Advertisement

ಕಾಂಗ್ರೆಸ್ ಎಲ್ಲವನ್ನೂ ಕೊಟ್ಟಿದ್ದರೆ, ಮೋದಿ ಅಧಿಕಾರದಲ್ಲಿ ಇರುತ್ತಿರಲಿಲ್ಲ: ಯೋಗೇಂದ್ರ ಯಾದವ್

04:20 PM Mar 05, 2021 | Team Udayavani |

ಕಲಬುರಗಿ : ದೇಶದ ಜನರು ಏನೇ ಕೇಳಿದರೂ ಈ ಹಿಂದೆ ಕಾಂಗ್ರೆಸ್ ಮಾಡಿತ್ತೇ ಎಂದು ಪ್ರಧಾನಿ ಮೋದಿ ಪ್ರಶ್ನೆ ಮಾಡುತ್ತಾರೆ. ಕಾಂಗ್ರೆಸ್ ಎಲ್ಲವನ್ನೂ ಮಾಡಿದ್ದರೆ ಮೋದಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಸ್ವರಾಜ್ಯ ಇಂಡಿಯಾ ಅಧ್ಯಕ್ಷ ಯೋಗೇಂದ್ರ ಯಾದವ್ ಟೀಕಿಸಿದರು.

Advertisement

ನಗರದ ಎಪಿಎಂಸಿ ಗಂಜ್ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಬೆಂಬಲ ಬೆಲೆ ಕೊಡಿ ಆಂದೋಲನ’ ಉದ್ಘಾಟಿಸಿ ಮಾತನಾಡಿದ ಅವರು, ಬೆಂಬಲ ಬೆಲೆ ಕಾನೂನು ಕೊಡಿ ಎಂದು ರೈತರು ಮೋದಿ ಸರ್ಕಾರವನ್ನು ಕೇಳುತ್ತಿದ್ದಾರೆ. ಆದರೆ ಅಂದು ಕಾಂಗ್ರೆಸ್ ನವರು ಕೊಟ್ಟಿದ್ದರೆ ನೀವು ಅಧಿಕಾರಕ್ಕೆ ಬರುತ್ತಿರಲಿಲ್ಲ ಎಂದು ಗುಡುಗಿದರು.

ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ನಾಲ್ಕು ದಿಕ್ಕುಗಳಲ್ಲಿ ರೈತರು ಕುಳಿತಿದ್ದಾರೆ. ಇಂದಿಗೆ ನೂರು ದಿನಗಳು ಕಳೆದಿವೆ. ಈ ಆಂದೋಲನ ಮುಂದಿನ ಪೀಳಿಗೆಗಾಗಿ ನಡೆಯುತ್ತಿದೆ. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ಕೃಷಿ ಇರುತ್ತದೋ, ಇಲ್ಲವೋ ಎಂಬ ಸ್ಥಿತಿಯಲ್ಲಿ ನಾವು ಇದ್ದೇವೆ ಎಂದರು.

ಕಡಲೆಗೆ 5,100 ರೂ.  ಬೆಂಬಲ ಸಿಗಬೇಕು. ಆದರೆ, ಇಲ್ಲಿ ಈಗ 4,800 ರೂ.ಗೆ ಕಡಲೆ ಮಾರಾಟವಾಗುತ್ತಿದೆ. ಇದನ್ನು ನಾವು ಬೆಂಬಲ ಬೆಲೆ ಎಂದು ಕರೆಯಬೇಕಾ?. ಮೋದಿ ಅವರೇ ಬೆಂಬಲ ಬೆಲೆ ಕೊಡಿ ಎಂದು ಆಗ್ರಹಿಸಿದರು.

Advertisement

2011ರಲ್ಲಿ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ನೀವು ಆಗಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ಗೆ ಬೆಂಬಲ ಬೆಲೆ ಕಾನೂನು ಮಾಡಿ ಎಂದು ಪತ್ರ ಬರೆದಿದ್ದೀರಿ. ಆಗ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಹೇಳಿದ್ದ ಮಾತನ್ನೇ ನೀವು ಇಂದು ಕೇಳಿಕೊಳ್ಳಿ ಎಂದು ವ್ಯಂಗ್ಯವಾಡಿದರು.

ಮಾಜಿ ಉಪ ಸಭಾಪತಿ ಬಿ.ಆರ್.ಪಾಟೀಲ್ ಮಾತನಾಡಿ, ಕಲಬುರಗಿ ಜಿಲ್ಲೆಯ ಕುಡಗಿ ಗ್ರಾಮದಲ್ಲಿ ನೇರವಾಗಿ ರಿಲಯನ್ಸ್ ಕಂಪನಿಯವರು ಖರೀದಿ ಶುರು ಮಾಡಿದ್ದಾರೆ. ಹೀಗೆ ಪ್ರತಿ ಹಳ್ಳಿಯಲ್ಲಿ ಖಾಸಗಿ ಕಂಪನಿಗಳು ಖರೀದಿ ಮಾಡಿದರೆ, ಎಂಪಿಎಂಸಿಗೆ ಯಾರು ಬರುತ್ತಾರೆ.? ಎಂಪಿಎಂಸಿ ಮುಚ್ಚುತ್ತವೆ. ಆಗ ರೈತರು ಮಾತ್ರವಲ್ಲದೆ ಕೂಲಿ ಕಾರ್ಮಿಕರು, ಹಮಾಲಿಗಳು ಬೀದಿಗೆ ಬೀಳುತ್ತಾರೆ. ಅದೇ ರೀತಿ ರಾಜ್ಯದಲ್ಲಿ ಭೂ ಸುಧಾರಣೆ ತಿದ್ದುಪಡಿ ಕಾಯ್ದೆಯಿಂದ 108 ಎಕರೆ ಕೃಷಿ ಜಮೀನನ್ನು ಯಾರಾದರೂ ಖರೀದಿಸಬಹುದು. 108 ಎಕರೆ ಭೂಮಿ ಖರೀದಿಸುವ ಶಕ್ತಿ ಯಾವ ರೈತರಿಗೆ ಇದೆ.? ಆಗ ಕೃಷಿ ಜಮೀನು ಉಳ್ಳವರು ಪಾಲಾಗುವುದು ಖಚಿತ ಎಂದರು.

ಈ ವೇಳೆ ಬಿಹಾರದ ದೀಪಕ್ ಲಂಬಾ, ಪಂಜಾಬ್ ನ ಸದ್ದಾಂ ಸಿಂಗ್ , ಮಾಜಿ ಸಚಿವ ಡಾ.ಶರಣಪ್ರಕಾಶ ಪಾಟೀಲ್,  ಎಚ್ ಕೆಸಿಸಿಐ ಮಾಜಿ ಅಧ್ಯಕ್ಷ ಅಮರನಾಥ ಪಾಟೀಲ್, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚಾಮರಾಜ ಪಾಟೀಲ್, ಶರಣಬಸಪ್ಪ ಮಮಶೆಟ್ಟಿ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next