ಸಮ್ಮಾನ” ಪ್ರಶಸ್ತಿ ನೀಡಿ ಪುರಸ್ಕರಿಸಿದೆ.