ಲೂಸ್ ಮಾದ ಯೋಗಿ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಂತ, ಇನ್ನೇನೋ ಕಲ್ಪನೆ ಮಾಡಿಕೊಳ್ಳುವುದು ಬೇಡ. ಯೋಗಿ ಅಂದಾಕ್ಷಣ ಎಲ್ಲರಿಗೂ ನೆನಪಾಗೋದು ಪಕ್ಕಾ ಲೋಕಲ್ ಪಾತ್ರಗಳು. ಅದಕ್ಕೆ ಕಾರಣ, ಅವರು ಇದುವರೆಗೆ ಮಾಡಿಕೊಂಡು ಬಂದಂತಹ ಪಾತ್ರಗಳು ಸಹ ಹಾಗೆಯೇ ಇದ್ದವು. ಅವರ “ದುನಿಯಾ’ ಚಿತ್ರದಿಂದ ಹಿಡಿದು “ಜಾನಿ ಜಾನಿ ಜನಾರ್ದನ್’ ಚಿತ್ರಗಳವರೆಗೂ ಅವರನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅವರೊಳಗಿನ ಅಗಾಧ ಪ್ರತಿಭೆ ಅನಾವರಣವಾಗಿಲ್ಲ. ಕಾರಣ, ಅಂತಹ ಅವಕಾಶ ಕೂಡ ಅವರಿಗೆ ಸಿಕ್ಕಿಲ್ಲ.
ಈಗ ಅವರು “ಲಂಬೋದರ’ನ ಜಪ ಮಾಡುತ್ತಿದ್ದಾರೆ. ಹೌದು, ಯೋಗಿ ಸದ್ಯಕ್ಕೆ “ಲಂಬೋದರ’ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ಅವರ ನಂಬಿಕೆಗೆ ಕಾರಣ, “ಲಂಬೋದರ’ ಒಂದು ಹೊಸತನದ ಚಿತ್ರ ಹಾಗು ವಿಭಿನ್ನ ಪಾತ್ರ ಇರುವುದು. ಯೋಗಿ ಒಂದು ಗ್ಯಾಪ್ ಪಡೆದಿದ್ದರು. ಆ ಗ್ಯಾಪ್‌ನಲ್ಲಿ ಹೊಸ ಬಗೆಯ ಕಥೆ, ಪಾತ್ರ ಎದುರು ನೋಡುತ್ತಿದ್ದರು. ಬಂದ ಅದೆಷ್ಟೋ ಕಥೆಗಳನ್ನು ಪಕಕ್ಕೆ ಸರಿಸಿದ್ದರು. ಆದರೆ, “ಲಂಬೋದರ’ ಕಥೆ ಕೇಳಿದ ಕೂಡಲೇ, ಒಪ್ಪಿಕೊಂಡರು. ಈ ಚಿತ್ರದಲ್ಲಿ ಯೋಗಿಗೆ ವಿಭಿನ್ನ ಪಾತ್ರ. ಅದರಲ್ಲೂ ಅವರಿಲ್ಲಿ ಮೂರ್‍ನಾಲ್ಕು ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಪದೇ ಪದೇ ಬಂದ ಪಾತ್ರಗಳನ್ನೇ ಮಾಡುತ್ತಿದ್ದರಿಂದ ಯೋಗಿಗೂ ಹೊಸತನ ಬೇಕಿತ್ತು. ಒಂದು ಬದಲಾವಣೆಯನ್ನೂ ಬಯಸಿದ್ದರು. ಆ ಹೊಸತನ ಮತ್ತು ಬದಲಾವಣೆ “ಲಂಬೋದರ’ ಚಿತ್ರದಲ್ಲಿದೆ. ಹಾಗಾಗಿ ಯೋಗಿ ಅವರಿಗೆ “ಲಂಬೋದರ’ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವುದಂತೂ ಸುಳ್ಳಲ್ಲ. ಅಂದಹಾಗೆ, ಈ ಚಿತ್ರಕ್ಕೊಂದು ಅಡಿಬರಹವಿದೆ. “ಬಸವನಗುಡಿ, ಬೆಂಗಳೂರು ಎಂಬ ಅಡಿಬರಹ ನೋಡಿದವರಿಗೆ, ಇದು ಆ ಭಾಗದಲ್ಲೇ ನಡೆಯುವ ಒಂದು ಕಥೆ ಎಂಬುದು ಸ್ಪಷ್ಟವಾಗುತ್ತದೆ.
ಕೃಷ್ಣರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರದ ಎರಡು ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ವಿಶ್ವೇಶ್ವರ್ ಪಿ ಹಾಗು ರಾಘವೇಂದ್ರ ಭಟ್ ಚಿತ್ರವನ್ನು ನಿರ್ಮಿಸಿದ್ದಾರೆ. ಕಾರ್ತಿಕ್ ಶರ್ಮ ಸಂಗೀತವಿದೆ. ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ಮಾಡಿದರೆ, ವಿಕ್ರಂ ಮೋರ್ ಸಾಹಸವಿದೆ. ಕೆ.ಕೃಷ್ಣರಾಜ್ ಮತ್ತು ಶೈಲೇಶ್ ರಾಜ್ ಸಂಭಾಷಣೆ ಬರೆದಿದ್ದಾರೆ. ಆಕಾಂಕ್ಷ ನಾಯಕಿಯಾದರೆ, ಉಳಿದಂತೆ ಅಚ್ಯುತ, ಅರುಣಾ ಬಾಲರಾಜ್, ಮಂಜುನಾಥ್ ಹೆಗ್ಡೆ, ಧರ್ಮಣ್ಣ ನಟಿಸಿದ್ದಾರೆ.