ಲಕ್ನೋ: ಕೋವಿಡ್-19 ಸೋಂಕಿನಿಂದ ಉತ್ತರ ಪ್ರದೇಶ ರಾಜ್ಯದ ಸಚಿವೆ ಕಮಲಾ ರಾಣಿ ವರುಣ್ ನಿಧನ ಹೊಂದಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನ್ನ ಇಂದಿನ ಅಯೋಧ್ಯೆ ಭೇಟಿಯನ್ನು ರದ್ದು ಮಾಡಿದ್ದಾರೆ.
ಕಮಲ ರಾಣಿ ವರುಣ್ ಅವರ ನಿಧನಕ್ಕೆ ಸಂತಾಪ ಸೂಚಿಸುತ್ತೇನೆ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ಅವರ ಕುಟುಂಬಕ್ಕೆ ಕರುಣಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಯೋಗಿ ಸಂಪುಟದಲ್ಲಿ ಸಚಿವೆಯಾಗಿದ್ದ ಕಮಲಾ ರಾಣಿ ವರುಣ್ ಅವರಿಗೆ ಇತ್ತೀಚೆಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಇಂದು ಅವರು ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಐಸ್ ಕ್ರೀಮ್ ಸ್ಟಾಲ್ ಗೆ ಬಿಎಂಡಬ್ಲ್ಯೂ ಕಾರು ನುಗ್ಗಿಸಿದ ಫ್ಯಾಶನ್ ಡಿಸೈನರ್; ನಾಲ್ವರಿಗೆ ಗಾಯ
ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ವಿಚಾರಿಸುವ ಸಲುವಾಗಿ ಇಂದು ಆದಿತ್ಯನಾಥ್ ಅವರು ಆಯೋಧ್ಯೆಗೆ ಭೇಟಿ ನೀಡಲು ಯೋಜನೆ ಹಾಕಿಕೊಂಡಿದ್ದರು. ಆ. 5ರಂದು ರಾಮ ಮಂದಿರಕ್ಕೆ ಭೂಮಿಪೂಜೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.