Advertisement

ರಮೇಶ್‌ ಜಾರಕಿಹೊಳಿ ಭೇಟಿ ಮಾಡಿದ ಯೋಗೇಶ್ವರ್‌

11:25 PM May 14, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ ನಾಯಕರೊಂದಿಗೆ ಮುನಿಸಿಕೊಂಡು ಶಾಸಕ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ಗೋಕಾಕ್‌ ಶಾಸಕ ರಮೇಶ್‌ ಜಾರಕಿಹೊಳಿಯನ್ನು ಬಿಜೆಪಿಯ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

Advertisement

ಮಂಗಳವಾರ ಸೆವೆನ್‌ ಮಿನಿಸ್ಟರ್ ಕ್ವಾಟರ್ನಲ್ಲಿರುವ ರಮೇಶ್‌ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ ಮಧ್ಯಾಹ್ನ ಅವರ ಜತೆಯಲ್ಲಿಯೇ ಭೋಜನ ಸ್ವೀಕರಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅವರ ಭೇಟಿಯ ಬೆನ್ನಲ್ಲೇ ನೆಲಮಂಗಲದ ಮಾಜಿ ಶಾಸಕ ನಾಗರಾಜ್‌ ಕೂಡ ರಮೇಶ್‌ ಜಾರಕಿಹೊಳಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಮೇಶ್‌ ಜಾರಕಿಹೊಳಿ ಪಕ್ಷದ ನಾಯಕರ ಜತೆ ಮುನಿಸಿಕೊಂಡು ಬಂಡಾಯ ಸಾರಿ ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದ ಸಂದರ್ಭದಲ್ಲಿ ಸಿ.ಪಿ ಯೋಗೇಶ್ವರ್‌ ಮತ್ತು ನಾಗರಾಜ್‌ಗೆ ಬಂಡಾಯ ಶಾಸಕರ ನೋಡಿಕೊಳ್ಳುವ ಜವಾಬ್ದಾರಿ ವಹಿಸಲಾಗಿತ್ತು.

ಅದೇ ಕಾರಣಕ್ಕೆ ಈಗ ಮತ್ತೆ ಇಬ್ಬರೂ ಮಾಜಿ ಶಾಸಕರು ರಮೇಶ್‌ ಜಾರಕಿಹೊಳಿಯನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸೋಮವಾರ ಮಧ್ಯಾಹ್ನವೇ ಬೆಂಗಳೂರಿಗೆ ಆಗಮಿಸಿದ್ದ ರಮೇಶ್‌ ಜಾರಕಿಹೊಳಿ ಯಾರ ಭೇಟಿಗೂ ಅವಕಾಶ ನೀಡದೇ ಮನೆಯಲ್ಲಿಯೇ ಉಳಿದುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next