ಆನಂದ್ : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಗುಜರಾತನ್ನು ಕಾಂಗ್ರೆಸ್ ಮುಕ್ತ ಮಾಡಲು ಜನರಿಗೆ ಮನವಿ ಮಾಡಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದ ಪ್ರಚಾರದ ಕೊನೆಯ ದಿನದಂದು ಆನಂದ್ ಜಿಲ್ಲೆಯ ಖಂಭತ್ ಪಟ್ಟಣದಲ್ಲಿ ಬಿಜೆಪಿ ರ್ಯಾಲಿಯನ್ನುದ್ದೇಶಿಸಿ ಅವರು ಮಾತನಾಡಿದ ಅವರು ಕಾಂಗ್ರೆಸ್ ಮುಕ್ತ ಮಾಡುವುದು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದರು.
”ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ಭದ್ರತೆಗೆ ಬೆದರಿಕೆ ಮತ್ತು ಅಭಿವೃದ್ಧಿಗೆ ತಡೆ” ಎಂದು ಕರೆದರು. ”ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಬೇಕೆಂದು ಮಹಾತ್ಮ ಗಾಂಧಿಯವರು ಒಮ್ಮೆ ಹೇಳಿದ್ದರು. ಈಗ ಅದನ್ನು ಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ಕಾಂಗ್ರೆಸ್ ಮುಕ್ತ ಗುಜರಾತ್ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದರು.
”ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಯುಪಿಯ ಜನರು ಕಾಂಗ್ರೆಸ್‌ಗೆ ಕೇವಲ ಎರಡು ಸ್ಥಾನಗಳನ್ನು ನೀಡಿದರು ಮತ್ತು ಎಎಪಿಗೆ ಶೂನ್ಯವನ್ನು ನೀಡಿದರು ”ಈ ಎರಡೂ ಪಕ್ಷಗಳು ಭದ್ರತೆಗೆ ಬೆದರಿಕೆ ಮತ್ತು ಅಭಿವೃದ್ಧಿ ಸಾಧಿಸಲು ತಡೆಗೋಡೆ ಎಂದು ಅವರಿಗೆ ತಿಳಿದಿತ್ತು” ಎಂದರು.
ಸ್ವಾತಂತ್ರ್ಯದ ನಂತರ ಗುಜರಾತ್‌ನಲ್ಲಿ ಸೋಮನಾಥ ದೇವಾಲಯ ಮತ್ತು ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿತ್ತು ಎಂದು ಆರೋಪಿಸಿದರು.
“ಇಂದು ಗುಜರಾತ್ ಕರ್ಫ್ಯೂ ಮತ್ತು ಗಲಭೆಗಳಿಂದ ಮುಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದವನ್ನು ಯಶಸ್ವಿಯಾಗಿ ತೊಡೆದುಹಾಕಿದೆ ಎಂದರು.
ಒಟ್ಟು 182 ಸ್ಥಾನಗಳ ಪೈಕಿ 89 ಸ್ಥಾನಗಳಿಗೆ ಡಿಸೆಂಬರ್ 1 ರಂದು ಮತದಾನ ನಡೆದಿದೆ. ಉಳಿದ 93 ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದೆ. ಮತಗಳ ಎಣಿಕೆ ಡಿಸೆಂಬರ್ 8 ರಂದು ನಡೆಯಲಿದೆ.