ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರ್ಜರಿ ಜಯದೊಂದಿಗೆ ಪುನರಾಯ್ಕೆಗೊಂಡ ಕೆಲವೇ ತಿಂಗಳುಗಳ ಬಳಿಕ ಭಾರೀ ಹಿನ್ನಡೆ ಅನುಭವಿಸುವಂತಾಗಿದೆ. ತಾನು ದಲಿತ ಎಂಬ ಕಾರಣದಿಂದ ಮೂಲೆಗುಂಪು ಮಾಡಲಾಗುತ್ತಿದೆ ಎಂದು ಆರೋಪಿಸಿ ದಿನೇಶ್ ಖಾಟಿಕ್ ಬುಧವಾರ (ಜುಲೈ20) ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇದನ್ನೂ ಓದಿ:ಉಪ್ಪುಂದ: ಚಾಕಲೇಟ್ ಗಂಟಲಲ್ಲಿ ಸಿಲುಕಿ 2ನೇ ತರಗತಿ ವಿದ್ಯಾರ್ಥಿನಿ ಸಾವು
ದಿನೇಶ್ ತಮ್ಮ ರಾಜೀನಾಮೆ ಪತ್ರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಳುಹಿಸಿದ್ದಾರೆ. ಮತ್ತೊಂದೆಡೆ ಸಚಿವ ಜಿತಿನ್ ಪ್ರಸಾದ್ ಸಿಎಂ ಯೋಗಿ ವಿರುದ್ಧ ಅಸಮಾಧಾನವ್ಯಕ್ತಪಡಿಸಿದ್ದು, ದೆಹಲಿಗೆ ತೆರಳಿರುವ ಬೆಳವಣಿಗೆ ನಡೆದಿದೆ.
ಭ್ರಷ್ಟಾಚಾರ, ಗೂಂಡಾಗಿರಿ ವಿರುದ್ಧ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಂತೆಯೇ ಸಚಿವ ಜಿತಿನ್ ಪ್ರಸಾದ್ ತೀವ್ರ ಅಸಮಧಾನವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.
ಕಳೆದ 100 ದಿನಗಳಿಂದ ತಮಗೆ ಯಾವುದೇ ಕೆಲಸವನ್ನು ನಿಯೋಜಿಸಿಲ್ಲ ಎಂದು ಉತ್ತರಪ್ರದೇಶದ ಜಲಸಂಪನ್ಮೂಲ ಸಚಿವ ದಿನೇಶ್ ಖಾಟಿಕ್ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಇಲಾಖೆಯ ವರ್ಗಾವಣೆಯಲ್ಲೂ ಅವ್ಯವಹಾರ ನಡೆದಿದೆ ಎಂದು ಆರೋಪಿಸಿದ್ದಾರೆ.
ನಾನು ದಲಿತ ಎಂಬ ಕಾರಣಕ್ಕೆ ನನಗೆ ಯಾವುದೇ ಕನಿಷ್ಠ ಗೌರವವನ್ನೂ ಕೊಟ್ಟಿಲ್ಲ. ನಾನೊಬ್ಬ ಸಚಿವನಾಗಿ ನನಗೆ ಯಾವುದೇ ಅಧಿಕಾರ ಇಲ್ಲದಂತಾಗಿದೆ. ಯಾವುದೇ ಸಭೆಗೂ ನನ್ನ ಆಹ್ವಾನಿಸುತ್ತಿರಲಿಲ್ಲ. ಇದು ದಲಿತ ಸಮುದಾಯಕ್ಕೆ ಮಾಡಿದ ಅವಮಾನವಾಗಿದೆ ಎಂದು ಖಾಟಿಕ್ ದೂರಿದ್ದಾರೆ.