ನವದೆಹಲಿ:ಕೋವಿಡ್ 19 ತಡೆಗಟ್ಟಲು ಜಾರಿಗೊಳಿಸಿದ್ದ ಲಾಕ್ ಡೌನ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದ ಬೆನ್ನಲ್ಲೇ ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಬುಧವಾರ ಪೆಟ್ರೋಲ್, ಡೀಸೆಲ್ ಮೇಲಿನ ದರ ಹೆಚ್ಚಳ ಮಾಡಿದ್ದಲ್ಲದೇ ಮದ್ಯದ ಮೇಲೆ ಕೋವಿಡ್ ತೆರಿಗೆ ವಿಧಿಸಲು ನಿರ್ಧರಿಸಿದೆ ಎಂದು ವರದಿ ತಿಳಿಸಿದೆ.
ಲಕ್ನೋದಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ವರದಿ ಹೇಳಿದೆ. ಹಣಕಾಸು ಸಚಿವ ಸುರೇಶ್ ಖನ್ನಾ ಸುದ್ದಿಗಾರರ ಜತೆ ಮಾತನಾಡುತ್ತ, ಉತ್ತರಪ್ರದೇಶ ಸರ್ಕಾರ ಮದ್ಯದ ಮೇಲೆ ಕೋವಿಡ್ ತೆರಿಗೆ ಹೇರಲು ನಿರ್ಧರಿಸಿದೆ. ಈ ಪರಿಷ್ಕೃತ ದರದಿಂದ ರಾಜ್ಯದ ಬೊಕ್ಕಸಕ್ಕೆ 2,350 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ ಎಂದು ತಿಳಿಸಿದ್ದಾರೆ.
ಕೋವಿಡ್ ತೆರಿಗೆಯಿಂದಾಗಿ ದೇಶೀಯ ನಿರ್ಮಿತ ಮದ್ಯಕ್ಕೆ 5 ರೂಪಾಯಿ, 180 ಎಂಎಲ್ ಮದ್ಯಕ್ಕೆ 10 ರೂಪಾಯಿ, 500 ಎಂಎಲ್ ಗೆ 20 ರೂಪಾಯಿ, 500ಎಂಎಲ್ ಕ್ಕಿಂತ ಹೆಚ್ಚಾಗಿದ್ದರೆ 30 ರೂಪಾಯಿ ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ ಎಂದು ವರದಿ ಹೇಳಿದೆ.
ವಿದೇಶಿ ಬ್ರ್ಯಾಂಡ್ ಮದ್ಯಕ್ಕೆ 180ಎಂಎಲ್ ಗೆ 100 ರೂಪಾಯಿ, 500 ಎಂಎಲ್ ಗೆ 200 ರೂಪಾಯಿ ಹಾಗೂ 500 ಎಂಎಲ್ ಕ್ಕಿಂತ ಹೆಚ್ಚಾಗಿದ್ದರೆ 400 ರೂಪಾಯಿ ಹೆಚ್ಚಳವಾಗಲಿದೆ ಎಂದು ಖನ್ನಾ ತಿಳಿಸಿದ್ದಾರೆ.
ಪೆಟ್ರೋಲ್ ಲೀಟರ್ ಮೇಲೆ ಹೆಚ್ಚುವರಿ 2 ರೂಪಾಯಿ ವ್ಯಾಟ್ ಹಾಗೂ ಡೀಸೆಲ್ ಪ್ರತಿ ಲೀಟರ್ ಮೇಲೆ ಒಂದು ರೂಪಾಯಿ ವ್ಯಾಟ್ ವಿಧಿಸಲಿದ್ದು, ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 2,070ಕೋಟಿ ರೂಪಾಯಿ ಆದಾಯ ಬರಲಿದೆ ಎಂದು ಹೇಳಿದರು.