Advertisement

ಐದು ಲಕ್ಷ ಜನರಿಂದ ಏಕಕಾಲದಲ್ಲೇ ಯೋಗಥಾನ್:ಸಚಿವ ಡಾ.ನಾರಾಯಣ ಗೌಡ

06:50 PM Sep 02, 2022 | Vishnudas Patil |

ಬೆಂಗಳೂರು: ರೋಗ ಮುಕ್ತ ಕರ್ನಾಟಕ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಹಮ್ಮಿಕೊಂಡಿರುವ ಯೋಗಾಥಾನ್ ಯಶಸ್ವಿಗೊಳಿಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಸೂಚಿಸಿದರು.

Advertisement

ಇಂದು ವಿಕಾಸಸೌಧದಿಂದ ಜಿಲ್ಲಾಧಿಕಾರಿಗಳು, ಸಿಇಒಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸಿದ ಸಚಿವ ಡಾ.ನಾರಾಯಣಗೌಡ ಅವರು, ಸೆಪ್ಟೆಂಬರ್ 17 ರಂದು ನಡೆಯಲಿರುವ ಯೋಗಾಥಾನ್ ಕಾರ್ಯಕ್ರಮದ ಪೂರ್ವ ಸಿದ್ದತೆ ಬಗ್ಗೆ ಮಾಹಿತಿ ಪಡೆದುಕೊಂಡರು. ರೋಗ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಯೋಗಾಥಾನ್-2022 ನ್ನು ಅವರಿಗೆ ಡೆಡಿಕೇಟ್ ಮಾಡಲು ಹಾಗೂ ಗಿನ್ನೆಸ್ ರೆಕಾರ್ಡ್ ಮಾಡಲು ನಿರ್ಧರಿಸಲಾಗಿದೆ. ಏಕಕಾಲದಲ್ಲಿ ಐದು ಲಕ್ಷ ಜನರು ಯೋಗಾಸನ ಮಾಡಲಿದ್ದು ಅದಕ್ಕೆ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಕೂಡಲೇ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳನ್ನು ರಚಿಸಿ

ಮುಖ್ಯಮಂತ್ರಿಗಳ ಕನಸಿನ ಯೋಜನೆಯಾದ ಸ್ವಾಮಿ ವಿವೇಕಾನಂದ ಯುವ ಸ್ವಸಹಾಯ ಸಂಘಗಳನ್ನು ತ್ವರಿತವಾಗಿ ರಚನೆಗೊಳಿಸುವಂತೆ ಸಿಇಒಗಳಿಗೆ ಸಚಿವ ಡಾ.ನಾರಾಯಣಗೌಡ ಅವರು ಸೂಚಿಸಿದರು.

ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಸ್ವಾಮಿ ವಿವೇಕಾನಂದ ಸ್ವಸಹಾಯ ಗುಂಪುಗಳ ರಚನೆ ಮಾಡಬೇಕು. ಒಂದು ತಿಂಗಳಿನಲ್ಲಿ ಎಲ್ಲಾ ಪಂಚಾಯತ್‌ಗಳಲ್ಲಿ ಸಂಘ ರಚಿಸಿ, ನೋಂದಣಿ ಮಾಡಿಸಬೇಕು. ಸಂಘ ನೋಂದಣಿಯಾದ ತಕ್ಷಣವೆ 10 ಸಾವಿರ ಬಿಡುಗಡೆ ಮಾಡಲಾಗುವುದು. ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇದಾಗಿದ್ದು, ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಒಗಳಿಗೆ ಗಡುವು ನೀಡಿದರು.

Advertisement

ಇದೇ ವೇಳೆ ಕ್ರೀಡಾ ಅಂಕಣ ನಿರ್ಮಾಣ ಅನುಷ್ಠಾನದ ಪ್ರಗತಿ ಬಗ್ಗೆಯೂ ಸಚಿವ ಡಾ.ನಾರಾಯಣಗೌಡ ಅವರು ಮಾಹಿತಿ ಪಡೆದರು. ನರೇಗಾ ಮೂಲಕ 504 ಕೋಟಿ ವೆಚ್ಚದಲ್ಲಿ ಪ್ರತಿಗ್ರಾಮ ಪಂಚಾಯತ್‌ನಲ್ಲಿ ಕ್ರೀಡಾ ಅಂಕಣ ನಿರ್ಮಿಸಲು ಸೂಚಿಸಲಾಗಿದೆ. ಕ್ರೀಡಾ ಅಂಕಣ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಘೋಷಿಸಿದ್ದು, ಇದು ಸರ್ಕಾರದ ಮಹತ್ವದ ಯೋಜನೆಯಾಗಿದೆ. ಗ್ರಾಮೀಣ ಮಟ್ಟದ ಪ್ರತಿಭೆಗಳಿಗೆ ಸೂಕ್ತ ತರಬೇತಿ ಸಿಗಬೇಕು ಎಂಬ ನಿಟ್ಟಿನಲ್ಲಿ ಈ ಕ್ರೀಡಾ ಅಂಕಣ ಯೋಜನೆಯನ್ನು ಘೋಷಿಸಲಾಗಿದೆ. ಎಲ್ಲಾ ಕಡೆ ಶೀಘ್ರದಲ್ಲೇ ಕ್ರೀಡಾ ಅಂಕಣಗಳನ್ನು ನಿರ್ಮಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next