Advertisement

ಯಡಿಯೂರಲ್ಲಿ ನಡೆಯಿತು ಯೋಗಿ ನಿಶ್ಚಿತಾರ್ಥ

11:47 AM Jun 12, 2017 | |

“ಲೂಸ್‌ಮಾದ’ ಯೋಗೇಶ್‌ಗೆ ಹುಡುಗಿ ಫಿಕ್ಸ್‌ ಆಗಿರೋದು, ಅಣ್ಣನ ಮದುವೆ ನಂತರ ತನ್ನ ಮದುವೆ ಎಂಬುದಾಗಿ ಯೋಗಿ ಹೇಳಿರೋದೆಲ್ಲವೂ ನಿಮಗೆ ಗೊತ್ತೇ ಇದೆ. ಆದರೆ, ಯಾವಾಗ ಯೋಗಿ ಮದುವೆ ಎಂಬ ಮಾಹಿತಿ ಇರಲಿಲ್ಲ. ಅದಕ್ಕೆ ಮುನ್ನುಡಿ ಎಂಬಂತೆ ಯೋಗಿ ಭಾನುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Advertisement

ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಯೋಗಿ ತನ್ನ ಬಾಲ್ಯದ ಗೆಳತಿ ಸಾಹಿತ್ಯ ಎನ್ನುವವರನ್ನು ಇಷ್ಟಪಟ್ಟು, ಅವರನ್ನೇ ಮದುವೆಯಾಗುತ್ತಿದ್ದಾರೆ. ಅವರಿಬ್ಬರ ನಿಶ್ಚಿತಾರ್ಥ ಹಿರಿಯರ ಸಮ್ಮುಖದಲ್ಲಿ ಬೆಂಗಳೂರಿನ ಸಮೀಪದ ಯಡಿಯೂರಿನ ಸಾಹಿತ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಜರುಗಿದೆ.

ಈ ಸಂದರ್ಭದಲ್ಲಿ ಯೋಗಿ ಹಾಗೂ ಸಾಹಿತ್ಯ ಮನೆಯವರ ಕುಟುಂಬಸ್ಥರು, ಆಪ್ತರು ಹಾಗೂ ಗೆಳೆಯರು ಮಾತ್ರ ಹಾಜರಿದ್ದರು. ಭಾನುವಾರ ಮಧ್ಯಾಹ್ನ ಸುಮಾರು 12 ಗಂಟೆಯಿಂದಲೇ ನಿಶ್ಚಿತಾರ್ಥದ ಪೂಜಾ ಕಾರ್ಯಗಳು ನೆರವೇರಿದವು. ಈ ಸಂದರ್ಭದಲ್ಲಿ ಯೋಗಿ ಅವರು ಸಾಹಿತ್ಯ ಅವರಿಗೆ ರಿಂಗ್‌ ತೊಡಿಸುವ ಮೂಲಕ ನಿಶ್ಚಿತಾರ್ಥ ಕಾರ್ಯ ನೆರವೇರಿಸಿದರು.

ಯೋಗಿ ಅವರ ತಾಯಿ ಅಂಬುಜ ಅವರು ಸಾಹಿತ್ಯ ಅವರಿಗಾಗಿಯೇ ವಿಶೇಷ ರಿಂಗ್‌ವೊಂದನ್ನು ರೆಡಿ ಮಾಡಿಸಿದ್ದರು. ಕಳೆದ ಎರಡು, ಮೂರು ವರ್ಷಗಳಿಂದಲೂ ಸಾಹಿತ್ಯ ಹಾಗೂ ಯೋಗಿ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರಿಗೆ ತಿಳಿಸಿ, ಅವರ ಸಮ್ಮತಿ ಪಡೆದು ಭಾನುವಾರ ನಿಶ್ಚಿತಾರ್ಥ ಕಾರ್ಯ ಪೂರೈಸಿಕೊಂಡಿದ್ದಾರೆ.

ಸಾಹಿತ್ಯ ಮೂಲತಃ ಸಾಫ್ಟ್ವೇರ್‌ ಎಂಜಿನಿಯರ್‌ ಆಗಿದ್ದಾರೆ. ಇದುವರಗೆ ಯೋಗಿಯ ಜೀವದ ಗೆಳತಿಯಾಗಿದ್ದ ಸಾಹಿತ್ಯ ಇನ್ನು ಮುಂದೆ ಸಂಗಾತಿಯಾಗಲಿದ್ದಾರೆ. ಮೈಸೂರು ಮೂಲದ ಅರಸ್‌ ಕುಟುಂಬದ ಹುಡುಗಿ ಸಾಹಿತ್ಯ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಯಡಿಯೂರಿನ ಎಸ್‌ಎಸ್‌ವಿಕೆ ಶಾಲೆಯಲ್ಲಿ 1 ರಿಂದ 10 ನೇ ತರಗತಿವರೆಗೆ ಒಟ್ಟಿಗೆ ವ್ಯಾಸಂಗ ಮಾಡಿದ್ದ ಯೋಗಿ ಹಾಗೂ ಸಾಹಿತ್ಯ ಮಧ್ಯೆ ಸ್ನೇಹ ಬೆಳೆದು, ಪ್ರೀತಿ ಹುಟ್ಟಿಕೊಂಡು ಈಗ ಮದುವೆಗೆ ಸಜ್ಜಾಗಿದ್ದಾರೆ.

Advertisement

ಅಂದಹಾಗೆ, ನವೆಂಬರ್‌ 2 ರಂದು ಕನಕಪುರ ರಸ್ತೆಯ ಶ್ರೀ ಕನ್ವೆನನ್‌ ಸೆಂಟರ್‌ನಲ್ಲಿ ಇವರ ವಿವಾಹ ಜರುಗಲಿದೆ. ಸದ್ಯ ಯೋಗಿ ನಟಿಸಿರುವ “ದುನಿಯಾ-2′ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಈ ನಡುವೆಯೇ ಯೋಗಿ ಶಿವರಾಜಕುಮಾರ್‌ ಅವರ “ಲೀಡರ್‌’ನಲ್ಲೂ ಪ್ರಮುಖ ಪಾತ್ರ ಮಾಡಿದ್ದಾರೆ. ಇದಲ್ಲದೆ “ಕೋಲಾರ’ ಮುಂತಾದ ಚಿತ್ರಗಳು ಬಿಡುಗಡೆಗೆ ರೆಡಿಯಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next